ಗಂಗಾವತಿ: ವಿಧಾನಸಭಾ ಚುನಾವಣೆಯಲ್ಲಿ (Karnataka election 2023) ಬಿಜೆಪಿ ಪರ ಪ್ರಚಾರಕ್ಕಾಗಿ ಏ.30 ರಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಗಂಗಾವತಿ ನಗರಕ್ಕೆ ಆಗಮಿಸಲಿದ್ದಾರೆ ಎಂದು ಗಂಗಾವತಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ, ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಮೇ 6ರಂದು ಆದಿತ್ಯನಾಥ ಅವರು ಗಂಗಾವತಿಗೆ ಆಗಮಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಕಾರ್ಯಕ್ರಮದಲ್ಲಿ ಮೊದಲ ಹಂತದಲ್ಲಿ ಬದಲಾವಣೆಯಾಗಿ ಮೇ 3ಕ್ಕೆ ಮರು ನಿಗದಿಯಾಗಿತ್ತು. ಆದರೆ ಇದೀಗ ರಾಜ್ಯ ಬಿಜೆಪಿ ಘಟಕ ಯೋಗಿ ಆದಿತ್ಯನಾಥ ಅವರ ಕಾರ್ಯಕ್ರಮದಲ್ಲಿ ಮರು ಬದಲಾವಣೆ ಮಾಡಿ ಏ. 30ರಂದು ಕಾರ್ಯಕ್ರಮ ನಿಗದಿ ಮಾಡಿದೆ ಎಂದು ತಿಳಿಸಿದರು.
ಇದನ್ನೂ ಓದಿ: Karnataka Election : ದೊಡ್ಮನೆ ಸೊಸೆ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರ್ಪಡೆ, ಕೈ ಹಿಡಿದ ನಿಂಗಯ್ಯ
ಯೋಗಿ ಆದಿತ್ಯನಾಥ್ ಅವರು ನಗರದಲ್ಲಿ ರೋಡ್ ಶೋ ನಡೆಸುವ ಮೂಲಕ ಮತಯಾಚನೆ ಮಾಡಲಿದ್ದಾರೆ. ಬಳಿಕ ಕನಕಗಿರಿ ರಸ್ತೆಯಲ್ಲಿರುವ ಎಪಿಎಂಸಿಯ ತಾಲೂಕು ಕ್ರೀಡಾಂಗಣದಲ್ಲಿ ಬಹಿರಂಗ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಹನುಮ ಹುಟ್ಟಿದ ನಾಡು ಅಂಜನಾದ್ರಿ ಗಂಗಾವತಿಯಲ್ಲಿ ಹಿಂದುತ್ವದ ಅಲೆ ನಿರ್ಮಾಣವಾಗುತ್ತಿದ್ದು, ಯೋಗಿ ಆದಿತ್ಯನಾಥ ಅವರನ್ನು ಅಂಜನಾದ್ರಿಯಿಂದಲೇ ರಸ್ತೆ ಮೂಲಕ ರೋಡ್ ಶೋ ಪ್ಲ್ಯಾನ್ ಮಾಡಲಾಗಿದೆ. ಆದರೆ ಯೋಗಿ ಅವರ ಬಿಡುವಿಲ್ಲದ ಪ್ರವಾಸ ಮತ್ತು ಭದ್ರತೆಯ ಕಾರಣಗಳನ್ನು ಅವಲೋಕಿಸಿ ಅಂಜನಾದ್ರಿಯಿಂದ ರೋಡ್ ಶೋ ಮಾಡಲು ಪಕ್ಷದಿಂದ ಅನುಮತಿ ಸಿಗುತ್ತದೆಯೋ ಇಲ್ಲವೋ ಕಾಯ್ದು ನೋಡಬೇಕಿದೆ. ಈ ಬಗ್ಗೆ ಈಗಾಗಲೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಏ. 29ರಂದು ಗಂಗಾವತಿಗೆ ಸಚಿವ ಬಿ. ಶ್ರೀರಾಮುಲು
ಇನ್ನು ಸಚಿವ ಬಿ. ಶ್ರೀರಾಮುಲು ಏ.29ರಂದು ಗಂಗಾವತಿಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ನಗರಕ್ಕೆ ಆಗಮಿಸಲಿರುವ ಶ್ರೀರಾಮುಲು, ರೋಡ್ ಶೋ ನಡೆಸಲಿದ್ದಾರೆ. ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ರೋಡ್ ಶೋ ನಡೆಯಲಿದೆ ಎಂದರು.
ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಹಿಂದುತ್ವದ ಅಲೆ ಮತ್ತು ಬಿಜೆಪಿಯ ಅಲೆ ನಿರ್ಮಾಣ ಮಾಡಲು ಮುಂದಿನ ದಿನಗಳಲ್ಲಿ ಬಿಜೆಪಿ ರಾಜ್ಯಮಟ್ಟದ ನಾಯಕ ಬಿ.ಎಸ್. ಯಡಿಯೂರಪ್ಪ, ನಟ ಕಿಚ್ಚ ಸುದೀಪ್, ಬಸವನಗೌಡ ಪಾಟೀಲ್ ಯತ್ನಾಳ್ ಇತರರು ಆಗಮಿಸಲಿದ್ದಾರೆ ಎಂದು ಪರಣ್ಣ ಮುನವಳ್ಳಿ ಹೇಳಿದರು.