Site icon Vistara News

Karnataka Election: ಬೂತ್ ವಿಜಯ ಅಭಿಯಾನವು ವಿಧಾನಸಭಾ ಚುನಾವಣೆಗೆ ಬಿಜೆಪಿ ಸಜ್ಜಾಗಿರುವುದರ ದ್ಯೋತಕ: ಮೇಘರಾಜ್‌

Booth Vijay Abhiyana sagara

ಸಾಗರ: ಮುಂದಿನ ವಿಧಾನಸಭಾ ಚುನಾವಣೆ (Karnataka Election) ಎದುರಿಸಲು ಬಿಜೆಪಿ ಸಜ್ಜಾಗಿದೆ ಎನ್ನುವುದಕ್ಕೆ ದ್ಯೋತಕವಾಗಿ ಬೂತ್ ವಿಜಯ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ತಿಳಿಸಿದರು.

ಇಲ್ಲಿನ ಶ್ರೀನಗರದ ಎಂಟನೇ ವಾರ್ಡ್‍ನ 61ನೇ ಬೂತ್‍ನಲ್ಲಿ ಬಿಜೆಪಿ ನಗರ ಮಂಡಲದ ವತಿಯಿಂದ ಶನಿವಾರ (ಜ.೨೧) ಹಮ್ಮಿಕೊಳ್ಳಲಾಗಿದ್ದ ಬೂತ್ ವಿಜಯ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಜ. 21 ರಿಂದ 29ರವರೆಗೆ ರಾಜ್ಯಾದ್ಯಂತ ಬೂತ್ ವಿಜಯ ಅಭಿಯಾನ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪಕ್ಷವನ್ನು ಸದೃಢಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸಹ ಬಿಜೆಪಿ ಜತೆಗೆ ಎಲ್ಲ ಮೋರ್ಚಾಗಳು ಅಭಿಯಾನ ಯಶಸ್ವಿಗೆ ತನ್ನದೇ ಯೋಜನೆ ಹಾಕಿಕೊಂಡು ಕಾರ್ಯಯೋಜನೆ ರೂಪಿಸಿ ಚಾಲನೆ ನೀಡಲಾಗಿದೆ. ಸಂಸದರು, ಶಾಸಕರ ಅಭಿವೃದ್ಧಿ ಕೆಲಸಗಳ ಕರಪತ್ರ ವಿತರಣೆ, ಮಿಸ್ಡ್‌ ಕಾಲ್ ನೀಡುವ ಮೂಲಕ ಹೊಸ ಸದಸ್ಯರ ಸೇರ್ಪಡೆ, ಸಾಮೂಹಿಕವಾಗಿ ಮನ್ ಕಿ ಬಾತ್ ವೀಕ್ಷಣೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸುವುದು ಮತ್ತು ಫಲಾನುಭವಿಗಳ ಜತೆ ಚರ್ಚೆ ಸೇರಿದಂತೆ ಪ್ರಮುಖ ಐದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಇದನ್ನೂ ಓದಿ | Freebies | ಮಹಿಳೆಯರಿಗೆ ಮಾಸಿಕ 2000 ರೂ. ಭರವಸೆ | ಆಮಿಷ ಹುಟ್ಟಿಸಿದ ಇತರ ರಾಜ್ಯಗಳ ಗತಿ ಏನಾಗಿದೆ‌?

ಆಂತರಿಕ ವ್ಯವಸ್ಥೆ ಸಜ್ಜಗೊಳಿಸುವುದು, ಬೂತ್ ಸಶಕ್ತಗೊಳಿಸುವ ಕೆಲಸವನ್ನು ಮಾಡಲಾಗುತ್ತಿದೆ. ಮನೆಗಳಿಗೆ ಧ್ವಜ ಹಾಕುವ ಮೂಲಕ ಇದು ಬಿಜೆಪಿ ಮನೆ ಗುರುತಿಸಿ ಮಾನಸಿಕವಾಗಿ ಪರಿವರ್ತನೆ ಮಾಡಲಾಗುತ್ತಿದೆ. ಬೂತ್ ವಿಜಯದ ನಂತರ ವಿಜಯ ಸಂಕಲ್ಪ ಕಾರ್ಯವನ್ನು ನಡೆಸಿ ಚುನಾವಣೆಯ ಮೊದಲ ಹೆಜ್ಜೆ ಇಡಲಾಗಿದೆ. ಈಗಾಗಲೇ ಕಾರ್ಯಕರ್ತರ ಪಡೆ ಚುನಾವಣೆಗೆ ಸಜ್ಜುಗೊಳಿಸಲಾಗಿದೆ ಎಂದರು.

ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಮಾತನಾಡಿ, ಬೂತ್ ವಿಜಯ ಸಂಕಲ್ಪ ಅಭಿಯಾನ ಕಾರ್ಯಕರ್ತರಿಗೆ ಶಕ್ತಿಯನ್ನು ತುಂಬಿದೆ. ಕೇಂದ್ರ, ರಾಜ್ಯ, ಶಾಸಕರು, ನಗರಸಭೆ ಆಡಳಿತ ನೀಡಿದ ಯೋಜನೆ ಕುರಿತು ಮತದಾರರ ಜತೆ ಅಭಿಯಾನದಲ್ಲಿ ಚರ್ಚೆ ನಡೆಸಲು ಸೂಚನೆ ನೀಡಲಾಗಿದೆ. ಬಿಜೆಪಿ ಸದೃಢಗೊಳಿಸುವಲ್ಲಿ ಈ ಅಭಿಯಾನ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರ ಘಟಕದ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್, ಜನಪರ ಕಾರ್ಯಗಳನ್ನು ಜನರಿಗೆ ತಿಳಿಸುವ ಮಹತ್ತರ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ನಗರದ 49 ಬೂತ್‍ಗಳಲ್ಲೂ ಏಕಕಾಲಕ್ಕೆ ಅಭಿಯಾನಕ್ಕೆ ಜಿಲ್ಲಾಧ್ಯಕ್ಷರು ಚಾಲನೆ ನೀಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ | WOMENS IPL | ಮಹಿಳೆಯರ ಐಪಿಎಲ್ ತಂಡ ಖರೀದಿಸಲು ಆಸಕ್ತಿ ತೋರಿದ 30 ಕಂಪನಿಗಳು

ಪಕ್ಷದ ಪ್ರಮುಖರಾದ ಸಂತೋಷ್ ಶೇಟ್, ಸತೀಶ್ ಕೆ., ಚೇತನ್, ರತ್ನಾಕರ ಶೇಟ್, ಎಂ.ಆರ್.ಮಹೇಶ್, ಸುರೇಶ್ ಕಂಬಳಿ, ಪರಶುರಾಮ್, ಸತೀಶ್ ಬಾಬು, ಹಬೀಬುಲ್ಲಾ, ನಗರಸಭೆ ಸದಸ್ಯರಾದ ಮೈತ್ರಿ ಪಾಟೀಲ್, ಭಾವನಾ ಸಂತೋಷ್, ಸುಧಾ ಉದಯ್, ಜನಾರ್ಧನ್ ಉಡುಪ, ರಾಧಿಕಾ ಪೈ ಇನ್ನಿತರರು ಹಾಜರಿದ್ದರು.

Exit mobile version