Site icon Vistara News

Karnataka Election : ಮೋದಿ ಭಾಗವಹಿಸಿದ್ದ ಸಮಾವೇಶದಲ್ಲೇ ಕಾಂಗ್ರೆಸ್‌ಗೆ ಮತ ಹಾಕಿ ಎಂದ ಬಿಜೆಪಿ ಶಾಸಕ!

karnataka-election: BJP MLA Asks vote in Congress in Modi programme at Mulki

karnataka-election: BJP MLA Asks vote in Congress in Modi programme at Mulki

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ (Prime minister Narendra Modi) ಅವರು ರಾಜ್ಯದಲ್ಲಿ ಬಿರುಗಾಳಿಯ ಪ್ರವಾಸ ಮಾಡುತ್ತಾ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಬಿಜೆಪಿಗೆ ಬಹುಮತ ಕೊಡಿ ಎಂದು ಕೇಳುತ್ತಿದ್ದರೆ ಇತ್ತ ಬಿಜೆಪಿ ಶಾಸಕರೊಬ್ಬರು ಬಾಯಿ ತಪ್ಪಿ ಕಾಂಗ್ರೆಸ್‌ಗೆ ಮತ ಕೊಡಿ ಎಂದು ಕೇಳಿದ್ದಾರೆ!

ಈ ಘಟನೆ ನಡೆದಿರುವುದು ದಕ್ಷಿಣ ಕನ್ನಡ ಜಿಲ್ಲೆಯು ಮೂಲ್ಕಿಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ. ಸಮಾರಂಭದಲ್ಲಿ ಮಾತನಾಡಿದ ಮೂಡುಬಿದರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್‌ ಅವರು ಬಾಯಿ ತಪ್ಪಿ ಕಾಂಗ್ರೆಸ್‌ಗೆ ಸ್ಪಷ್ಟವಾದ ಮತವನ್ನು ಕೊಡುವಂತೆ ಮನವಿ ಮಾಡಿದರು. ಮಾತು ತಪ್ಪಿತು ಎಂದು ಗೊತ್ತಾದ ಕೂಡಲೇ ಅವರು ಸರಿ ಮಾಡಿಕೊಂಡರಾದರೂ ಗಮನಕ್ಕೆ ಬಾರದೆ ಹೋಗಲಿಲ್ಲ!

ಉಮಾನಾಥ ಕೋಟ್ಯಾನ್‌ ಹೇಳಿದ್ದೇನು?

ʻʻಇವತ್ತು ನಮ್ಮ 13 ವಿಧಾನಸಭಾ ಕ್ಷೇತ್ರಗಳಲ್ಲೂ ನಮ್ಮ ಕಾರ್ಯಕರ್ತರು ಅವಿರತವಾಗಿ ಕೆಲಸ ಮಾಡುವ ಮೂಲಕ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು ಎನ್ನುವ ಸಂಕಲ್ಪವನ್ನು ಎಲ್ಲರೂ ಮಾಡಿದ್ದೇವೆ. ಹೀಗಾಗಿ ವಾರದ ಮಧ್ಯದಲ್ಲೂ ನಾವೆಲ್ಲರೂ ಈ ಕಾರ್ಯಕ್ರಮಕ್ಕೆ ಬಂದು ಈ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಟ್ಟಿದ್ದೇವೆ. ನಾಡಿದ್ದು ಹತ್ತನೇ ತಾರೀಕಿನಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದವರಿಗೆ ಸ್ಪಷ್ಟವಾದ ಮತವನ್ನು ಕೊಟ್ಟು….ʼʼ ಎಂದು ಹೇಳಿದರು ಉಮಾನಾಥ ಕೋಟ್ಯಾನ್‌. ಅಷ್ಟು ಹೇಳುವಾಗ ಅವರಿಗೇ ತಮ್ಮ ಮಾತಿನ ತಪ್ಪು ಅರ್ಥವಾಯಿತು. ಅವರು ಕೂಡಲೇ ಸಾವರಿಸಿಕೊಂಡು, ʻʻಕಾಂಗ್ರೆಸ್‌ ಪಕ್ಷದವರಿಗೆ ಸ್ಪಷ್ಟವಾದ ಉತ್ತರವನ್ನು ಕೊಟ್ಟು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಕಳಕಳಿಯ ಮನವಿ ಮಾಡುತ್ತೇನೆʼʼ ಎಂದು ಮಾತು ಮುಂದುವರಿಸಿದರು.

ಮೂಲ್ಕಿಯಲ್ಲಿ ನಡೆದ ಸಮಾವೇಶದಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದರು. ಕಾಂಗ್ರೆಸ್‌ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು ನಿಷೇಧಿಸುವುದಾಗಿ ಭರವಸೆ ನೀಡಿದ್ದನ್ನು ಉಲ್ಲೇಖಿಸದೆಯೇ ಮೋದಿ ಅವರು ʻʻಜೈ ಬಜರಂಗ್‌ ಬಲಿʼ ಎಂಬ ಘೋಷಣೆ ಕೂಗಿದರು.

ಕರ್ನಾಟಕವನ್ನು ನಂ.1 ರಾಜ್ಯವನ್ನಾಗಿ ಮಾಡಲು ಬಿಜೆಪಿ ಮತಯಾಚನೆ ಮಾಡುತ್ತಿದೆ. ಆದರೆ, ಕಾಂಗ್ರೆಸ್ ಹೇಗೆ ಮತ ಕೇಳುತ್ತಿದೆ ಗೊತ್ತಾ? ನಮ್ಮ ನಾಯಕ(ಸಿದ್ದರಾಮಯ್ಯ) ಚುನಾವಣೆಯಿಂದ ನಿವೃತ್ತಿಯಾಗುತ್ತಿದ್ದಾನೆ, ಮತ ನೀಡಿ ಎನ್ನುತ್ತಿದೆ. ಅಲ್ಲದೇ, ಮೋದಿಯನ್ನು ಬೈಯುವುದರ ಮೂಲಕ ವೋಟ್ ಮಾಡಿ ಎನ್ನುತ್ತಿದೆ. ಯಾರನ್ನಾದರೂ ಬೈದರೆ ಕರ್ನಾಟಕದವರು ಸಹಿಸಿಕೊಳ್ಳುತ್ತಾರೆಯೇ? ಇಲ್ಲ ಅಲ್ಲವೇ, ಅಂಥವರಿಗೆ ಶಿಕ್ಷೆ ಕೊಡಬೇಕಲ್ಲವೇ? ಹಾಗಿದ್ದರೆ, ಮತದಾನದ ದಿನ ‘ಜೈ ಬಜರಂಗಬಲಿ’ ಎಂದು ಕಮಲದ ಬಟನ್ ಒತ್ತುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಶಿಕ್ಷಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಇದನ್ನೂ ಓದಿ : Modi In Karnataka: ‘ಕರಾವಳಿ’ಯಲ್ಲಿ ಮೋದಿ ‘ಅಲೆ’; ಇಲ್ಲಿವೆ ಮನಮೋಹಕ ಫೋಟೊಗಳು

Exit mobile version