ಸಿಂಧಗಿ: ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ನಡೆಯುತ್ತಿರುವ ಬಿಜೆಪಿಯ ವಿಜಯ ಸಂಕಲ್ಪ ಅಭಿಯಾನದಿಂದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda pateel yatnal) ಅವರು ಅಂತರ ಕಾಯ್ದುಕೊಂಡಿದ್ದಾರೆ.
ಯತ್ನಾಳ್ ಅವರ ತವರು ಜಿಲ್ಲೆಯಲ್ಲೇ ಕಾರ್ಯಕ್ರಮ ನಡೆದರೂ, ರಾಷ್ಟ್ರೀಯ ಅಧ್ಯಕ್ಷರಾಗಿರುವ ಜೆ.ಪಿ. ನಡ್ಡಾ ಅವರು ರಾಜ್ಯಮಟ್ಟದ ಅಭಿಯಾನಕ್ಕೆ ಚಾಲನೆ ನೀಡಿದರೂ ಈ ಮಹತ್ವದ ಕಾರ್ಯಕ್ರಮಕ್ಕೆ ಬಸನ ಗೌಡ ಪಾಟೀಲ್ ಅವರು ಗೈರು ಹಾಜರಾಗಿದ್ದಾರೆ.
ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಹಿಂದಿನಿಂದಲೂ ಮುನಿಸಿಕೊಂಡಿರುವ, ಪಂಚಮಸಾಲಿ ಮೀಸಲಾತಿ ನೀಡಲು ಮೀನ ಮೇಷ ಎಣಿಸುತ್ತಿರುವ ಕಾರಣಕ್ಕಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರ ವಿರುದ್ಧವೂ ಸಿಟ್ಟಿಗೆದ್ದಿರುವ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರನ್ನು ಕಂಡರೆ ಕೆಂಡವಾಗುವ ಯತ್ನಾಳ್ ರಾಜ್ಯ ಬಿಜೆಪಿಗೆ ಬಿಸಿ ತುಪ್ಪವಾಗಿದ್ದಾರೆ. ಅದರೆ, ಅವರು ಆರೆಸ್ಸೆಸ್ ಮತ್ತು ಕೇಂದ್ರ ನಾಯಕತ್ವದ ಜತೆ ಉತ್ತಮ ಸಂಬಂಧ ಹೊಂದಿದ್ದಾರೆ. ಹಾಗಾಗಿ ಎಷ್ಟೇ ಬಂಡಾಯ ಸಾರಿದರೂ ಅವರಿಗೆ ರಕ್ಷಣೆ ಸಿಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ, ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೇ ಬಂದರೂ ಕಾರ್ಯಕ್ರಮಕ್ಕೆ ಯತ್ನಾಳ್ ಭಾಗವಹಿಸದೆ ಇರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಅದರ ಜತೆಗೆ ವಿಜಯಪುರ ಸಮಾವೇಶದ ಯಾವ ಸಿದ್ಧತೆಯಲ್ಲೂ ಯತ್ನಾಳ್ ಅವರು ತೊಡಗಿಸಿಕೊಂಡಿಲ್ಲ.
ಯತ್ನಾಳ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಗ್ಗೆ ಪಕ್ಷದಲ್ಲಿ ಭಾರಿ ಒತ್ತಡವಿದೆ. ಆದರೆ, ಎಲ್ಲರೂ ಕೇಂದ್ರದ ಕಡೆಗೇ ನೋಡುತ್ತಿದ್ದಾರೆ. ಹೀಗಾಗಿ ಯಾವ ಕ್ರಮವೂ ಇದುವರೆಗೆ ಆಗಿಲ್ಲ. ಈ ಕಾರ್ಯಕ್ರಮದ ವಿಚಾರದಲ್ಲಿ ಯತ್ನಾಳ್ ಅವರು ಸ್ವತಃ ತಾವಾಗಿ ದೂರ ಉಳಿದಿದ್ದಾರೆಯೇ ಅಥವಾ ಅವರನ್ನು ಕಡೆಗಣಿಸಲಾಗಿದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಅಂತೂ ಯತ್ನಾಳ್ ವಿಚಾರದಲ್ಲಿ ಬಿಜೆಪಿಯಲ್ಲಿ ಏನೋ ಒಂದು ನಡೆಯಂತೂ ನಡೆಯುತ್ತಿರುವುದು ಸ್ಪಷ್ಟ.
ಸಿಂಧಗಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ನಡ್ಡಾ ಅವರ ಜತೆಗೆ ಬಿ.ಎಸ್. ಯಡಿಯೂರಪ್ಪ, ಸಚಿವ ಸಿ.ಎನ್. ಅಶ್ವತ್ಥನಾರಾಯಣ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ.
ಇದನ್ನೂ ಓದಿ | JP Nadda | ಶ್ರೀ ಸಿದ್ದೇಶ್ವರ ಸ್ವಾಮಿಗಳ ಜ್ಞಾನ ಯೋಗಾಶ್ರಮಕ್ಕೆ ಭೇಟಿ: ಆಧ್ಯಾತ್ಮಿಕತೆ-ಮಾನವೀಯತೆಯ ಸಂಗಮ ಎಂದ ನಡ್ಡಾ