Site icon Vistara News

Karnataka election 2023: ಮೇ 2ರಂದು ಪ್ರಧಾನಿ ಮೋದಿ ಬಳ್ಳಾರಿಗೆ; ಹತ್ತು ಕ್ಷೇತ್ರಗಳ ಅಭ್ಯರ್ಥಿಗಳ ಪರ ಪ್ರಚಾರ

Karnataka election 2023 PM Modi arrives on May 2

ವಿಜಯನಗರ: ಸಾರ್ವತ್ರಿಕ ವಿಧಾನಸಭಾ ಚುನಾವಣೆ (Karnataka election 2023) ಹಿನ್ನೆಲೆಯಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯ ಹತ್ತು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (prime minister narendra modi) ಮೇ 2ರಂದು ಆಗಮಿಸಲಿದ್ದಾರೆ. ಅಂದು ಮಧ್ಯಾಹ್ನ 2 ಗಂಟೆಗೆ ಸಾರ್ವಜನಿಕ ಸಮಾರಂಭ ಆಯೋಜಿಸಲಾಗಿದೆ ಎಂದು ಬಿಜೆಪಿಯ ಬಳ್ಳಾರಿ ವಿಭಾಗ ಪ್ರಭಾರಿ ಸಿದ್ದೇಶ್ ಯಾದವ್ ತಿಳಿಸಿದರು.

ಪ್ರಧಾನಮಂತ್ರಿ ನರೇಂದ್ರ‌ ಮೋದಿ (prime minister narendra modi) ಪ್ರವಾಸದ ಹಿನ್ನೆಲೆಯಲ್ಲಿ ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಹೊಸಪೇಟೆ ನಗರದ ಮುನ್ಸಿಪಲ್ ಮೈದಾನದಲ್ಲಿ ಸಮಾವೇಶ ಆಯೋಜಿಸಲಾಗಿದೆ. ಈ ಸಮಾವೇಶಕ್ಕೆ ಹತ್ತು ವಿಧಾನಸಭಾ ಕ್ಷೇತ್ರಗಳ 3 ಲಕ್ಷಕ್ಕೂ ಹೆಚ್ಚು ಜನತೆಯನ್ನು ಕರೆಸುವ ಯೋಜನೆ ರೂಪಿಸಲಾಗಿದೆ. ಅಂದು ಬೆಳಗ್ಗೆ ಚಿತ್ರದುರ್ಗದಲ್ಲಿ ಕಾರ್ಯಕ್ರಮದ ನಡೆಯಲಿದೆ. ನಂತರ ಮಧ್ಯಾಹ್ನ ಹೊಸಪೇಟೆಯಲ್ಲಿ ನಡೆಯಲಿದೆ. ಈ‌ ಹಿನ್ನೆಲೆಯಲ್ಲಿ ಕೂಡಲೇ ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಸಭೆ ನಡೆಸಬೇಕು. ಅತಿಹೆಚ್ಚು ಸಂಖ್ಯೆಯಲ್ಲಿ ಜನರನ್ನು ಕರೆತರಬೇಕು. ಆಯಾ ಕ್ಷೇತ್ರದ ಅಭ್ಯರ್ಥಿ ಗೆಲ್ಲಲು ಈ ಕಾರ್ಯಕ್ರಮ ಪೂರಕವಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ

ಮೋದಿ ಸರಳ ಆಪ್ ಮೂಲಕ ಪ್ರತಿ ಕ್ಷೇತ್ರದಲ್ಲಿ ಕನಿಷ್ಠ ಐದು ಸಾವಿರ ಜನರಿಗೆ ಈ ಆಪ್ ಡೌನ್‌ಲೋಡ್ ಮಾಡಿಸಿ ಮೋದಿಯವರ ಭಾಷಣ ಕೇಳಿಸಲಿದ್ದೇವೆ. ಇಡೀ ರಾಜ್ಯದಲ್ಲಿ ಒಟ್ಟು 52 ಲಕ್ಷ ಜನ ಈ ಭಾಷಣವನ್ನು ನೇರವಾಗಿ ಕೇಳಲಿದ್ದಾರೆ. ಮೋದಿ ಕಾರ್ಯಕ್ರಮಕ್ಕೆ ಪ್ರತಿ ಕ್ಷೇತ್ರದಿಂದ 25 ಸಾವಿರ ಜನರನ್ನು ಕರೆತರಬೇಕು. ಆ ಮೂಲಕ ನಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಮೋದಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನಾವೆಲ್ಲ ಶ್ರಮಿಸೋಣ ಎಂದು ಸೂಚಿಸಿದರು.

ಇದನ್ನೂ ಓದಿ: Karnataka election 2023: ಯುಪಿಯಲ್ಲಿ ಗಲಭೆಗಳೇ ಆಗಿಲ್ಲ ಎಂದ ಯೋಗಿ; 35040 ದಂಗೆಗಳಾಗಿವೆ ಎಂದು ಕಾಂಗ್ರೆಸ್ ಟ್ವೀಟ್!

ವಿವಿಧ ಭಾಗಗಳ ರಚನೆ

ಎರಡೂ ಜಿಲ್ಲೆಗಳ ಅಭ್ಯರ್ಥಿಗಳ ಪರ ನಡೆಯುವ ಮೋದಿಯವರ ಕಾರ್ಯಕ್ರಮ ಯಶಸ್ವಿಗೊಳಿಸಲು ವಿವಿಧ ವಿಭಾಗಗಳನ್ನು ರಚಿಸಲಾಗಿದೆ. ಆಯಾ ವಿಭಾಗದವರು ಸಕ್ರಿಯರಾಗಿ ಕೆಲಸ ನಿರ್ವಹಿಸುವ ಮೂಲಕ ಎಲ್ಲೂ ಕೂಡ ಕೊರತೆಯಾಗದಂತೆ, ಲೋಪಗಳಾಗದಂತೆ ಎಚ್ಚರವಹಿಸಿ ಸಮಾವೇಶ ಯಶಸ್ವಿಯಾಗಿ ಆಗುವಂತೆ ಎಲ್ಲರೂ ಶ್ರಮಿಸಬೇಕು ಎಂದು ತಿಳಿಸಿದರು.

ಬಳ್ಳಾರಿ ವಿಭಾಗ ಸಂಘಟನಾ ಕಾರ್ಯದರ್ಶಿ ಎಚ್. ಪೂಜಪ್ಪ ಮಾತನಾಡಿ, ಮೋದಿ ಅವರ ಕಾರ್ಯಕ್ರಮದ ದೃಷ್ಟಿಯಿಂದ ಯಾರಿಗೆಲ್ಲ ಜವಾಬ್ದಾರಿ ನೀಡಲಾಗಿದೆಯೋ ಅವರೆಲ್ಲರೂ ಚಾಚುತಪ್ಪದೆ ಸಕ್ರಿಯವಾಗಿ ಕೆಲಸ ನಿರತವಹಿಸುವ ಮೂಲಕ ಯಶಸ್ವಿಗೊಳಿಸೋಣ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷ ಗೆಲ್ಲುವಂತೆ ಶ್ರಮಿಸಬೇಕು. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಂತೆ ಮಾಡುವುದೊಂದೇ ನಮ್ಮ ಧ್ಯೇಯವಾಗಿರಬೇಕು ಎಂದು ತಿಳಿಸಿದರು. ಸಭೆಯಲ್ಲಿ ಬಿಜೆಪಿಯ ಜಿಲ್ಲಾ ಪ್ರಮುಖರು ಹಾಜರಿದ್ದರು.

Exit mobile version