ಬೆಂಗಳೂರು/ವಿಜಯನಗರ: ರಾಜ್ಯ ವಿಧಾನಸಭೆ ಚುನಾವಣೆಯ (Karnataka Election) ಮತದಾನ ಪ್ರಕ್ರಿಯೆಯು (Voting) ಬಿರುಸಿನಿಂದ ಸಾಗಿದೆ. ಮತದಾರ ಪ್ರಭುಗಳು ಮತ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ರಾಜಧಾನಿ ಬೆಂಗಳೂರಲ್ಲಿ ಅನಾರೋಗ್ಯ ಕಾಡುತ್ತಿದ್ದರೂ ಮತದಾನದ ಹೆಬ್ಬಯಕೆ ಹೊಂದಿದ್ದ ರೋಗಿಗಳ ಆಸೆಯನ್ನು ಪೂರೈಸಲಾಗಿದೆ.
ನಗರದ ಮಣಿಪಾಲ್ ಆಸ್ಪತ್ರೆಯು ಸುಮಾರು 18 ಮಂದಿ ಅನಾರೋಗ್ಯ ಪೀಡಿತರಿಗೆ ಮತದಾನ ಮಾಡಲು ಅನುವು ಮಾಡಿಕೊಡಲಾಯಿತು. ಯಶವಂತಪುರದಲ್ಲಿರುವ ಮಣಿಪಾಲ್ ಆಸ್ಪತ್ರೆಯು ತನ್ನ ರೋಗಿಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಿಕೊಟ್ಟಿತ್ತು. ಚುನಾವಣಾ ಆಯೋಗದ ಅನುಮತಿ ಮೇರೆಗೆ ಸ್ಟ್ರೆಚರ್ ಹಾಗೂ ವ್ಹೀಲ್‌ಚೇರ್‌ಗಳಲ್ಲಿ ರೋಗಿಗಳನ್ನು ಕರೆತಂದು ಮತದಾನ ಮಾಡಲಾಯಿತು.
ಕಾಲಿನಿಂದಲೇ ಹಕ್ಕು ಚಲಾಯಿಸಿದ ಮಹಿಳೆ
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಂಡುಮೊಣಗು ಗ್ರಾಮದಲ್ಲಿ ವಿಶೇಷ ಚೇತನ ಮಹಿಳೆಯೊಬ್ಬರು ಕಾಲಿನಿಂದ ಮತ ಚಲಾಯಿಸಿದ್ದಾರೆ. ಗುಂಡುಮುಣುಗು ಗ್ರಾಮದ ನಿವಾಸಿ ಲಕ್ಷ್ಮೀದೇವಿ ಮತ ಚಲಾವಣೆ ಮಾಡಿದ್ದಾರೆ. ಈ ಮೂಲಕ ಎಲ್ಲವೂ ಸರಿ ಇದ್ದು, ಮತಕೇಂದ್ರಕ್ಕೆ ಬಾರದವರಿಗೆ ಇವರು ಪ್ರೋತ್ಸಾಹದ ಮತದಾರರಾಗಿದ್ದಾರೆ.
ಕಾಲು ಬೆರಳಿಗೆ ಮತದಾನದ ಶಾಯಿ
ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕೊಳಗಲ್ಲು ಗ್ರಾಮದ ಮತಗಟ್ಟೆಯಲ್ಲಿ ಎರಡು ಕೈ ಇಲ್ಲದ ವಿಶೇಷ ಚೇತನರೊಬ್ಬರು ಮತದಾನ ಮಾಡಿದ್ದಾರೆ. ಕೊಳಗಲ್ಲು ಗ್ರಾಮದ ಮುಸ್ತಫಾ ಅವರು ಮತದಾನದ ಹಬ್ಬದಲ್ಲಿ ಭಾಗಿಯಾಗಿದ್ದಾರೆ. ಮುಸ್ತಫಾಗೆ ಎರಡೂ ಕೈ ಇಲ್ಲದ ಕಾರಣ ಚುನಾವಣಾ ಅಧಿಕಾರಿಗಳು ಕಾಲು ಬೆರಳಿಗೆ ಮತದಾನದ ಶಾಯಿ ಹಾಕಿದರು.
ಇದನ್ನೂ ಓದಿ: Karnataka election 2023: ರಾಜ್ಯದ ಏಕೈಕ ಮಂಗಳಮುಖಿ ಅಭ್ಯರ್ಥಿ ಕಂಪ್ಲಿ ಕ್ಷೇತ್ರದ ಟಿ.ರಾಮಕ್ಕ ಮತ ಚಲಾವಣೆ