Site icon Vistara News

Karnataka Election 2023: ಮತದಾರರಿಗೆ ಸೀರೆ ಹಂಚಿದ ಮುನಿರತ್ನ ಬೆಂಬಲಿಗರು; ಸಚಿವರ ವಿರುದ್ಧ 3ನೇ ಎಫ್‌ಐಆರ್ ದಾಖಲು

minister-munirathna

ಬೆಂಗಳೂರು: ಜನರಿಗೆ ಸೀರೆ ಹಂಚಿದ ಆರೋಪದಡಿ ಸಚಿವ ಮುನಿರತ್ನ (Munirathna) ವಿರುದ್ಧ ಮತ್ತೊಂದು ಎಫ್‌ಐಆರ್‌ ನಗರದ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ. ಚುನಾವಣಾ ಆಯೋಗದ ಅಧಿಕಾರಿ ಮನೋಜ್‌ ಕುಮಾರ್‌ ನೀಡಿದ ದೂರಿನ ಮೇರೆಗೆ ಪ್ರಕರಣ (Karnataka Election 2023) ದಾಖಲಿಸಿಕೊಳ್ಳಲಾಗಿದೆ.

ರಾಜರಾಜೇಶ್ವರಿನಗರ ವಾರ್ಡ್‌ನ ಬಂಗಾರಪ್ಪನಗರದಲ್ಲಿ ಸಚಿವ ‌ಮುನಿರತ್ನ ಬೆಂಬಲಿಗರು ಮತದಾರರಿಗೆ ಸೀರೆ ಹಂಚುತ್ತಿರುವ ಕುರಿತು ಚರಣ್‌ ಹಾಗೂ ಚೇತನ್‌ ಎಂಬುವವರು ಮಾಹಿತಿ ನೀಡಿದ್ದರು. ಈ ಮಾಹಿತಿ ಮೇರೆಗೆ ಫ್ಲೈಯಿಂಗ್ ಸ್ಕ್ವಾಡ್ ಟೀಂ ದಾಳಿ ಮಾಡಿತ್ತು. ದಾಳಿ ನಡೆಸುತ್ತಿದ್ದಂತೆ ಸೀರೆ ಹಂಚುತ್ತಿದ್ದ ಇಬ್ಬರು ಬಿಜೆಪಿ ಕಾರ್ಯಕರ್ತರು ಪರಾರಿಯಾಗಿದ್ದರು.

ಮುನಿರತ್ನ ಭಾವಚಿತ್ರದ ಲೇಬಲ್‌ ಹೊಂದಿರುವ ಸೀರೆಗಳು ಪತ್ತೆ

ಸದ್ಯ ಪ್ರಕರಣ ಸಂಬಂಧ ಬಿಜೆಪಿ ಮುಖಂಡ ವಿ.ಸಿ‌ ಚಂದ್ರು A2 ಹಾಗೂ ಸಚಿವ ಮುನಿರತ್ನ A3 ‌ಆರೋಪಿಗಳಾಗಿದ್ದಾರೆ. ಸಚಿವ ಮುನಿರತ್ನ ವಿರುದ್ಧ ದಾಖಲಾದ ಮೂರನೇ ಎಫ್‌ಐಆರ್‌ ಇದಾಗಿದೆ. ಮತದಾರರ ಮನವೊಲಿಸಲು ಸೀರೆಗಳ ವಿತರಣೆ ಮೊರೆ ಹೋಗಿರುವ ಅವರು, ಈ ಕೆಲಸವನ್ನು ಪಕ್ಷದ ಕಾರ್ಯಕರ್ತರಿಗೆ ವಹಿಸಿದ್ದಾರೆ. ಈಗಾಗಲೇ ಹಲವಾರು ದಾಳಿ ನಡೆಸಿ ಎಲ್ಲ ಸೀರೆಗಳನ್ನು ರಾಜರಾಜೇಶ್ವರಿನಗರ ಪೋಲಿಸ್ ಠಾಣಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: Viral Video: 5 ಸೆಕೆಂಡ್‌ನಲ್ಲಿ 4 ಸುತ್ತು ಫೈರಿಂಗ್ ಮಾಡಿದ ಮದುಮಗಳು! ಯುಪಿ ಪೊಲೀಸರು ಮಾಡಿದ್ದೇನು?

ಕಳೆದ ಮಾರ್ಚ್‌ 31ರಂದು ಸಚಿವ ಮುನಿರತ್ನ ಸುದ್ದಿವಾಹಿನಿಯೊಂದರಲ್ಲಿ ಕ್ರೈಸ್ತ ಸಮುದಾಯವನ್ನು ಹೊಡೆದು ಓಡಿಸಿ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆ ಪ್ರಚೋದಕಾರಿ ಹೇಳಿಕೆ ನೀಡಿದ ಆರೋಪದಡಿ ಬೆಂಗಳೂರಿನ ಆರ್‌ಆರ್‌ನಗರ ಠಾಣೆಯಲ್ಲಿ ಮುನಿರತ್ನ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಇದೀಗ ಸೀರೆ ಹಂಚಿಕೆ ವಿಷಯಕ್ಕೆ ಮತ್ತೊಂದು ಎಫ್‌ಐಆರ್‌ ದಾಖಲಾಗಿದೆ.

Exit mobile version