ಚಾಮರಾಜನಗರ, ಕರ್ನಾಟಕ: ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಹಾಗೂ ಜೆಡಿಎಸ್ ಅಭ್ಯರ್ಥಿ ಆಲೂರು ಮಲ್ಲು ನಡುವಿನ ಸಂಭಾಷಣೆಯ ಆಡಿಯೋ ಕುರಿತು ವಿಸ್ತಾರ ನ್ಯೂಸ್ ಗೆ ಸ್ಪಷ್ಟನೆ ನೀಡಿದ ಚಾಮರಾಜನಗರ ಜೆಡಿಎಸ್ ಅಭ್ಯರ್ಥಿ ಆಲೂರು ಮಲ್ಲು, ಸೋಮಣ್ಣ ಅವರು ಕರೆ ಮಾಡಿ, ನಾಮಪತ್ರ ವಾಪಸ್ ಪಡೆಯಲು ಹಣದ ಆಮಿಷ ಒಡ್ಡಿದರು ಎಂದು ತಿಳಿಸಿದ್ದಾರೆ. ಈ ಪ್ರಕರಣ ಕುರಿತು ಚುನಾವಣಾ ಆಯೋಗಕ್ಕೆ ವಂದೇ ಮಾತರಂ ಸಮಾಜಸೇವಾ ಸಂಘಟನೆ ಅಧ್ಯಕ್ಷ ಸಿಎಂ ಶಿವಕುಮಾರ್ ನಾಯಕ್ ಅವರು ದೂರು ನೀಡಿದ್ದಾರೆ. ಈ ನಡುವೆ, ಈ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು, ”ಗೂಟದ ಕಾರು ಅಂದರೆ ಏನು? ಪ್ರೈವೇಟ್ ಕಾರ್ ತಗೊಂಡು ಗೂಟಾ ಇಟ್ಟುಕೊಡ್ತಾರಾ” ಎಂದು ವ್ಯಂಗ್ಯ ಮಾಡಿದ್ದಾರೆ(Karnataka Election 2023).
Karnataka Election 2023: ಜೆಡಿಎಸ್ ಅಭ್ಯರ್ಥಿ ಆಲೂರು ಮಲ್ಲು ಹೇಳಿದ್ದೇನು?
ನಾಮಪತ್ರ ವಾಪಸ್ ಪಡೆಯಲು ಕೇವಲ ಒಂದು ಗಂಟೆ ಅಷ್ಟೇ ಬಾಕಿ ಇತ್ತು. ಆಗ(ಸೋಮಣ್ಣ) ಕಾಲ್ ಮಾಡಿದ್ರು. ನೀನು ನಾಮಪತ್ರ ವಾಪಸ್ ತೆಗಿ. ನಿನಗೆ ನಿಗಮ ಮಂಡಳಿ ಕೊಡ್ತೀನಿ. 50 ಲಕ್ಷ ದುಡ್ಡು ಕೂಡ ಕೊಡ್ತೀನಿ ಅಂತ ಹೇಳಿದ್ದು ನಿಜ. ಇವಾಗ ಬೇಗ ನೀನು ನಾಮಪತ್ರ ತೆಗಿ ಎಂದು ಒರಟು ಭಾಷೆಯಲ್ಲಿ ಮಾತನಾಡಿದ್ರು. ಅದು ನನಗೆ ನೋವಾಯಿತು. ಸೋಮಣ್ಣ ಸೋಲುವ ಭಯದಿಂದ ನನಗೆ ಹಣದ ಆಮಿಷ ಒಡ್ಡಿದರು.
ನನ್ನ ಹಿಂದೆ ಯಾವ ವ್ಯಕ್ತಿಯೂ ಇಲ್ಲ. ಯಾರ ಒಬ್ಬ ವ್ಯಕ್ತಿಯ ಮಾತು ಕೇಳಿ ನೀನು ನಿಂತಿದ್ದಿಯ ಎನ್ನುತ್ತಿದ್ದಾರೆ ಅದೆಲ್ಲ ಸುಳ್ಳು. ಕೆಆರ್‌ಐಡಿಎಲ್ ಅಧ್ಯಕ್ಷ ರುದ್ರೇಶ್ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ ಆದ್ರೆ ಅದು ಸುಳ್ಳು. ಅವರ ಜತೆ ನಾನು ಒಂದು ದಿನ ಕೂಡ ಕಾಣಿಸಿಕೊಂಡಿಲ್ಲ. ಕೊನೆ ದಿನ ಮಾತ್ರ ಪತ್ರಿಕಾಗೋಷ್ಠಿಯಲ್ಲಿ ಭೇಟಿ ಮಾಡ್ದೆ ಅಷ್ಟೇ. ಎಲ್ಲರೂ ಸುಮ್ಮನೆ ಪಿತೂರಿ ಮಾಡುತ್ತಿದ್ದಾರೆ. ನಾನು ಜೆಡಿಎಸ್ ಇಂದ ಸ್ಪರ್ದೆ ಮಾಡಿದ್ದೇನೆ. ನಾನು ಗೆದ್ದೇ ಗೆಲ್ಲುತ್ತೇನೆ. ಸೋಮಣ್ಣ ಮಾತನಾಡುವುದು ಸರಿ ಇಲ್ಲ.
ಗುಂಡ್ಲುಪೇಟೆಯಲ್ಲಿಯೇ ಏನಾಯ್ತು ಅಂತ ಎಲ್ಲರಿಗೂ ಗೊತ್ತಿದೆ. ಮಹಿಳೆಗೆ ಕಪಾಳ ಮೋಕ್ಷ ಮಾಡಿ ಅದನ್ನ ಇಲ್ಲ ಎಂದು ಸಮರ್ಥನೆ ಮಾಡಿಕೊಂಡರು. ಆದ್ದರಿಂದ ಸೋಮಣ್ಣ ಅವರ ಮೇಲೆ ಯಾರಿಗೂ ಪ್ರೀತಿ ಇಲ್ಲ. ಸೋಮಣ್ಣ ಹೊರಗಡೆಯ ವ್ಯಕ್ತಿ ನಾನು ಸ್ಥಳಿಕ. ಸೋಮಣ್ಣ ಮಾತಿಗೆ ನಿಲ್ಲಲ್ಲ. ಬರೀ ಸುಳ್ಳು ಹೇಳೋದು ಅವರ ಕೆಲ್ಸ. ಯಾರಿಗೂ ಸಹಾಯ ಮಾಡಲ್ಲ. ಬೆಂಗಳೂರಿಗೆ ಬನ್ನಿ ಅಂತ ಹೇಳೋದು ಅಲ್ಲಿಗೆ ಹೋದ್ರೆ ಯಾಕೆ ಬಂದಿದ್ದೀರಾ ಎನ್ನೋದು. ಯಾಕೆ ಇವೆಲ್ಲ ಬೇಕು ಪ್ರಾಮಾಣಿಕತೆಯಿಂದ ಕೆಲ್ಸ ಮಾಡ್ಬೇಕು.
ಗೂಟದ ಕಾರು ಅಂದರೇನು- ಎಚ್ ಡಿ ಕುಮಾರಸ್ವಾಮಿ
ಚಾಮರಾಜನಗರ ಜೆಡಿಎಸ್ ಅಭ್ಯರ್ಥಿ ಆಲೂರು ಮಲ್ಲು ಅವರಿಗೆ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಹಣದ ಆಮಿಷ ಒಡ್ಡಿದ ಬಗ್ಗೆ ಪ್ರತಿಕ್ರಿಯಿಸಿರುವ ಎಚ್ ಡಿ ಕುಮಾರಸ್ವಾಮಿ ಅವರು, ಗೂಟದ ಕಾರು ಅಂದರೆ ಏನು? ಪ್ರೈವೇಟ್ ಕಾರ್ ತಗೊಂಡು ಗೂಟಾ ಇಟ್ಟುಕೊಡ್ತಾರಾ? ಕಾಂಗ್ರೆಸ್ ನಾಯಕರು ನೋಡಿದ್ರೆ ಬಿಜೆಪಿ ಶವಯಾತ್ರೆ ಅಂತಾರೆ. ಇವರು ನೋಡಿದ್ರೆ ಗೂಟದ ಕಾರ್ ಅಂತಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
ಕಾರ್ ಕೊಡೋದು, ಹಣ ಆಮಿಷ ಈಗ ವರ್ಕ್ ಆಗಲ್ಲ. ಸೋಮಣ್ಣ ಬಳಸಿದ ಭಾಷೆ ನಮಗೆ ಗೊತ್ತಿಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಆತಂಕ ಶುರುವಾಗಿದೆ. ಇವತ್ತಿನ ಸ್ಥಿತಿ ನೋಡಿದ್ರೆ ನಮಗೆ ಅರ್ಥ ಆಗುತ್ತೆ. ಜೆಡಿಎಸ್ ಈ ಬಾರಿ ಎರಡು ಪಕ್ಷಕ್ಕಿಂದ ಮುಂದೆ ಹೋಗುತ್ತೇವೆ. 123 ಗುರಿಗೆ ನಮಗೆ ಸ್ವಲ್ಪ ಆರ್ಥಿಕ ಸಮಸ್ಯೆ ಇದೆ. ಆರ್ಥಿಕ ಕೊರತೆಯಿಂದ ನಮಗೆ ಸ್ವಲ್ಪ ಹಿನ್ನಡೆ ಆಗಬಹುದು. ಆದರೆ, ನಮಗೆ ಜನತೆ ಬೆಂಬಲದಲ್ಲಿ ನಂಬಿಕೆ ಇದೆ. 123 ಗುರಿ ನಾವು ತಲುಪುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ವಿರುದ್ಧ ಆಯೋಗಕ್ಕೆ ದೂರು
ಜೆಡಿಎಸ್ ಅಭ್ಯರ್ಥಿ ಆಲೂರು ಮಲ್ಲು ಅವರಿಗೆ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅವರು ಹಣದ ಆಮಿಷವೊಡ್ಡಿದ ಆಡಿಯೋ ವೈರಲ್ ಆದ ಬೆನ್ನಲ್ಲೇ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ. ವಂದೇ ಮಾತರಂ ಸಮಾಜ ಸೇವಾ ಸಂಘಟನೆಯ ಅಧ್ಯಕ್ಷ ಸಿ ಎಂ ಶಿವಕುಮಾರ್ ನಾಯಕ್ ಎಂಬುವವರು ಈ ದೂರು ನೀಡಿದ್ದಾರೆ. ಮತ್ತೊಂದೆಡೆ, ವಿ ಸೋಮಣ್ಣ ಅವರನ್ನು ಚುನಾವಣೆಗೆ ಸ್ಪರ್ಧಿಸದಂತೆ ಕನ್ನಡಪರ ಸಂಘಟನೆಗಳ ದೂರು ದಾಖಲಿಸಿವೆ. ಜೆಡಿಎಸ್ ಅಭ್ಯರ್ಥಿ ಆಲೂರು ಮಲ್ಲು ಅವರ ಕಣದಿಂದ ಹಿಂದೆ ಸರಿಯಲು 50 ಲಕ್ಷ ರೂ. ಆಮಿಷ ಒಡ್ಡಿದ ಆರೋಪವನ್ನು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರು ಎದುರಿಸುತ್ತಿದ್ದಾರೆ.