ಉಡುಪಿ: ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿ, ಗೋ ಹತ್ಯಾ ನಿಷೇಧವನ್ನು ಸಮರ್ಪಕವಾಗಿ ಜಾರಿಗೊಳಿಸುವುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು (Karnataka Election 2023) ಮುಂದಿಟ್ಟಿದ್ದಾರೆ. ಕರಾವಳಿಯ ಸಾಧು ಸಂತರು. ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಸೋಮವಾರ ಉಡುಪಿಯಲ್ಲಿ ಸಾಧು ಸಂತರ ಜತೆ ನಡೆಸಿದ ಮಾತುಕತೆಯ ವೇಳೆ ಈ ಬೇಡಿಕೆಯನ್ನು ಮುಂದಿಡಲಾಯಿತು.
ಭಾನುವಾರ ರಾತ್ರಿಯೇ ಮಂಗಳೂರಿಗೆ ಬಂದಿದ್ದ ಜೆ.ಪಿ. ನಡ್ಡಾ ಅವರು ಸೋಮವಾರ ಬೆಳಗ್ಗೆ ಉಡುಪಿಗೆ ಆಗಮಿಸಿ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಶ್ರೀಕೃಷ್ಣ -ಮುಖ್ಯಪ್ರಾಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಅವರು ಪರ್ಯಾಯ ಕೃಷ್ಣಾಪುರ ಸ್ವಾಮೀಜಿಯನ್ನು ಭೇಟಿ ಮಾಡಿದರು. ಬಳಿಕ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಬಳಿಕ ಅವರು ಪೇಜಾವರ ಮಠದ ರಾಮ ವಿಠಲ ಸಭಾಭವನದಲ್ಲಿ ಕರಾವಳಿಯ ಪ್ರಮುಖ ಸಂತರ ಜತೆ ಚರ್ಚೆ ನಡೆಸಿದರು. ಸಮಾಲೋಚನೆಯಲ್ಲಿ ಪೇಜಾವರ ಶ್ರೀಗಳು, ಪುತ್ತಿಗೆ ಶ್ರೀಗಳು, ಸುಬ್ರಮಣ್ಯ ಮಠದ ಸ್ವಾಮೀಜಿ, ಮಾಣಿಲ ಸ್ವಾಮೀಜಿ, ವಜ್ರದೇಹಿ ಸ್ವಾಮೀಜಿ, ಚಿತ್ರಾಪುರ ಮಠಾಧೀಶರು, ರಾಮಕೃಷ್ಣ ಆಶ್ರಮದ ಸ್ವಾಮಿಗಳು ಭಾಗಿಯಾಗಿದ್ದರು.
ಈ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸಮ್ಮುಖದಲ್ಲಿ ಕರಾವಳಿಯ ಸ್ವಾಮೀಜಿಗಳು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಜೆ.ಪಿ ನಡ್ಡಾ ಸಭೆ ನಂತರ ಮಾತನಾಡಿದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಸಭೆಯಲ್ಲಿ ಮುಂದಿಟ್ಟ ಬೇಡಿಕೆಗಳ ಬಗ್ಗೆ ವಿವರಣೆ ನೀಡಿದರು.
ಸಭೆಯಲ್ಲಿ ಜೆ.ಪಿ. ನಡ್ಡಾ ಮುಂದಿಟ್ಟ ಬೇಡಿಕೆಗಳು
೧. ಸನಾತನ ಧರ್ಮ ಸಂಸ್ಕೃತಿ ಸದ್ವಿಚಾರಗಳಿಗೆ ಸದಾ ಮನ್ನಣೆ ನೀಡಬೇಕು.
೨. ರಾಜ್ಯದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ಕ್ರಮ ಕೈಗೊಳ್ಳಿ
೩. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಆದ್ಯತೆ ನೀಡುವುದು
೪. ಕರಾವಳಿಯ ಸಮೃದ್ಧ ಪ್ರಾಕೃತಿಕ ಮತ್ತು ಸಾಂಸ್ಕೃತಿಕ ಧಾರ್ಮಿಕ ಸಂಪನ್ಮೂಲಗಳಿಗೆ ಹಾನಿಯಾಗಬಾರದು.
೫. ಉದ್ಯಮದ, ಕರಾವಳಿ ಪ್ರಗತಿಗೆ ಯೋಜನೆಗಳನ್ನು ಅನುಷ್ಠಾನಿಸುವುದು.
೬. ಕರಾವಳಿ ಯುವಕರ ವಲಸೆಯನ್ನು ತಪ್ಪಿಸಬೇಕು.
೭. ಸರಕಾರ ತುಳು ಭಾಷೆಗೆ ಸೂಕ್ತ ಮಾನ್ಯತೆ ನೀಡಬೇಕು.
೮. ದೇಶದ್ರೋಹಿ ಮತ್ತು ಉಗ್ರವಾದಿ ಚಟುವಟಿಕೆಗಳನ್ನು ಮಟ್ಟ ಹಾಕಬೇಕು.
೯. ಕರಾವಳಿ ಮಲೆನಾಡು ಜಿಲ್ಲೆಗಳನ್ನು ಕೇಂದ್ರವಾಗಿಟ್ಟುಕೊಂಡು ರಾಷ್ಟ್ರೀಯ ತನಿಖಾ ದಳದ ವಿಭಾಗವನ್ನು ಶೀಘ್ರ ಆರಂಭಿಸುವುದು.
೧೦. ಗೋ ಹತ್ಯಾ ನಿಷೇಧ ಕಾನೂನು ಸಮರ್ಪಕ ಜಾರಿಗೆ ತನ್ನಿ.
೧೧. ಗೋಸಂರಕ್ಷಣೆಗೆ ಪೂರಕ ಯೋಜನೆಗಳಿಗೆ ನೆರವು ನೀಡುವುದು.
೧೨. ಭ್ರಷ್ಟಾಚಾರ ಮುಕ್ತ, ಸ್ವಚ್ಛ, ಪಾರದರ್ಶಕ ಆಡಳಿತ ನೀಡುವುದು.
೧೩. ದೇವಸ್ಥಾನಗಳ ಭೂಮಿ ಅತಿಕ್ರಮಣ ತಡೆಗಟ್ಟಲು ಕ್ರಮಕೈಗೊಳ್ಳುವುದು.
ಇಂದು ಬೇರೇನು ಕಾರ್ಯಕ್ರಮಗಳು
ಜೆ.ಪಿ. ನಡ್ಡಾ ಅವರು ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆಯಲಿರುವ ಭಾರತೀಯ ಜನತಾ ಪಕ್ಷದ ಉಡುಪಿ ಜಿಲ್ಲೆ ಬೂತ್ ಕಮಿಟಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸಮಾವೇಶದಲ್ಲಿ ಜಿಲ್ಲೆಯ 1,111 ಬೂತ್ ಸಮಿತಿಗಳ ತಂಡದ 13,332 ಸದಸ್ಯರು ಪೂರ್ಣ ಪ್ರಮಾಣದಲ್ಲಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಫೆ.16ರಂದು ಕಾಪು, ಕಾರ್ಕಳ, ಫೆ.17ರಂದು ಬೈಂದೂರು, ಕುಂದಾಪುರ, ಉಡುಪಿ ನಗರ, ಉಡುಪಿ ಗ್ರಾಮಾಂತರ ಮಂಡಲಗಳ ಸಭೆ ನಡೆದಿದೆ.
ಸಮಾವೇಶದ ಬಳಿಕ ಮಧ್ಯಾಹ್ನ 1:35ಕ್ಕೆ ಆದಿ ಉಡುಪಿ ಹೆಲಿಫ್ಯಾಡ್ ಮೂಲಕ ಬೈಂದೂರು ವಿಧಾನಸಭಾ ಕ್ಷೇತ್ರದ ಮುಳ್ಳಿಕಟ್ಟೆ ಮೈದಾನದಲ್ಲಿ ಆಯೋಜಿಸಲಾಗಿರುವ ವಿಜಯ ಸಂಕಲ್ಪ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸಮಾವೇಶಕ್ಕೂ ಮೊದಲು ರೋಡ್ ಶೋ ನಡೆಯಲಿದೆ. ಕಾರ್ಯಕರ್ತರ ಹಾಗೂ ಸಾರ್ವಜನಿಕರ ಸಮಾವೇಶದಲ್ಲಿ ಸುಮಾರು 20,000 ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ಸಮಾವೇಶದಲ್ಲಿ ಜೆ.ಪಿ.ನಡ್ಡಾ ಅವರು ಚುನಾವಣಾ ತಯಾರಿ ಬಗ್ಗೆ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ. ಸಮಾವೇಶದ ಬಳಿಕ ಸಂಜೆ 3.40 ಕ್ಕೆ ತ್ರಾಸಿ ಹೆಲಿಪ್ಯಾಡ್ ಮೂಲಕ ಚಿಕ್ಕಮಗಳೂರು ತಾಲೂಕು ಕೊಪ್ಪ ಪಟ್ಟಣಕ್ಕೆ ತೆರಳಲಿದ್ದಾರೆ.
ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಕೊಪ್ಪ ಪಟ್ಟಣದಲ್ಲಿ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಭಾಗವಹಿಸಲಿದ್ದು, ಸುಮಾರು 15 ಸಾವಿರಕ್ಕೂ ಅಡಿಕೆ ಬೆಳೆಗಾರರು ಹಾಗೂ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ಕೊಪ್ಪದಲ್ಲಿ ಅಡಿಕೆ ಬೆಳೆಗಾರರ ಸಮಾವೇಶದ ಬಳಿಕ ರಸ್ತೆಯ ಮೂಲಕ ಶೃಂಗೇರಿಗೆ ತೆರಳಿ ಶಾರದಾಂಬೆಯ ದರ್ಶನ ಪಡೆಯಲಿದ್ದಾರೆ. ನಂತರ ಭಾರತಿ ತೀರ್ಥ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಚನ ಪಡೆಯಲಿದ್ದಾರೆ.
ಬಳಿಕ ಮಂಗಳವಾರವೂ(ಫೆ.21) ಚಿಕ್ಕಮಗಳೂರಿನಲ್ಲಿ ತಂಗುವ ಜೆಪಿ ನಡ್ಡಾ ಶಾಸಕ ಸಿಟಿ ರವಿ ಮನೆಯಲ್ಲಿ ಉಪಾಹಾರ ಸೇವಿಸಿ ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ಸ್ಥಳೀಯ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ.
ಇದನ್ನೂ ಓದಿ : Love jihad: ಲವ್ ಜಿಹಾದ್ ವ್ಯಾಖ್ಯಾನದ ಬಗ್ಗೆ ಸಂಶಯವಿದ್ದರೆ ನಾವು ಹೇಳ್ತೇವೆ: ಆರಗ ಜ್ಞಾನೇಂದ್ರಗೆ ಸಿ.ಟಿ.ರವಿ ಸಲಹೆ