ಬಳ್ಳಾರಿ: ʻʻಕಂಪ್ಲಿಯ ಸಕ್ಕರೆ ಕಾರ್ಖಾನೆ ಸರ್ಕಾರದ ಒಡೆತನದಲ್ಲಿತ್ತು. ಆದರೆ ಸಚಿವ ಬಿ.ಶ್ರೀರಾಮುಲು (B Sriramulu), ಮಾಜಿ ಶಾಸಕ ಸುರೇಶ್ ಬಾಬು ಬೇನಾಮಿ ಹೆಸರಲ್ಲಿ ಅದನ್ನು ಕಬಳಿಸಿದ್ದಾರೆ. ಶ್ರೀರಾಮುಲು (B Sriramulu) ಅವರು ತಮ್ಮ ಪತ್ನಿಯ ಹೆಸರಿನಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಕಾನೂನುಬಾಹಿರವಾಗಿ ಕಬ್ಜಾ ಮಾಡಿದ್ದಾರೆʼʼ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕುರುಗೋಡಿನಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಬುಧವಾರ ನಡೆದ ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಬಾರಿ ಬಿಜೆಪಿ ಸೋಲುತ್ತದೆ. ಇದಲ್ಲದೇ ಶ್ರೀರಾಮುಲು(B Sriramulu), ಸುರೇಶಬಾಬು ಖಂಡಿತವಾಗಿಯೂ ಸೋಲುತ್ತಾರೆ. ಮೇಲಕ್ಕೆ ಹೋದವರು ಕೆಳಗಡೆ ಖಂಡಿತವಾಗಿ ಬರಲೇಬೇಕು ಎಂದರು.
ʻʻಕಂಪ್ಲಿ ಶಾಸಕ ಗಣೇಶ್ ಅವರಿಗೆ ನೀಡುವ ಒಂದೊಂದು ಮತ, ನನಗೆ ನೀಡುವ ಮತʼʼ ಎಂದು ಹೇಳಿದ ಅವರು, ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ ನೀಡುವ ಏಳು ಕೆಜಿ ಅಕ್ಕಿಯನ್ನು ನಾಲ್ಕು ಕೆಜಿಗೆ ಇಳಿಸಿದ್ದಾರೆ. ಕಾಂಗ್ರೆಸ್ ಅಧಿಕಾರ ವಹಿಸಿಕೊಂಡ ಮೇಲೆ ತಲಾ ಹತ್ತು ಕೆಜಿ ಅಕ್ಕಿ ನೀಡಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ: Jagadish Shettar: ಬಿಜೆಪಿಯ ಏಳು ಜನ ಮಂತ್ರಿಗಳ ಸಿಡಿ ಇವೆ; ಸ್ಟೇ ತಂದಿದ್ದು ಯಾಕೆಂದು ಅವರನ್ನೇ ಕೇಳಿ ಎಂದ ಜಗದೀಶ್ ಶೆಟ್ಟರ್
ಕಂಪ್ಲಿ ಶಾಸಕ ಗಣೇಶ್ ಅವರು ವಿರೋಧ ಪಕ್ಷದಲ್ಲಿ ಇದ್ದರೂ ಒಂದು ಸಾವಿರ ಕೋಟಿ ಅನುದಾನ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಗಣೇಶ್ ಆಡಳಿತ ಪಕ್ಷದ ಶಾಸಕರಾಗಲಿದ್ದಾರೆ. ಈ ಕ್ಷೇತ್ರಕ್ಕೆ ಐದು ಸಾವಿರ ಕೋಟಿ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು ಸಿದ್ದರಾಮಯ್ಯ.
ಪೂರ್ವದಲ್ಲಿ ಸೂರ್ಯ ಉದಯಿಸುವುದು ಎಷ್ಟು ಸತ್ಯನೋ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿಯುವುದು ಅಷ್ಟೇ ಸತ್ಯ, ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಜೆ.ಎನ್.ಗಣೇಶ್, ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಮುಖಂಡರಾದ ವೆಂಕಟೇಶ್ ಹೆಗಡೆ ಹಾಗೂ ಇತರರಿದ್ದರು.