ಗಂಗಾವತಿ: ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ದೇಶದ ಯಾವ ಭಾಗಕ್ಕೆ, ರಾಜ್ಯಕ್ಕೆ ಕಾಲಿಡುತ್ತಾರೋ ಅಲ್ಲೆಲ್ಲ ಕಾಂಗ್ರೆಸ್ (Congress) ಸರ್ವನಾಶವಾಗುತ್ತದೆ. ಇದರಿಂದ ಬಿಜೆಪಿಗೆ ಒಳಿತಾಗುತ್ತಿದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ಗಂಗಾವತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಪರವಾಗಿ ನಗರಕ್ಕೆ ಪ್ರಚಾರಕ್ಕೆ ಆಗಮಿಸಿದ್ದ ಅವರು ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಈ ಚುನಾವಣೆ ಬಳಿಕ ಸೋತು ಸುಣ್ಣವಾಗಲಿದೆ ಎಂದು ಭವಿಷ್ಯ ನುಡಿದರು.
ಇದನ್ನೂ ಓದಿ: PM in Karnataka: ಬಿಜೆಪಿ ಅಭ್ಯರ್ಥಿಗಳದು ಮೊದಲ ಚುನಾವಣೆ, ಅವರದು ಕೊನೆ ಚುನಾವಣೆ; ಸಿದ್ದುಗೇ ಹೇಳಿದ್ರಾ ಮೋದಿ?
ರಾಹುಲ್ ಗಾಂಧಿ , ಪ್ರಿಯಾಂಕಾ ಗಾಂಧಿ ಕಾಲಿಟ್ಟರೆ ಅದು ಬಿಜೆಪಿಗೆ ಶುಭ ಸಂಕೇತ. ಬಿಜೆಪಿಗೆ ಗೆಲುವಿನ ಸಂಕೇತ. ಉತ್ತರ ಪ್ರದೇಶ, ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಈ ಅಣ್ಣ-ತಂಗಿ ಜೋಡಿ ಅಲ್ಲಿ ಕಾಲಿಟ್ಟಿತು. ಅಲ್ಲಿ ಕಾಂಗ್ರೆಸ್ ಸರ್ವ ಪತನವಾಯಿತು. ಉತ್ತರ ಪ್ರದೇಶದಲ್ಲಿ ಕೇವಲ 17, ಗುಜರಾತ್‌ನಲ್ಲಿ ಎರಡು ಸ್ಥಾನ ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಅವರು ರಾಜ್ಯದಲ್ಲಿ ಪ್ರಚಾರ ಮಾಡಿದಷ್ಟು ಬಿಜೆಪಿಗೆ ಅನುಕೂಲವಾಗಲಿದೆ. ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಸ್ ಕಂಪೆನಿ
ಇನ್ನು ಕಾಂಗ್ರೆಸ್ ಪಕ್ಷವನ್ನು ಸರ್ಕಸ್ ಕಂಪೆನಿಗೆ ಹೋಲಿಸಿದ ಬಿ. ಶ್ರೀರಾಮುಲು, ಈ ಬಾರಿ ಕಾಂಗ್ರೆಸ್ ಸರ್ಕಸ್ ಕಂಪೆನಿಯನ್ನು ಬಿಜೆಪಿ ಕಾರ್ಯಕರ್ತರು ಬಂದ್ ಮಾಡಿಸುತ್ತಾರೆ. ಸಾಕಷ್ಟು ಸರ್ಕಸ್ ಕಂಪೆನಿಗಳಲ್ಲಿ ಜೋಕರ್‌ಗಳು ಪ್ರಧಾನ ಪಾತ್ರ ವಹಿಸುತ್ತಾರೆ ಎಂದ ಅವರು, ಪರೋಕ್ಷವಾಗಿ ರಾಹುಲ್ ಗಾಂಧಿಯನ್ನು ಜೋಕರ್‌ಗೆ ಹೋಲಿಸಿದರು.
ಜೋಕರ್‌ಗಳನ್ನು ಸಣ್ಣ ಮಕ್ಕಳಾದಿಯಾಗಿ ದೊಡ್ಡವರವರೆಗೂ ಬಯ್ಯುತ್ತಾರೆ. ಹೀಗಾಗಿ ಜೋಕರ್‌ಗಳೇ ತುಂಬಿರುವ ಕಾಂಗ್ರೆಸ್ ಸರ್ಕಸ್ ಕಂಪೆನಿಯನ್ನು ಈ ರಾಜ್ಯದ ಜನ ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಬಂದ್ ಮಾಡಿಸಲಿದ್ದಾರೆ ಎಂದು ಬಿ. ಶ್ರೀರಾಮುಲು ಹೇಳಿದರು.
ಮೋದಿಯನ್ನು ಟೀಕಿಸುತ್ತಿರುವುದು ಸರಿಯಲ್ಲ
ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಯ್ಯುವುದೇ ಕಾಂಗ್ರೆಸ್‌ನವರಿಗೆ ಕೆಲಸವಾಗಿದೆ. ನರೇಂದ್ರ ಮೋದಿಯನ್ನು ಬಯ್ದರೆ ತಾವು ದೊಡ್ಡವರಾಗುತ್ತೇವೆ ಎಂಬ ಕಲ್ಪನೆಯಲ್ಲಿ ಅನಗತ್ಯವಾಗಿ ಅವರನ್ನು ಟೀಕಿಸುತ್ತಿರುವುದು ಸರಿಯಲ್ಲ ಎಂದು ಬಿ. ಶ್ರೀರಾಮುಲು ಹೇಳಿದರು.
ಸಾರ್ವಜನಿಕ ವೇದಿಕೆಯಲ್ಲಿ ಸಭ್ಯತೆ ಮುಖ್ಯ
ದಲಿತ ಸಮಾಜದ ಬಹುದೊಡ್ಡ ನಾಯಕ ಖರ್ಗೆ ಅವರ ಬಾಯಿಯಲ್ಲಿ ಮೋದಿಯ ಬಗ್ಗೆ ಅಂಥಹ ಮಾತುಗಳು ಬರಬಹುದು ಎಂದು ನಾನು ನಿರೀಕ್ಷಿಸಿರಲಿಲ್ಲ. ಅತ್ತ ಕಾಂಗ್ರೆಸ್ ನವರು ಮೋದಿಯನ್ನು ವಿಷ ಸರ್ಪಕ್ಕೆ ಹೋಲಿಸಿದ್ದು, ಇತ್ತ ನಮ್ಮ ಯತ್ನಾಳ್ ಸೋನಿಯಾರನ್ನು ವಿಷಕನ್ಯೆ ಎಂದಿರುವುದು ಸರಿಯಲ್ಲ. ಸಾರ್ವಜನಿಕ ವೇದಿಕೆಯಲ್ಲಿ ಸಭ್ಯತೆ ಮುಖ್ಯ ಎಂದರು.
ಇದನ್ನೂ ಓದಿ: Karnataka Election 2023: ಮಡಿಕೇರಿಯಲ್ಲಿ ಅಮಿತ್ ಶಾ ರೋಡ್ ಶೋ ಅರ್ಧಕ್ಕೆ ಮೊಟಕು; ಇದಕ್ಕೇನು ಕಾರಣ?
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರೊಂದಿಗೆ ನನಗೆ ಈಗಲೂ ಸ್ನೇಹಿವಿದೆ. ಹಾಗಂತ ನಾನು ಪಕ್ಷವನ್ನು ಬಿಟ್ಟುಕೊಡಲಾರೆ. ಜನಾರ್ದನ ರೆಡ್ಡಿ ಮತ್ತು ಅವರ ಸ್ನೇಹಕ್ಕಿಂತ ನನಗೆ ಪಕ್ಷ ದೊಡ್ಡದು. ಇದೇ ಕಾರಣಕ್ಕೆ ರೆಡ್ಡಿ ಕ್ಷೇತ್ರವಾದರೂ ಗಂಗಾವತಿಯಲ್ಲಿ ಪರಣ್ಣ ಅವರ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ ಎಂದು ಶ್ರೀರಾಮುಲು ತಿಳಿಸಿದರು.