ವಿಜಯಪುರ: ಒಂದು ಎಲೆಕ್ಷನ್‌ಗಿಂತ ಇನ್ನೊಂದು ಎಲೆಕ್ಷನ್ (Karnataka Election) ಭಿನ್ನವಾಗಿರುವುದರಿಂದ ಎಲ್ಲ ಹಾಲಿ ಶಾಸಕರಿಗೆ ಮರಳಿ ಟಿಕೆಟ್ ಕೊಟ್ಟ ಉದಾಹರಣೆಗಳಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಈ ಮೂಲಕ ಎಲ್ಲ ಶಾಸಕರಿಗೆ ಟಿಕೆಟ್ ಸಿಗಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ವಿಜಯಪುರದ ಚಿಕ್ಕಗಲಗಲಿಯಲ್ಲಿ ಮಾತನಾಡಿದ ಅವರು, ಎಲ್ಲರಿಗೂ ನೂರಕ್ಕೆ ನೂರು ಟಿಕೆಟ್ ಕೊಟ್ಟ ಉದಾಹರಣೆಗಳಿಲ್ಲ. ಸಮೀಕ್ಷೆ, ಶಾಸಕರ ಕಾರ್ಯವೈಖರಿ ಸೇರಿ ಎಲ್ಲಾ ಮಾನದಂಡಗಳನ್ನು ನೋಡಿಕೊಂಡು ಟಿಕೆಟ್ ನೀಡಲಾಗುತ್ತದೆ ಎಂದು ಹೇಳಿದರು.
ಬಿಜೆಪಿ ಹಾಲಿ ಶಾಸಕರಿಗೆ ಟಿಕೆಟ್ ತಪ್ಪಲಿದೆ ಎನ್ನುವ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪನವರು ಸಂಸದೀಯ ಮಂಡಳಿ ಸದಸ್ಯರು, ಅವರಿಗೆ ಮಾಹಿತಿ ಇರಬಹುದು, 70 ವಯಸ್ಸು ದಾಟಿದವರಿಗೆ ಟೀಕೆಟ್ ನೀಡಬೇಕೇ, ಬೇಡವೇ ಎನ್ನುವ ವಿಚಾರ ನಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಪ್ರತಿಯೊಂದು ಕ್ಷೇತ್ರದ ಕುರಿತು ಸಂಸದೀಯ ಮಂಡಳಿಯಲ್ಲಿ ಚರ್ಚೆ ನಡೆಯುತ್ತಿದೆ. ಆದರೆ, ನೂರಕ್ಕೆ ನೂರರಷ್ಟು ಎಲ್ಲರಿಗೂ ಟಿಕೆಟ್ ಸಿಗುತ್ತದೆ ಅಂತ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.
ಮಾಡಾಳ್ ವಿಚಾರಣೆಗೆ ಲೋಕಾಯುಕ್ತ ಸರ್ವ ಸ್ವತಂತ್ರ
ಇದೇ ವೇಳೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ ಕುರಿತಂತೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಈ ಪ್ರಕರಣದ ವಿಚಾರದಲ್ಲಿ ತನಿಖೆ ನಡೆಸಲು ಲೋಕಾಯುಕ್ತರು ಸರ್ವಸ್ವತಂತ್ರರು, ನ್ಯಾಯಾಲಯ ತೀರ್ಮಾನಕ್ಕೆ ನಾವೆಲ್ಲಾ ತಲೆ ಬಾಗಬೇಕಾಗುತ್ತದೆ, ಇದರ ನಂತರ ಲೋಕಾಯುಕ್ತರು ಮುಂದಿನ ತನಿಖೆ ನಡೆಸಿದ್ದಾರೆ. ಇದರಲ್ಲಿ ಯಾವುದನ್ನೂ ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸುಖಾಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಿದೆ, ಈ ಥರ ಆಪಾದನೆ ಮಾಡುವ ಮೂಲಕ ಅವರು
ಮಾಡಿರುವ ಕರ್ಮ, ಪಾಪ, ಭ್ರಷ್ಟಾಚಾರ ತೊಳೆದು ಹೋಗುವುದಿಲ್ಲ, ಅದು ಮತ್ತೆ ಬಂದೆ ಬರುತ್ತದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್ ಅವಧಿಯಲ್ಲಾದ ಭ್ರಷ್ಟಾಚಾರದ 59 ಪ್ರಕರಣಗಳನ್ನು ಎಸಿಬಿಗೆ ಕೊಟ್ಟದ್ದು, ಲೋಕಾಯುಕ್ತಕ್ಕೆ ಕೊಡುತ್ತೇವೆ. ಅಲ್ಲಿ ಕಾಂಗ್ರೆಸ್ ಬಣ್ಣ ಬಹಳಷ್ಟು ಬಯಲಾಗುತ್ತದೆ ಎಂದರು. ಇದೇವೇಳೆ ಮಾಡಾಳ್ ವಿರೂಪಾಕ್ಷಪ್ಪ ಮೆರವಣಿಗೆಗೆ ಇದು ಸರಿಯಲ್ಲ ಎಂಬ ಸ್ಪಷ್ಟ ಸೂಚನೆ ಕೊಟ್ಟಿದ್ದಾಗಿ ಹೇಳಿದರು.
ತಮ್ಮ ಮೇಲೆ ಡಿ.ಕೆ.ಶಿವಕುಮಾರ್. ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಬೊಮ್ಮಾಯಿ, ಆ ಪುಣ್ಯಾತ್ಮನಿಗೂ ಭ್ರಷ್ಟಾಚಾರಕ್ಕೂ ಬಿಡದ ನಂಟಿದೆ. ಅವರ ಬಾಯಲ್ಲಿ ಈ ರೀತಿ ಬರುವುದು ಸಹಜ ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಯವರನ್ನು ಹಿಂದೂ ಉಗ್ರ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ ಸಿಎಂ, ಕಾಂಗ್ರೆಸ್ ನವರಿಗೆ ದೇಶಭಕ್ತರು ಉಗ್ರರ ಹಾಗೆ ಕಾಣುತ್ತಾರೆ, ನಮಗೆ ದೇಶದ್ರೋಹಿಗಳು ಉಗ್ರರ ಹಾಗೇ ಕಾಣುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : SCST Reservation: ಮತ್ತೆ ಮತ್ತೆ ಅವರೇ ಮೀಸಲಾತಿ ಲಾಭ ಪಡೆಯುತ್ತಿದ್ದಾರೆ; ಸೋಷಿಯಲ್ ಆಡಿಟಿಂಗ್ ಆಗಬೇಕು ಎಂದ ಸಿಎಂ ಬೊಮ್ಮಾಯಿ