ಕಾರಟಗಿ: ಸಾರ್ವತ್ರಿಕ ವಿಧಾನಸಭಾ ಚುನಾವಣೆ (Karnataka election 2023) ಹಿನ್ನೆಲೆಯಲ್ಲಿ ತಾಲೂಕಿನ ಬೆನ್ನೂರು ತಾಂಡಾದಲ್ಲಿ ತಾಲೂಕು ಸ್ವೀಪ್ ಸಮಿತಿ ಹಾಗೂ ಗ್ರಾಮ ಪಂಚಾಯತಿ ವತಿಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ತಾಂಡಾ ಮಹಿಳೆಯರು ಹಾಡಿನೊಂದಿಗೆ ನೃತ್ಯ ಮಾಡಿ, ಪ್ರಜಾಪ್ರಭುತ್ವ ಹಬ್ಬದಲ್ಲಿ ನಾವೆಲ್ಲರೂ ಪಾಲ್ಗೊಳ್ಳುತ್ತೇವೆ ಎಂದು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಭಾಗ್ಯೇಶ್ವರಿ ಮಾತನಾಡಿ, ಮತಗಟ್ಟೆಗೆ ತೆರಳಿ ಮತ ಚಲಾಯಿಸಿ, ಸಂವಿಧಾನಾತ್ಮಕವಾಗಿ ಮತ ಹಾಕುವುದು ನಮ್ಮ ಕರ್ತವ್ಯ, ತಾಂಡದವರು ಯಾರು ಮತದಾನದಿಂದ ಹೊರಗುಳಿಯಬಾರದು. ನಮ್ಮ ಗ್ರಾಮ ಪಂಚಾಯತಿಯು ಶೇ.100 ರಷ್ಟು ಮತದಾನವಾಗಲು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಿಳಿಸಿದರು. ನಂತರ ಮತದಾನ ಕುರಿತು ಪ್ರತಿಜ್ಞಾವಿಧಿ ಭೋದಿಸಲಾಯಿತು.
ಹಿರಿಯ ನಾಗರಿಕರು ಕೂಡಾ ಸಾಂಪ್ರದಾಯಿಕ ಶೈಲಿಯ ಉಡುಪು ತೊಟ್ಟು, ಜಾಗೃತಿ ಕಾರ್ಯಕ್ರಮಕ್ಕೆ ಆಗಮಿಸಿದ್ದು ಪ್ರಮುಖ ಕೇಂದ್ರ ಬಿಂದುವಾಗಿತ್ತು.
ಗಮನ ಸೆಳೆದ ಜಾಥಾ
ಮತದಾನದ ಜಾಗೃತಿ ಫಲಕಗಳನ್ನು ಹಿಡಿದು, ಮತದಾನದ ಗೀತೆಗಳನ್ನು ಪ್ರಚುರ ಪಡಿಸುವ ಮೂಲಕ ತಾಂಡದ ಪ್ರಮುಖ ಕಡೆ ಸಂಚರಿಸಿ, ಜಾಗೃತಿ ಮೂಡಿಸಿದರು. ತದ ನಂತರ ಮೇಣದ ಬತ್ತಿ ಬೆಳಗಿಸುವ ಮೂಲಕ ಕಡ್ಡಾಯವಾಗಿ ಮತದಾನ ಮಾಡುವಂತೆ ತಿಳಿಸಲಾಯಿತು.