Site icon Vistara News

Karnataka Election | ಇಂದಿನಿಂದ 9 ದಿನ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ: ವಿಜಯಪುರದಲ್ಲಿ ಜೆ.ಪಿ. ನಡ್ಡಾ ಚಾಲನೆ

Vijayapura

ವಿಜಯಪುರ: ರಾಜ್ಯದಲ್ಲಿ ಚುನಾವಣಾ ಹವಾ (Karnataka Election) ಜೋರಾಗಿದೆ. ಈಗಾಗಲೇ ಚುನಾವಣಾ ರಣತಂತ್ರಗಳನ್ನು ಹೆಣೆಯುತ್ತಿರುವ ಬಿಜೆಪಿ ಸಂಕಲ್ಪ ಯಾತ್ರೆಯ ಮೂಲಕ ರಾಜ್ಯದ ಬಹುತೇಕ ಎಲ್ಲ ಭಾಗಗಳನ್ನು ತಲುಪಿದೆ. ಇದೀಗ ಶನಿವಾರದಿಂದ ಜನವರಿ ೨೯ರವರೆಗೆ ಒಂಬತ್ತು ದಿನಗಳ ವಿಜಯ ಸಂಕಲ್ಪ ಅಭಿಯಾನ ಹಮ್ಮಿಕೊಂಡಿದೆ. ಈ ಅಭಿಯಾನವನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಶನಿವಾರ ವಿಜಯಪುರದ ಸಿಂಧಗಿಯಲ್ಲಿ ಉದ್ಘಾಟಿಸಲಿದ್ದಾರೆ. ಜತೆಗೆ ಬೇರೆ ಬೇರೆ ನಾಯಕರು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ವಿಜಯಪುರದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತಿತರ ರಾಜ್ಯ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಎಲ್ಲೆಲ್ಲಿ ಯಾರ‍್ಯಾರು ಉದ್ಘಾಟನೆ?
ಮಾಜಿ ಸಿಎಂ ಯಡಿಯೂರಪ್ಪ ಅವರು ಜೆ.ಪಿ.ನಡ್ಡಾ ಜೊತೆ ವಿಜಯಪುರ, ನಾಗಠಾಣ ಹಾಗೂ ಸಿಂಧಗಿಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಬೆಂಗಳೂರಿನ ಜಯನಗರ, ಬಿಟಿಎಂ ಲೇಔಟ್‌ನಲ್ಲಿ, ಸಿಎಂ ಬಸವರಾಜ ಬೊಮ್ಮಾಯಿ ತುಮಕೂರಿನಲ್ಲಿ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿಯವರು ದಾವಣಗೆರೆಯಲ್ಲಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ಚಿಕ್ಕಬಳ್ಳಾಪುರದಲ್ಲಿ, ಕರ್ನಾಟಕ ಸಹ ಉಸ್ತುವಾರಿ ಡಿ.ಕೆ.ಅರುಣಾ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ರಾಜ್ಯದ ಸಚಿವರು, ಸಂಸದರು, ಶಾಸಕರು, ಪರಿಷತ್‌ ಸದಸ್ಯರು ಆಯಾ ಜಿಲ್ಲೆಗಳಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ಏನಿದು ಅಭಿಯಾನ? ಹೇಗೆ ನಡೆಯುತ್ತದೆ?
ಅಭಿಯಾನದ ಅಂಗವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆ, ಕೊಡುಗೆ, ಕಾರ್ಯಕ್ರಮಗಳ ಕುರಿತು ಕರಪತ್ರಗಳನ್ನು ಹಂಚಿಕೆ ಮಾಡಲಾಗುವುದು. ಎರಡು ಕೋಟಿಗಿಂತ ಹೆಚ್ಚು ಮತದಾರರ ಸಂಪರ್ಕ ಮಾಡಿ, ಅವರ ಮನೆಮನೆಗೆ ತೆರಳಿ ಕರಪತ್ರ ಹಂಚಲಾಗುವುದು. ಫಲಾನುಭವಿಗಳನ್ನು ಮಾತನಾಡಿಸಿ ಒಂದು ಕೋಟಿಗಿಂತ ಹೆಚ್ಚು ಕುಟುಂಬಗಳನ್ನು ಸಂಪರ್ಕಿಸುವುದು ಉದ್ದೇಶ.

ವಾಹನಗಳಿಗೆ ಸ್ಟಿಕರ್‌
ಬಿಜೆಪಿ ಸರಕಾರಗಳ ಯೋಜನೆಗಳಿಂದ ಈ ಕುಟುಂಬಗಳ ಸಶಕ್ತೀಕರಣ ಆಗಿದ್ದನ್ನು ಜನರಿಗೆ ವಿವರಿಸುವುದು, ವಾಹನಗಳ ಮೇಲೆ ಸ್ಟಿಕರ್‌ ಅಂಟಿಸುವ ಕೆಲಸವೂ ನಡೆಯಲಿದೆ. ಕನಿಷ್ಠ ಮೂರು ಕೋಟಿ ಸ್ಟಿಕರ್‌ಗಳನ್ನು ಹಂಚಲಾಗುವುದು. ಕಿಸಾನ್‌ ಸಮ್ಮಾನ್‌, ಉಜ್ವಲ, ಮುದ್ರಾ ಸೇರಿದಂತೆ ಸರ್ಕಾರ ಜಾರಿಗೊಳಿಸಿದ ಹತ್ತಾರು ಕಾರ್ಯಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸಲಾಗುವುದು. ಏಕಕಾಲದಲ್ಲಿ ಎಲ್ಲ ಬೂತ್‌ಗಳಲ್ಲಿ, ಮಂಡಲಗಳಲ್ಲಿ ಅಭಿಯಾನ ಮುಂದುವರಿಯಲಿದೆ.

ಮಿಸ್ಡ್‌ ಕಾಲ್‌ ಅಭಿಯಾನ
ಇದೇ ವೇಳೆ, ಮಿಸ್ಡ್‌ ಕಾಲ್‌ ಕೊಡುವ ಮೂಲಕ ಸದಸ್ಯತ್ವ ನೋಂದಣಿ ಅಭಿಯಾನವೂ ನಡೆಯಲಿದೆ. ಒಂದು ಕೋಟಿಗೂ ಹೆಚ್ಚು ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ. ಸಮಾಜದ ಸಮಸ್ತರನ್ನು ಪಕ್ಷದ ಜೊತೆ ಸೇರ್ಪಡೆ ಮಾಡಿ, ದೇಶ ಕಟ್ಟುವ ಕಾರ್ಯದಲ್ಲಿ ಎಲ್ಲರನ್ನೂ ಜೊತೆಗೂಡಿಸಲಾಗುವುದು. ಬಿಜೆಪಿ ನೇತೃತ್ವದ ಸರಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಈ ಅಭಿಯಾನ ನಡೆಸಲಾಗುತ್ತಿದೆ.

ಸರ್ವ ರೀತಿಯಲ್ಲೂ ಸಜ್ಜಾಗಿದೆ ವಿಜಯಪುರ
ವಿಜಯಪುರದ ಸಿಂದಗಿ ಚೌಧರಿ ಲೇ ಔಟ್‌ನಲ್ಲಿ ವಿಜಯ ಸಂಕಲ್ಪ ಯಾತ್ರೆಯ ಬೃಹತ್‌ ಸಮಾವೇಶ ನಡೆಯಲಿದ್ದು, ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಲಾಗಿದೆ. ಉತ್ತರ ಕರ್ನಾಟಕದಲ್ಲಿ ಮತ್ತೆ ಕಮಲ ಅರಳಿಸುವುದು ಸೇರಿದಂತೆ ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಉದ್ದೇಶದ ಈ ಸಮಾವೇಶದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ, ಗೋಡೆ ಬರಹಕ್ಕೆ ಚಾಲನೆ ನೀಡಲಿದ್ದಾರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ.

ಸಮಾವೇಶದಲ್ಲಿ 50 ಸಾವಿರಕ್ಕೂ ಅಧಿಕ ಆಸನ ವ್ಯವಸ್ಥೆ ಮಾಡಲಾಗಿದ್ದು, ಒಂದು ಲಕ್ಷಕ್ಕೂ ಅಧಿಕ ಜನ ಸೇರುವ ಸಾಧ್ಯತೆ ಇದೆ. ಮಧ್ಯಾಹ್ನ ೧ ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ.

ಇದನ್ನೂ ಓದಿ | Karnataka Election | ಬಿಜೆಪಿಯವರೇ ನಳಿನ್‌ ಅವರನ್ನು ಚಪ್ಪಲಿ ಬಿಡುವ ಜಾಗದಲ್ಲಿ ಬಿಟ್ಟಿದ್ದಾರೆ ಎಂದ ಬಿ.ಕೆ. ಹರಿಪ್ರಸಾದ್‌

Exit mobile version