Site icon Vistara News

Karnataka Elections : ಅಪಾಯದಲ್ಲಿರುವುದು ಸಂವಿಧಾನವಲ್ಲ, ಕಾಂಗ್ರೆಸ್‌ ಎಂದ ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ

Sadhvi Niranjan jyothi

#image_title

ವಿಜಯಪುರ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ತಾಯಿ ಭಾರತಿಯನ್ನು ವಿದೇಶದಲ್ಲಿ ಅಪಮಾನ ಮಾಡಿದ್ದಾರೆ. ತಾಯಿಗೆ ಅಪಮಾನ ಮಾಡಿದ ವ್ಯಕ್ತಿಯನ್ನು ಸಹಿಸಲು ಸಾಧ್ಯವಿಲ್ಲ. ಹೀಗಾಗಿ ಉತ್ತರ ಪ್ರದೇಶ ಮಾದರಿಯಲ್ಲಿ ಕರ್ನಾಟಕದಲ್ಲೂ (Karnataka Elections) ಕಾಂಗ್ರೆಸ್‌ ಮುಕ್ತಗೊಳಿಸುವ ಸಂಕಲ್ಪ ಮಾಡಬೇಕು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಗ್ರಾಮೀಣಾಭಿವೃದ್ಧಿ ಖಾತೆಯ ರಾಜ್ಯ ಸಚಿವರಾದ ಸಾಧ್ವಿ ನಿರಂಜನ‌ ಜ್ಯೋತಿ (Sadhvi Niranjan Jyothi) ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ನಾಗಠಾಣ ಮತಕ್ಷೇತ್ರದ ಸಾಯಿ ವಿಹಾರದಲ್ಲಿ ನಡೆದ ಬಿಜೆಪಿ ಮಹಿಳಾ ಮೋರ್ಚಾ ಸಮಾವೇಶ ಉದ್ಘಾಟಿಸಿ ಮತ್ತು ಅದಕ್ಕೆ ಪೂರ್ವದಲ್ಲಿ ಮಾಧ್ಯಮಗಳ ಜತೆ ಮಾತನಾಡಿದರು.

ʻʻಭಾರತದಲ್ಲಿ ಸಂವಿಧಾನ ಅಪಾಯದಲ್ಲಿದೆ ಎಂದು ವಿದೇಶ ನೆಲದಲ್ಲಿ ನಿಂತು ರಾಹುಲ್ ಗಾಂಧಿ ಹೇಳಿರುವುದು ಭಾರತ ಮಾತೆಗೆ ಅಪಮಾನ ಮಾಡಿದಂತೆ. ವಾಸ್ತವವಾಗಿ ಭಾರತೀಯ ಸಂವಿಧಾನ ಅಪಾಯದಲ್ಲಿ ಇದ್ದದ್ದು ಕಾಂಗ್ರೆಸ್ ಅವಧಿಯಲ್ಲಿ. ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದಾಗ ಸಂವಿಧಾನ ಅಪಾಯದಲ್ಲಿತ್ತು. ಈಗ ದೇಶದ ಸಂವಿಧಾನ ಸುರಕ್ಷಿತವಾಗಿದೆ. ಅಪಾಯದಲ್ಲಿರುವುದು ಸಂವಿಧಾನವಲ್ಲ, ಅಪಾಯದಲ್ಲಿ ಇರುವುದು ಕಾಂಗ್ರೆಸ್‌ ಪಕ್ಷʼʼ ಎಂದು ಸಾಧ್ವಿ ಹೇಳಿದರು.

ʻʻಸಂಸತ್ತಿನಲ್ಲಿ ಅಧಿವೇಶನ ನಡೆಯುತ್ತಿತ್ತು. ಅಲ್ಲಿ ಮುಕ್ತವಾಗಿ ಚರ್ಚೆ ನಡೆಸಬೇಕಾಗಿತ್ತು. ಅದು ಬಿಟ್ಟು ಈ ರೀತಿ ಮನೆಯ ಗುಟ್ಟನ್ನು ಜಗತ್ತಿಗೆ ಗೊತ್ತಾಗುವಂತೆ ಮಾಡಿರುವದು ಸರಿಯಲ್ಲ. ರಾಹುಲ್ ಗಾಂಧಿ ಕೂಡಲೇ ದೇಶದ ಜನರ ಕ್ಷಮೆ ಯಾಚಿಸಬೇಕುʼʼ ಎಂದು ನುಡಿದರು.

ಬೇರೆ ರಾಜ್ಯದಲ್ಲಿ ಯಾಕೆ ಜಾರಿಗೆ ತಂದಿಲ್ಲ?

ʻʻರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎರಡು ಸಾವಿರ ರೂ. ನೀಡುವುದಾಗಿ ಹೇಳಿದ್ದೀರಿ. ನಿಮ್ಮದೇ ಸರ್ಕಾರ ಅಧಿಕಾರದಲ್ಲಿರುವ ಬೇರೆ ರಾಜ್ಯದಲ್ಲಿ ಯಾಕೆ ಜಾರಿಗೆ ತಂದಿಲ್ಲʼʼ ಎಂದು ಪ್ರಶ್ನಿಸಿದರು. ʻʻಕಾಂಗ್ರೆಸ್ ಅವಧಿಯಲ್ಲಿ ಆಗದ ಕೆಲಸಗಳನ್ನು ಮೋದಿ ಎಂಟು ವರ್ಷದಲ್ಲಿ ಮಾಡಿದ್ದಾರೆ. ಮೋದಿ ಅವರ ಆಡಳಿತ ನೋಡಿ ಕಾಂಗ್ರೆಸ್ ನಾಯಕರು ಕಲಿಯಬೇಕಿದೆʼʼ ಎಂದರು.

ʻʻರಾಹುಲ್ ಗಾಂಧಿಯವರೇ ಉತ್ತರ ಪ್ರದೇಶದಲ್ಲಿ ನಿಮ್ಮ ತಾಯಿ ಮಾತ್ರ ಗೆದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಉತ್ತರ ಪ್ರದೇಶ ಮಾಡಲಾಗುವುದುʼʼ ಎಂದು ಎಚ್ಚರಿಸಿದರು.

ಇದನ್ನೂ ಓದಿ : Karnataka Election: ಬಿಜೆಪಿಗೆ ಗುಡ್‌ಬೈ ಹೇಳಿದ ಬಿಎಸ್‌ವೈ ಆಪ್ತ: ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರ್ಪಡೆ

Exit mobile version