ದೇವನಹಳ್ಳಿ: ʻʻರಾಜ್ಯದಲ್ಲಿ ಈ ಬಾರಿಯ ಚುನಾವಣೆಯಲ್ಲಿ (Karnataka Election) ಬಿಜೆಪಿ 150 ಸ್ಥಾನಗಳನ್ನು ಗೆದ್ದೇ ಗೆಲ್ಲಲಿದೆ. ಇದಕ್ಕೆ ಬೇಕಾದ ಎಲ್ಲ ಕಾರ್ಯತಂತ್ರಗಳನ್ನು ಮಾಡುತ್ತಿದ್ದೇವೆʼʼ ಎಂದು ಬಿಜೆಪಿಯ ಚುನಾವಣಾ ಉಸ್ತುವಾರಿ ಟೀಮ್‌ನ ಕ್ಯಾಪ್ಟನ್, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಘೋಷಿಸಿದರು. ಅವರು ಗುರುವಾರ ಸಹ ಉಸ್ತುವಾರಿ ಮನ್ಸುಖ್ ಮಂಡಾವಿಯ ಮತ್ತು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರೊಂದಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ರಾಜ್ಯದಲ್ಲಿ ಬಿಜೆಪಿ ಗೆಲುವಿನ ವಿಶ್ವಾಸವನ್ನು ಟೀಮ್ ವ್ಯಕ್ತಪಡಿಸಿತು.
ಬಿಜೆಪಿ ಹೈಕಮಾಂಡ್‌ನಿಂದ ನೇಮಕಗೊಂಡ ಉಸ್ತುವಾರಿ ತಂಡ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಕಾಲಿಟ್ಟಿದ್ದು, ಇನ್ನು ಮುಂದೆ ಅವರ ಕಾರ್ಯತಂತ್ರಗಳ ಆಧಾರದಲ್ಲಿ ದೊಡ್ಡ ಮಟ್ಟದ ಪ್ರಚಾರ ಮತ್ತು ಇತರ ಚಟುವಟಿಕೆಗಳು ನಡೆಯಲಿವೆ.
ವಿಮಾನ ನಿಲ್ದಾಣಕ್ಕೆ ಆಗಮಿಸಿದ ಉಸ್ತುವಾರಿ ಟೀಮನ್ನು ಸಚಿವ ಅಶ್ವತ್ಥ ನಾರಾಯಣ, ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎಸ್.ಆರ್ ವಿಶ್ವನಾಥ್ ಹಾಗೂ ಕಾರ್ಯಕರ್ತರು ಅದ್ದೂರಿಯಾಗಿ ಬರಮಾಡಿಕೊಂಡರು.
ಈ ವೇಳೆ ಟೀಮ್ ಪರವಾಗಿ ಮಾತನಾಡಿದ ಧರ್ಮೇಂದ್ರ ಪ್ರಧಾನ್ ಅವರು, ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಸಭೆ ಮಾಡಲು ಬಂದಿದ್ದೇವೆ. ಜತೆಗೆ ಶೀಘ್ರದಲ್ಲೇ ಬಸ್ ಯಾತ್ರೆ ಆರಂಭವಾಗಲಿದೆ. ಬಿಜೆಪಿ ನಾಯಕರು ತಂಡಗಳಾಗಿ ಬಸ್ ಯಾತ್ರೆ ನಡೆಸಲಿದ್ದಾರೆ.
ತಂತ್ರಗಾರಿಕೆ ರೂಪಿಸಲಿರುವ ಧರ್ಮೇಂದ್ರ ಪ್ರಧಾನ್ ಟೀಮ್
ಕೇಂದ್ರದಿಂದ ನಿಯುಕ್ತರಾಗಿರುವ ಮೂವರು ಬಿಜೆಪಿ ನಾಯಕರು ರಾಜ್ಯದ ಬಗ್ಗೆ ಸಾಕಷ್ಟು ತಿಳಿದುಕೊಂಡವರಾಗಿದ್ದು, ಅವರ ಕಾರ್ಯತಂತ್ರದಡಿ ಮುಂದಿನ ಚುನಾವಣಾ ಪ್ರಚಾರ ತಂತ್ರಗಳು ನಡೆಯಲಿವೆ.
ಕೇಂದ್ರ ಸಚಿವರಾಗಿರುವ ಧರ್ಮೇಂದ್ರ ಪ್ರಧಾನ್ 2011 ರಿಂದ 2013 ರವರೆಗೂ ರಾಜ್ಯ ಉಸ್ತುವಾರಿ ಮತ್ತು ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿಯಾಗಿದ್ದರು. ಯಡಿಯೂರಪ್ಪ ಅವರು ಬಿಜೆಪಿ ತೊರೆದು ಕೆಜೆಪಿ ಸ್ಥಾಪಿಸಿದ ಸಂದರ್ಭದಲ್ಲಿ ಕೂಡ ರಾಜ್ಯ ಉಸ್ತುವಾರಿಯಾಗಿ ಬಿಜೆಪಿಯನ್ನು ಮುನ್ನಡೆಸುವ ಸವಾಲನ್ನು ಧರ್ಮೇಂದ್ರ ಪ್ರಧಾನ್ ನಿಭಾಯಿಸಿದರು.
ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿದ ಸಂದರ್ಭದಲ್ಲಿ ಆಗಮಿಸಿದ ಕೇಂದ್ರದ ವೀಕ್ಷಕ ತಂಡದಲ್ಲೂ ಪ್ರಧಾನ್ ಇದ್ದರು. ಸಿಎಂ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗಲೂ ವೀಕ್ಷಕರಾಗಿ ಆಗಮಿಸಿ ಜವಾಬ್ದಾರಿ ನಿರ್ವಹಿಸಿದ್ದರು. ಸಂದಿಗ್ಧ ಪರಿಸ್ಥಿತಿಯಲ್ಲಿ ಪಕ್ಷವನ್ನು ಮುನ್ನಡೆಸಿ ರಾಜ್ಯದ ನಾಡಿಮಿಡಿತ ಅರಿತಿದ್ದಾರೆ ಧರ್ಮೇಂದ್ರ ಪ್ರಧಾನ್. ಇದರ ಜತೆಗೆ ಕೇಂದ್ರದಲ್ಲೂ ಸಾಕಷ್ಟು ಹಿಡಿತವನ್ನು ಅವರು ಹೊಂದಿದ್ದಾರೆ.
ಮೋದಿ, ಶಾಗೆ ಆಪ್ತರಾದ ಮನ್ಸುಖ್ ಮಂಡಾವಿಯಾ
ಕೇಂದ್ರ ಸಚಿವರಾಗಿರುವ ಮನ್ಸುಖ್ ಮಂಡಾವಿಯಾ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಇಬ್ಬರಿಗೂ ಆಪ್ತರಾಗಿದ್ದಾರೆ. ಮೋದಿ ಮತ್ತು ಅಮಿತ್ ಶಾ ಅವರ ತಂತ್ರಗಾರಿಕೆಯನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲು ಮಂಡಾವಿಯಾ ನೆರವು ನೀಡಲಿದ್ದಾರೆ.
ಅಂಕಿ ಅಂಶ ಲೆಕ್ಕಾಚಾರ ಬಲ್ಲ ಅಣ್ಣಾಮಲೈ
ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕರ್ನಾಟಕದಲ್ಲೆ ಸೇವೆ ಸಲ್ಲಿಸಿ ಅನುಭವ ಹೊಂದಿರುವವರು. ರಾಜ್ಯದ ಸ್ಥಿತಿಗತಿ, ನಾಡಿಮಿಡಿತದ ಜೊತೆಗೆ ರಾಜಕೀಯ ಅಂಕಿ ಅಂಶಗಳ ಲೆಕ್ಕಾಚಾರದ ಹಿಡಿತ ಹೊಂದಿರುವ ಅಣ್ಣಾಮಲೈ ಅವರು ಎಲ್ಲ ರಾಜಕಾರಣಿಗಳನ್ನೂ ಬಲ್ಲವರು. ತಮಿಳುನಾಡು ಬಿಜೆಪಿಯಲ್ಲಿ ಹಿಂದುತ್ವ, ಮೋದಿ ಅಲೆಯೊಂದಿಗೆ ಟ್ರೆಂಡ್ ಸೆಟ್ ಮಾಡುತ್ತಿರುವ ಅಣ್ಣಾಮಲೈ ರಾಜ್ಯದಲ್ಲಿ ಕೂಡ ಅದೇ ಟ್ರೆಂಡ್ ಅನುಷ್ಠಾನಕ್ಕೆ ನೆರವು ನೀಡಲಿದ್ದಾರೆ.
ಹೀಗಾಗಿ ಈ ಮೂವರು ನಾಯಕರ ಆಗಮನದಿಂದ ರಾಜ್ಯ ಬಿಜೆಪಿಯಲ್ಲಿ ಸಂಚಲನ ಉಂಟಾಗಿದೆ.
ಇದನ್ನೂ ಓದಿ : Karnataka Election : ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿಯಾಗಿ ಧರ್ಮೇಂದ್ರ ಪ್ರಧಾನ್, ಅಣ್ಣಾಮಲೈ ಸಹ ಪ್ರಭಾರಿ