Site icon Vistara News

Karnataka Election : ಅಸತೋಮಾ ಸದ್ಗಮಯ; ಇದು ಕಾಂಗ್ರೆಸ್‌ ಹೇಳಿದ ಸುಳ್ಳು ಮತ್ತು ಬಿಜೆಪಿ ಹೇಳಿದ ಸತ್ಯಗಳ ಸಂಕಲನ!

karnataka election BJP brings out a booklet to negate the misconceptions created by Congress

karnataka-election : BJP brings out a booklet to negate the misconceptions created by Congress

ಬೆಂಗಳೂರು: ಕಾಂಗ್ರೆಸ್‌ನ ನಿರಂತರ ಸುಳ್ಳುಗಳು ಮತ್ತು ಇದರ ಹಿಂದಿನ ಸತ್ಯಾಂಶಗಳನ್ನು ಜನರಿಗೆ ತಿಳಿಸುವುದಕ್ಕಾಗಿ ಬಿಜೆಪಿ ‘ಅಸತೋಮ ಸದ್ಗಮಯ’ ಕಿರು ಹೊತ್ತಿಗೆಯನ್ನು ರೂಪಿಸಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು. ಬೆಂಗಳೂರಿನ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಪ್ರತಿಯೊಂದು ಸುಳ್ಳಿನ ಹಿಂದಿರುವ ಸತ್ಯಾಂಶವನ್ನು ಜನರ ಮುಂದಿಡುವ ಉದ್ದೇಶದಿಂದ ಸಂಶೋಧನೆ ಮತ್ತು ಪರಿಣತಿಯೊಂದಿಗೆ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ (Karnataka Election 2023) ಕಿರು ಹೊತ್ತಿಗೆಯನ್ನು ರೂಪಿಸಲಾಗಿದೆ ಎಂದರು.

ರಾಹುಲ್‍ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಸುಳ್ಳು ಹೇಳುತ್ತಲೇ ಬಂದಿದ್ದಾರೆ. ಮುಖ್ಯವಾಗಿ ಈ ಚುನಾವಣೆಯಲ್ಲಿ ಸುಳ್ಳುಗಳನ್ನು ಆಧರಿಸಿ ರಾಜಕೀಯ ಪ್ರಚಾರದಲ್ಲಿ ತೊಡಗಿದ್ದಾರೆ. ಕೆಲ ತಿಂಗಳ ಹಿಂದೆ ಎಚ್.ಎ.ಎಲ್ ಸಂಕಷ್ಟದಲ್ಲಿದೆ. ಉದ್ಯೋಗಿಗಳು ಕೆಲಸ ಕಳೆದು ಕೊಳ್ಳುವ ಭೀತಿಯಲ್ಲಿದೆ ಎಂದು ಪ್ರಚಾರ ಮಾಡಿತ್ತು. ಆದರೆ, ಎಚ್‍ಎಎಲ್ ಇದೀಗ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಗತಿ ದಾಖಲಿಸಿದೆ ಎಂದು ತಿಳಿಸಿದರು.

ಠುಸ್‌ ಆದ ನಂದಿನಿ-ಅಮೂಲ್‌ ರಾಜಕೀಯ

ʻʻನಂದಿನಿ-ಅಮೂಲ್ ವಿಷಯದಲ್ಲಿ ರಾಜಕೀಯ ಲಾಭ ಪಡೆಯಲೆತ್ನಿಸಿತು. ಆದರೆ, ಎರಡೇ ದಿನಗಳಲ್ಲಿ ಈ ವಿಚಾರ ಠುಸ್ ಆಯಿತು. ಬ್ಯಾಂಕಿಂಗ್ ವ್ಯವಸ್ಥೆ ಶ್ರೀಮಂತರಿಗೆ ಮಾತ್ರ ಸೀಮಿತವಾಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಆದರೆ, ಯುಪಿಎ ಸರ್ಕಾರದಲ್ಲಿ ಬ್ಯಾಂಕ್‍ಗಳ ಸಾಲಗಳ ಬಹುತೇಕ ಮೊತ್ತ 9 ಕಂಪೆನಿಗಳಿಗೆ ಹೋಗುತ್ತಿತ್ತು. ಮೀಸಲಾತಿ ಕುರಿತು ಕಾಂಗ್ರೆಸ್ ನಾಯಕರ ಹೇಳಿಕೆಗಳ ಹಿಂದಿರುವ ನಿಜಾಂಶವನ್ನು ಬಿಜೆಪಿ ಸ್ಪಷ್ಟಪಡಿಸಿದೆʼʼ ಎಂದು ತಿಳಿಸಿದರು.

ʻʻನೀರಾವರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣವೇ ಪ್ರತಿಕ್ರಿಯಿಸಿ, ನಿಜಾಂಶವನ್ನು ತಿಳಿಸಿದ್ದಾರೆ. ಸುಳ್ಳು ರಾಜಕೀಯದಲ್ಲಿ ತೊಡಗಿರುವ ಕಾಂಗ್ರೆಸ್, ಎಂದಿಗೂ ಈಡೇರಿಸದ ಆಶ್ವಾಸನೆಗಳನ್ನು ನೀಡುತ್ತಿದೆ. ಸುಳ್ಳುಗಳಿಂದ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ. ಹಿಂದಿನ ವಿಧಾನಸಭಾ ಚುನಾವಣೆಗಳಲ್ಲೂ ಇದೇ ಸುಳ್ಳು ರಾಜಕೀಯ ಮಾಡಿತ್ತುʼʼ ಎಂದು ರಾಜೀವ್‌ ಚಂದ್ರಶೇಖರ್‌ ಆಕ್ಷೇಪಿಸಿದರು.

ಛತ್ತೀಸ್‍ಗಢದಲ್ಲಿ ಕಾಂಗ್ರೆಸ್ ಸರ್ಕಾರ ನಿರುದ್ಯೋಗಿಗಳಿಗೆ ನೀಡಿದ್ದ ಭರವಸೆಯಂತೆ ನಿರುದ್ಯೋಗಿ ಭತ್ಯೆ ನೀಡಿಲ್ಲ. ರಾಜಸ್ಥಾನದಲ್ಲಿ ಕೃಷಿ ಸಾಲ ಮನ್ನಾ ಮಾಡುವುದಾಗಿ ಚುನಾವಣೆಗೂ ಮುನ್ನ ನೀಡಿದ್ದ ಭರವಸೆ ಇನ್ನೂ ಈಡೇರಿಲ್ಲ. ಹಿಮಾಚಲ ಪ್ರದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರ ಇಳಿಸುವುದಾಗಿ ಹೇಳಿದ್ದ ಕಾಂಗ್ರೆಸ್ ದರಗಳನ್ನು ಹೆಚ್ಚಿಸಿದೆ ಎಂದು ಟೀಕಿಸಿದರು.

ಬಿಜೆಪಿ ಆರ್ಥಿಕ ಪ್ರಕೋಷ್ಠದ ರಾಜ್ಯ ಸಂಚಾಲಕ ಡಾ. ಸಮೀರ್ ಕಾಗಲ್ಕರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಒಂದು ಸುಳ್ಳನ್ನು ಹತ್ತು ಬಾರಿ ಹೇಳಿ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಲೇ ಬಂದಿದೆ. ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿನ ಆರ್ಥಿಕತೆಯ ಅಸಮರ್ಪಕ ನಿರ್ವಹಣೆಯೇ ಇದಕ್ಕೆ ಕಾರಣ. 2014ರಲ್ಲಿ ಭಾರತ ಬಲಹೀನ ರಾಷ್ಟ್ರಗಳಲ್ಲಿ ಒಂದೆನಿಸಿತ್ತು. ಆದರೆ ಇದೀಗ ವಿಶ್ವದ ಐದನೇ ಪ್ರಬಲ ಆರ್ಥಿಕ ರಾಷ್ಟ್ರವೆನಿಸಿದೆ. ಐಎಂಎಫ್ ಸಹ ಆರ್ಥಿಕಾಭಿವೃದ್ಧಿಯಲ್ಲಿ ಭಾರತದ ಸಾಧನೆಯನ್ನು ಪ್ರಶಂಸಿಸಿದೆ. ಕೇಂದ್ರ ಸರ್ಕಾರದ ದಿಟ್ಟ ತೀರ್ಮಾನಗಳಿಂದ ಹಣದುಬ್ಬರ ದರವೂ ಭಾರತದಲ್ಲಿ ಕಡಿಮೆ ಇದೆ. ಜಿಎಸ್‍ಟಿ ಸಂಗ್ರಹದಲ್ಲೂ ಭಾರೀ ಏರಿಕೆಯಾಗುತ್ತಿದೆ. ಆದರೆ, ಆರ್ಥಿಕಾಭಿವೃದ್ಧಿಯಲ್ಲಿ ಭಾರತದ ಸಾಧನೆಯನ್ನು ಅಲ್ಲಗೆಳೆಯಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ನಿರಂತರ ಸುಳ್ಳುಗಳನ್ನು ಹೇಳುತ್ತಾ ಬಂದಿದೆ ಎಂದು ಆರೋಪಿಸಿದರು.

ಕೇಂದ್ರದಿಂದ ರಾಜ್ಯಕ್ಕೆ ಬರುವ ಹಣದಲ್ಲಿ ತಾರತಮ್ಯ ತೋರಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ, ಬಿಜೆಪಿ ಸರ್ಕಾರದಲ್ಲಿ ಇದು ಶೇ.42ಕ್ಕೆ ಏರಿದೆ. ರೈತರ ಬಗ್ಗೆ ಬಿಜೆಪಿಗೆ ಕಾಳಜಿಯೇ ಇಲ್ಲ ಎಂದು ಆರೋಪಿಸುತ್ತಿದೆ. ಆದರೆ, ಬಿಜೆಪಿ ಸರ್ಕಾರ, ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರಿಗೆ ನೇರವಾಗಿ ಪ್ರೋತ್ಸಾಹ ಧನವನ್ನು ವರ್ಗಾಯಿಸುತ್ತಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸಲು ಅನೇಕ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಿದೆ ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ವಕ್ತಾರ ಗೋಪಾಲ್ ಅಗರ್ವಾಲ್‌ ಮಾತನಾಡಿ, ಬ್ಯಾಂಕ್‍ಗಳ ಮೂಲಕ ನೀಡುವ ಕೃಷಿ ಸಾಲಗಳಿಗಿಂತ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುವ ಯೋಜನೆಯನ್ನು ಪ್ರಧಾನಿಯವರು ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ. ಈ ಮೂಲಕ ಸೋರಿಕೆಗಳನ್ನು ತಡೆಯಾಗಲಿದೆ. ಸರ್ಕಾರ ತೆಗೆದುಕೊಂಡ ಹಲವು ನಿರ್ಧಾರಗಳ ಫಲವಾಗಿ ದೇಶದಲ್ಲಿ ಮಾಸಿಕ ಜಿಎಸ್‍ಟಿ ಸಂಗ್ರಹ 1.50 ಲಕ್ಷ ಕೋಟಿ ರೂ.ಗೆ ಏರಿದೆ ಎಂದು ಹೇಳಿದರು.

ಇದನ್ನೂ ಓದಿ : Karnataka Election 2023: ಶೆಟ್ಟರ್ ಸೋಲಿಸೋ ಹೊಣೆ ನಂದು, ಸವದಿಯನ್ನು ನೀವು ಸೋಲಿಸಿ; ಅಥಣಿ ಮತದಾರರಿಗೆ ಬಿಎಸ್‌ವೈ ಕರೆ

Exit mobile version