ಬಾಗಲಕೋಟೆ: ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಹಣದ ಹೊಳೆಯೇ ಹರಿಯುತ್ತಿದೆ. ಚುನಾವಣೆ ಪ್ರಚಾರಕ್ಕಾಗಿ ಅಭ್ಯರ್ಥಿಗಳು ಕೋಟಿ ಕೋಟಿ ರೂಪಾಯಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದಾರೆ. ಆದರೆ, ಖಾಕಿ ಹಾಗೂ ಚುನಾವಣಾಧಿಕಾರಿಗಳ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳುವುದು ಕಷ್ಟವಾಗುತ್ತಿದೆ. ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ಕೋಟಿ ಕೋಟಿ ರೂಪಾಯಿಯನ್ನು ಅಧಿಕಾರಿಗಳು ಜಪ್ತಿ ಮಾಡುತ್ತಿದ್ದಾರೆ.
ಇಲ್ಲಿನ ಲೋಕಾಪುರ ಪಟ್ಟಣದ ಲಕ್ಷಾನಟ್ಟಿ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ವೇಳೆ ದಾಖಲೆಯಿಲ್ಲದ ಕೋಟ್ಯಂತರ ರೂಪಾಯಿ ಹಣ ಪತ್ತೆ ಆಗಿದೆ. ಶುಕ್ರವಾರ ರಾತ್ರಿ ಐದು ಕೋಟಿ ಹಣವನ್ನು ಮುಧೋಳ ಚುನಾವಣಾಧಿಕಾರಿಗಳು, ಪ್ಲೈಯಿಂಗ್ ಸ್ಕ್ವಾಡ್ ಹಾಗೂ ಲೋಕಾಪುರ ಪೊಲೀಸರು ಜಪ್ತಿ ಮಾಡಿದ್ದಾರೆ.
ಬೊಲೆರೊ ವಾಹನದಲ್ಲಿ ಸುಮಾರು 5 ಕೋಟಿ ರೂಪಾಯಿಯನ್ನು ಸಾಗಾಟ ಮಾಡಲಾಗುತ್ತಿತ್ತು. ಹುಬ್ಬಳ್ಳಿಯಿಂದ ಮುಧೋಳ ಮಾರ್ಗವಾಗಿ ಸಾಗಿಸುವಾಗ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಜತೆಗೆ ವಾಹನದಲ್ಲಿದ್ದ ಐವರನ್ನು ವಶಕ್ಕೆ ಪಡೆಯಲಾಗಿದೆ. ಹುಬ್ಬಳ್ಳಿಯ ಯೂನಿಯನ್ ಬ್ಯಾಂಕ್‌ನಿಂದ ಮುಧೋಳ ಯೂನಿಯನ್ ಬ್ಯಾಂಕ್‌ಗೆ ಹಣವನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಯೂನಿಯನ್ ಬ್ಯಾಂಕ್‌ಗೆ ಸೇರಿದ ಹಣ ಎಂದು ಮಾಹಿತಿ ತಿಳಿದುಬಂದಿದೆ. ಸದ್ಯ ಸೂಕ್ತ ದಾಖಲೆ ನೀಡದ ಹಿನ್ನೆಲೆಯಲ್ಲಿ ಜಪ್ತಿ ಮಾಡಲಾಗಿದೆ.
ಕಾರಿನಲ್ಲಿ ಸಿಕ್ತು ಲಕ್ಷ ಲಕ್ಷ ಹಣ
ಇತ್ತ ಚಿತ್ರದುರ್ಗದ ಚಳ್ಳಕೆರೆಯ ರೋಜಾ ಡಾಬ ಬಳಿ ದಾಖಲೆ ಇಲ್ಲದ 10 ಲಕ್ಷದ 50 ಸಾವಿರ ರೂ. ಹಣವನ್ನು ಜಪ್ತಿ ಮಾಡಲಾಗಿದೆ. ಕಾರೊಂದರಲ್ಲಿ ಹಣವನ್ನು ಸಾಗಿಸುತ್ತಿದ್ದಾಗ ಎಸ್‌ಎಸ್‌ಟಿ ತಂಡ ಜಪ್ತಿ ಮಾಡಿದ್ದು, ಭಾಸ್ಕರ್ ರೆಡ್ಡಿ, ಶಂಕರ್ ಮೂರ್ತಿ ಎಂಬುವವರನ್ನು ತೀವ್ರ ವಿಚಾರಣೆ ಮಾಡಲಾಗುತ್ತಿದೆ. ಬಳ್ಳಾರಿ ಕಡೆಯಿಂದ ಬೆಂಗಳೂರಿಗೆ ತೆರಳುವಾಗ ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ಮಾಡುವಾಗ ಹಣ ಪತ್ತೆ ಆಗಿದೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.