ಬಂಟ್ವಾಳ: ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಂಟ್ವಾಳದಲ್ಲಿ ಶಾಂತಿ ಕದಡಿದವರು ಬಿಜೆಪಿಗರು. ಆದರೆ, ಈಗ ಬಂಟ್ವಾಳದಲ್ಲಿ ಶಾಂತಿಯಿದೆ, ಕಾಂಗ್ರೆಸ್ ಬಂದರೆ (Karnataka Election) ಮತ್ತೆ ಶಾಂತಿ ಕದಡುತ್ತದೆ ಎಂದು ಸುಳ್ಳು ಹಬ್ಬಿಸುತ್ತಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಶಾಂತಿ ಕದಡಿದವರು ಯಾರು ಎಂಬುದು ಜನತೆಗೆ ಸ್ಪಷ್ಟವಾಗಿ ತಿಳಿದಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ. ರಮಾನಾಥ ರೈ (B Ramanatha Rai) ಹೇಳಿದರು.
ಬಂಟ್ವಾಳ ಕಸಬಾದ ನೇರಂಬೋಳ್, ಕೊಂಗ್ರಬೆಟ್ಟು, ಕೆಳಗಿನ ಪೇಟೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಗಳಲ್ಲಿ ಅವರು ಮಾತನಾಡಿದರು.
“ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಅನುದಾನ ತಂದು ಅಭಿವೃದ್ಧಿಪಡಿಸಿರುವುದು ನಿಮಗೆ ತಿಳಿದಿದೆ. ನಾನು ಅಭಿವೃದ್ಧಿ ರಾಜಕಾರಣದಲ್ಲಿ ಆಸಕ್ತಿ ಹೊಂದಿದ್ದೇನೆಯೇ ಹೊರತು, ದ್ವೇಷದ ರಾಜಕಾರಣದಲ್ಲಿ ಆಸಕ್ತಿ ಹೊಂದಿಲ್ಲ” ಎಂದು ಅವರು ತಿಳಿಸಿದರು.
ʻʻಬಂಟ್ವಾಳದಲ್ಲಿ ಮಿನಿ ವಿಧಾನ ಸೌಧ, ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣ, ಅಂಬೇಡ್ಕರ್ ಭವನ, ನಿರೀಕ್ಷಣಾ ಮಂದಿರ, ಉದ್ಯಾನವನ ಮುಂತಾದ ಹಲವು ಅಭಿವೃದ್ಧಿ ಕಾರ್ಯ ನನ್ನ ಅವಧಿಯಲ್ಲಾಗಿದೆ. ಬಂಟ್ವಾಳದಿಂದ ಪುಂಜಾಲಕಟ್ಟೆ ವರೆಗೆ ರಸ್ತೆ ಅಭಿವೃದ್ಧಿ ಆಗಿದೆ. ಅದನ್ನು ದಾಟಿ ಒಂದಿಂಚು ಹೆಚ್ಚು ಕಾಮಗಾರಿ ಮಾಡಲು ಬಿಜೆಪಿಗರಿಗೆ ಆಗಿಲ್ಲ. ನನ್ನ ಅಭಿವೃದ್ಧಿಗೆ ಸಾಕ್ಷಿಯಾಗಿ ವಾಮದಪದವು ಕಾಲೇಜು, ಅರೋಗ್ಯ ಕೇಂದ್ರ ನೋಡಬೇಕು. ಹೀಗೆ ಒಂದಲ್ಲ ಎರಡಲ್ಲ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನನ್ನ ಅವಧಿಯಲ್ಲಿ ಆಗಿದೆ. ಆದರೆ ಕಳೆದ ಅಪಪ್ರಚಾರ ಮಾಡಿ ನನ್ನನ್ನು ಸೋಲಿಸಲಾಗಿದೆ. ಸೋತ ಬಗ್ಗೆ ಬೇಸರವಿಲ್ಲ, ಆದರೆ ಸೋಲಿಸಿದ ವಿಧಾನದ ಬಗ್ಗೆ ಬೇಸರವಿದೆʼʼ ಎಂದು ರಮಾನಾಥ ರೈ ತಿಳಿಸಿದರು.
ಬಿಜೆಪಿಗರ ಕೀಳು ಟೀಕೆಗೆ ಭಾವುಕರಾದ ರಮಾನಾಥ ರೈ
ʻʻಬಿಜೆಪಿಗರು ನನ್ನ ಡಿಎನ್ಎ ಬಗ್ಗೆ ಪ್ರಶ್ನಿಸುತ್ತಾರೆ. ಅಂದರೆ ನನ್ನ ತಂದೆಗೆ ನಾನು ಹುಟ್ಟಿರುವ ಕುರಿತು ಸಂಶಯದ ಮಾತುಗಳನ್ನು ಆಡುತ್ತಾರೆ. ಈ ಬಗ್ಗೆ ಕೇಳುವಾಗ ಮನಸಿಗೆ ತುಂಬಾ ಬೇಸರವಾಗುತ್ತದೆʼʼ ಎಂದು ರೈ ಭಾವುಕರಾದರು. ಕೊಂಗ್ರಬೆಟ್ಟುವಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ರೈಗಳು ಭಾವುಕರಾಗುತ್ತಿದ್ದಂತೆ ಅಲ್ಲಿ ಸೇರಿದ್ದವರ ಕಣ್ಣುಗಳೂ ತೇವವಾಗಿದ್ದು ಜನರು ರೈ ಅವರ ಮೇಲಿಟ್ಟ ಅಭಿಮಾನಕ್ಕೆ ಸಾಕ್ಷಿ.
ರಮಾನಾಥ ರೈ ಅವರು ಕಳೆದ ಚುನಾವಣೆಯಲ್ಲಿ ಸೋತಿದ್ದರೂ ಜನರ ಜತೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡಿದ್ದರು. ಅವರ ಮನೆಗೆ ಶಾಸಕರಾಗಿದ್ದಾಗ ಹೇಗೆ ಜನರು ನೂರಾರು ಸಂಖ್ಯೆಯಲ್ಲಿ ಬರುತ್ತಿದ್ದರೋ ಅದೇ ರೀತಿ ಸೋತ ಬಳಿಕವೂ ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು. ರಮಾನಾಥ ರೈಗಳು ಅವುಗಳಿಗೆ ಪರಿಹಾರವನ್ನೂ ಸೂಚಿಸುತ್ತಿದ್ದರು. ನಿರಂತರವಾದ ಜನ ಸಂಪರ್ಕ ಮತ್ತು ಎಲ್ಲ ಕಡೆ ಭೇಟಿಯನ್ನು ರಮಾನಾಥ ರೈ ಕಳೆದ ಐದು ವರ್ಷಗಳಲ್ಲಿ ಮುಂದುವರಿಸಿದ್ದರು.
ಇದನ್ನೂ ಓದಿ : Karnataka election 2023: ಸುಳ್ಳು ಭರವಸೆ ನೀಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಬೊಮ್ಮಾಯಿ