ಗಂಗಾವತಿ: ಕನಕಗಿರಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ (Independent candidate) ರಮೇಶ ದಾಸರ ಅವರಿಗೆ ನಟ ಉಪೇಂದ್ರ ಸ್ಥಾಪಿತ ಉತ್ತಮ ಪ್ರಜಾಕೀಯ ಪಕ್ಷ ಬೆಂಬಲ ನೀಡುತ್ತಿದೆ ಎಂದು ಗಂಗಾವತಿ ಕ್ಷೇತ್ರದ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಶರಣಪ್ಪ ಸಿಂಗನಾಳ ಘೋಷಣೆ ಮಾಡಿದ್ದಾರೆ.
ನಗರದಲ್ಲಿ ಶುಕ್ರವಾರ ಈ ಕುರಿತಂತೆ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಕಗಿರಿ ಎಸ್ಸಿ ಮೀಸಲು ವಿಧಾನಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಮೇಶ ದಾಸರ ಅವರಿಗೆ ಪ್ರಜಾಕೀಯ ಬೆಂಬಲ ವ್ಯಕ್ತಪಡಿಸುತ್ತಿದೆ ಎಂದರು.
ಇದನ್ನೂ ಓದಿ:: Karnataka Election: ಬಿಜೆಪಿ, ಜೆಡಿಎಸ್ ಮೈತ್ರಿ ಕುರಿತು ಹೇಳಿಕೆ; ಪ್ರೀತಂ ಗೌಡಗೆ ಅಶ್ವತ್ಥ ನಾರಾಯಣ ಕ್ಲಾಸ್
ರಮೇಶ ದಾಸರ ಅವರು ಚುನಾವಣೆಗೆ ಆಯ್ದುಕೊಂಡಿರುವ ಮಾನದಂಡಗಳು ಮತ್ತು ಜನರನ್ನು ತಲುಪುತ್ತಿರುವ ವಿಭಿನ್ನ ಅಂಶಗಳು ಪ್ರಜಾಕೀಯದ ಭಾಗವಾಗಿಯೇ ಇವೆ. ಹೀಗಾಗಿ ನಮ್ಮ ಪಕ್ಷದ ತತ್ವ ಸಿದ್ಧಾಂತ ಮತ್ತು ರಮೇಶ ದಾಸರ ಅವರ ಸಿದ್ಧಾಂತ ಸಾಮ್ಯತೆ ಇದೆ.
ರಮೇಶ ದಾಸರ, ಕನಕಗಿರಿ ವಿಧಾನಸಭಾ ಕ್ಷೇತ್ರದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಬೇಕಿತ್ತು. ಆದರೆ ಪಕ್ಷದ ಬಿ.ಫಾರಂ ಪಡೆಯುವ ಸಂದರ್ಭದ ಕೊನೆಯ ಕ್ಷಣದಲ್ಲಿ ತಾಂತ್ರಿಕ ಕಾರಣಕ್ಕೆ ಕೈ ತಪ್ಪಿದೆ. ಹೀಗಾಗಿ ಪಕ್ಷದ ರಾಜ್ಯ ನಾಯಕರು ಮತ್ತು ಉಪೇಂದ್ರ ಅವರ ಗಮನಕ್ಕೆ ತಂದು ಕನಕಗಿರಿಯಲ್ಲಿ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಶರಣಪ್ಪ ಸಿಂಗನಾಳ ತಿಳಿಸಿದ್ದಾರೆ.