ಬೆಂಗಳೂರು: ನಳಿನ್ ಕುಮಾರ್ ಕಟೀಲ್ ಅವರು ನಮ್ಮ ಬಗ್ಗೆ ಏನು ಹೇಳೋದು.. ಅವರನ್ನೇ ಅವರ ಪಕ್ಷದವರು ಚಪ್ಪಲಿ ಬಿಡುವ ಜಾಗದಲ್ಲಿ ಬಿಟ್ಟಿದ್ದಾರೆ: ಹೀಗೆಂದು (Karnataka Election) ಗೇಲಿ ಮಾಡಿದ್ದಾರೆ ಕಾಂಗ್ರೆಸ್ ನಾಯಕ, ಮೇಲ್ಮನೆ ಸದಸ್ಯ ಬಿ.ಕೆ. ಹರಿಪ್ರಸಾದ್.
ಕಾಂಗ್ರೆಸ್‌ನವರು ಸಭೆ ಮಾಡಿದ್ರೆ ಜನರ ಕಾಲಲ್ಲಿರುವ ಚಪ್ಪಲಿ ಕೈಗೆ ಬರುತ್ತದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಗೆ ಕೆಪಿಸಿಸಿ ಕಚೇರಿ ಮುಂದೆ ಶನಿವಾರ ಬೆಳಗ್ಗೆ ಪ್ರತಿಕ್ರಿಯೆ ನೀಡಿದ ಅವರು, ʻʻಭಾರತೀಯ ಜನತಾ ಪಕ್ಷದವರು ಸಭೆ ಮಾಡಿದ್ರೆ ಕೈಗೆ ಏನೇನು ಬರುತ್ತೆ ಅಂತ ಬೆಂಗಳೂರಿನ ಜನ ನೋಡಿದ್ದಾರೆ. ಟೂಬ್ ಲೈಟ್ ತಗೊಂಡು ಹೊಡೆದಾಡಿದ್ದು ಜನ ಮರೆತಿಲ್ಲ. ಭಾರತೀಯ ಜನತಾ ಪಕ್ಷದ ನಾಯಕರು ಕಟೀಲ್ ಅವರನ್ನು ಚಪ್ಪಲಿ ಬಿಡುವ ಸ್ಥಳದಲ್ಲಿ ಬಿಟ್ಟಿದ್ದಾರೆ. ಹೀಗಾಗಿ ಅವರು ಅದನ್ನು ಹೇಳಿದ್ದಾರೆ. ಅವರ ನಾಯಕರೇ ಅವರನ್ನು ಚಪ್ಪಲಿ ಬಿಡುವ ಜಾಗದಲ್ಲಿ ಬಿಟ್ಟಿದ್ದಾರೆ. ನನ್ನ ಸರಿಯಾದ ಜಾಗದಲ್ಲಿ ಬಿಡಿ ಅಂತ ಅವರ ನಾಯಕರಿಗೆ ಹೇಳಿದ್ದಾರೆʼʼ ಎಂದು ಹೇಳಿದರು.
ʻʻಅದು ಭಾರತೀಯ ಜನತಾ ಪಕ್ಷದ ಸಂಸ್ಕೃತಿ, ಕಾಂಗ್ರೆಸ್ ಪಕ್ಷದಲ್ಲಿ ಆ ಸಂಸ್ಕೃತಿ ಅಲ್ಲʼʼ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದರು.
ನಳಿನ್ ಕುಮಾರ್ ಕಟೀಲ್ ಹೇಳಿದ್ದೇನು?
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ರಾಜ್ಯ ರೈತ ಮೋರ್ಚಾ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಕಟೀಲ್, ಕಾಂಗ್ರೆಸ್, ಜೆಡಿಎಸ್ ಪಕ್ಷಗಳನ್ನು ಟೀಕಿಸುತ್ತಾ ಅಪ್ಪ ಮಕ್ಕಳ ಪಾರ್ಟಿಯಲ್ಲಿ ಅಣ್ಣ ದೊಡ್ಡವನೋ ತಮ್ಮ ದೊಡ್ಡವನೋ ಎಂದು ಕಿತ್ತಾಟ ಶುರುವಾಗಿದೆ. ಇನ್ನೊಂದು ರಾಷ್ಟ್ರೀಯ ಪಾರ್ಟಿಯಲ್ಲಿ ಮುಖ್ಯಮಂತ್ರಿ ಯಾರೆಂಬ ಕಿತ್ತಾಟ ಆರಂಭವಾಗಿದೆ. ಈ ಚುನಾವಣೆಯಲ್ಲಿ ಬೇರೆಬೇರೆ ಪಾರ್ಟಿಯವರು ಶರ್ಟ್ ಹೊಲಿಸಿ ಕಾಯುತ್ತಿದ್ದಾರೆ. ಕೆಲವರು ಕೋಟ್ ಹೊಲಿಸಲು ಅಂಗಡಿಗೆ ಕೊಟ್ಟಿದ್ದಾರೆ. ಇನ್ನೂ ಕೆಲವರು ಹೊಸ ಪ್ಯಾಂಟ್ ಶರ್ಟ್ ಖರೀದಿಸಿದ್ದಾರೆ. ಇನ್ನೂ ಕೆಲವರು ಅವರೊಳಗೇ ಪ್ಯಾಂಟ್, ಶರ್ಟ್ ಹರಿಯಲು ಶುರು ಮಾಡಿದ್ದಾರೆ. ನೋಡಿ 3 ಪಾರ್ಟಿಯಲ್ಲಿ ಮೂರು ವಿಭಿನ್ನತೆ. ರಾಷ್ಟ್ರೀಯ ಪಾರ್ಟಿ ಇನ್ನೊಂದಿದೆ. ಅವರ ಸಭೆ ಆದಾಗ ಚಪ್ಪಲಿಗಳು ಕೈಯಲ್ಲಿ ಇರುತ್ತದೆ ಎಂದಿದ್ದರು.
ಇನ್ನೊಂದು ಕುಟುಂಬದ ಪಕ್ಷವಿದೆ. ಅಪ್ಪ ಮಕ್ಕಳ ಪಾರ್ಟಿ ಅದು. ಅವರ ಪಾರ್ಟಿಯ ಮೀಟಿಂಗ್ ಆದಾಗ ಒಬ್ಬನ ಚಪ್ಪಲಿ ಇನ್ನೊಬ್ಬನ ದೇಹದೊಳಗೆ ಇರುತ್ತದೆ. ಬಿಜೆಪಿಯಲ್ಲಿ ಮಾತ್ರ ಚಪ್ಪಲಿ ನಮ್ಮಲ್ಲೇ ಇರುತ್ತದೆ. ಶಾಂತವಾಗಿ ಸಭೆ ನಡೆಯುತ್ತದೆ ಎಂದಿದ್ದರು.
ಇದನ್ನೂ ಓದಿ | BJP Karnataka : ಕಾಂಗ್ರೆಸ್-ಜೆಡಿಎಸ್ ಸಭೆ ಮಾಡಿದರೆ ಚಪ್ಪಲಿಗಳು ಕೈಯಲ್ಲಿರುತ್ತವೆ: ನಳಿನ್ ಕುಮಾರ್ ಕಟೀಲ್ ಹೇಳಿಕೆ