ಮಹಲಿಂಗೇಶ್ ಹಿರೇಮಠ, ವಿಸ್ತಾರ ನ್ಯೂಸ್ ಗದಗ
ಜನಸೇವೆ ಮಾಡಬೇಕೆಂಬ ಹಂಬಲ ಹೊತ್ತ ಸಿವಿಲ್ ನ್ಯಾಯಾಧೀಶರೊಬ್ಬರು ತಮ್ಮ ಉನ್ನತ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶಿಸಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ.
ಹೌದು, ಗದಗದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾಗಿದ್ದ ಸುಭಾಶ್ಚಂದ್ರ ರಾಠೋಡ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರು ಕಲಬುರಗಿ ಜಿಲ್ಲೆಯ ಚಿತ್ತಾಪುರ ಮತಕ್ಷೇತ್ರದಿಂದ ಜೆಡಿಎಸ್ ಅಬ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿದ್ದಾರೆ.
ಡಾ.ಸುಭಾಶ್ಚಂದ್ರ ರಾಠೋಡ ಅವರು ಮೂಲತಃ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಸಂಕನಾಳ ಗ್ರಾಮದವರು. ಕಾರ್ಮಿಕರ ಕಾನೂನು ವಿಷಯದಲ್ಲಿ ಪಿಎಚ್‌ಡಿ ಪಡೆದ ಲಂಬಾಣಿ ಜನಾಂಗದ ಮೊದಲ ಯುವಕ ಎನ್ನುವ ಗೌರವವೂ ಇವರಿಗಿದೆ.
2010ರಲ್ಲಿ ವಕೀಲ ವೃತ್ತಿ ಆರಂಭಿಸಿದ ಸುಭಾಶ್ಚಂದ್ರ ಅವರು ಜೊತೆಗೆ ಅತಿಥಿ ಉಪನ್ಯಾಸಕರಾಗಿಯೂ ಕೆಲಸ ಮಾಡಿದ್ದಾರೆ. 2013ರಿಂದ ವಕೀಲ ವೃತ್ತಿಯೊಂದಿಗೆ ಸಾಮಾಜಿಕ ಹೋರಾಟಗಾರರಾದ ಅಣ್ಣಾ ಹಜಾರೆ, ನ್ಯಾಯಮೂರ್ತಿ ಸಂತೋಷ ಹೆಗ್ಡೆ ಮತ್ತು ಎಸ್.ಆರ್.ಹಿರೇಮಠ ಸಲಹೆ ಹಾಗೂ ಪ್ರೇರಣೆಯಿಂದ ಸಾಮಾಜಿಕ ಸೇವೆ ಬಗ್ಗೆ ಹೆಚ್ಚಿನ ಒಲವು ಪ್ರಕಟಿಸಿದರು.
ನ್ಯಾಯಾಧೀಶರಾಗಿ ಸೇವೆ
2016ರಲ್ಲಿ ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡ ಸುಭಾಶ್ಚಂದ್ರ ಅವರು 2016ರಿಂದ 2019ರ ವರೆಗೆ ಕಲಬುರಗಿಯಲ್ಲಿ, 2019ರಿಂದ 2022ರವರೆಗೆ ಚಿತ್ತಾಪುರದಲ್ಲಿ, ನಂತರ 2022ರಿಂದ 2023ರ ವರೆಗೆ ಗದಗದಲ್ಲಿ ಪ್ರಿನ್ಸಿಪಾಲ್ ಸಿವಿಲ್ ಜಡ್ಜ್ ಆಗಿ ಕಾರ್ಯನಿರ್ವಹಿಸಿ ಕಳೆದ ಜನವರಿ ೧೮ರಂದು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ ರಾಜಕೀಯ ಕಣಕ್ಕೆ ಧುಮುಕಿದ್ದಾರೆ.
ಸಮಾಜದಲ್ಲಿ ಮಿತಿಮೀರಿದ ಭ್ರಷ್ಟಾಚಾರ, ಅನ್ಯಾಯ, ಶೋಷಣೆ ವಿರುದ್ಧ ಆಕ್ರೋಶ ಹೊಂದಿರುವ ರಾಥೋಡ್ ಅವರು, ನ್ಯಾಯಾಧೀಶರ ಹುದ್ದೆಗೆ ರಾಜೀನಾಮೆ ನೀಡಿದರೂ ವಕೀಲ ವೃತ್ತಿಯ ಜೊತೆಗೆ ಸದೃಢ ಮತ್ತು ಸಮರ್ಥ ಸಮಾಜ ನಿರ್ಮಾಣಕ್ಕಾಗಿ ಪಣ ತೊಟ್ಟಿದ್ದಾರೆ.
ಅವರನ್ನು ಜೆಡಿಎಸ್ ನಾಯಕರಾಗಿರುವ ಎಚ್.ಡಿ. ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿಎಂ. ಇಬ್ರಾಹಿಂ ಅವರು ಜೆಡಿಎಸ್ ಪಕ್ಷಕ್ಕೆ ಆಹ್ವಾನಿಸಿದ್ದು, ಪಕ್ಷದಿಂದ ಟಿಕೆಟ್ ಬಹುತೇಕ ದೃಢಪಟ್ಟಿದೆ.
ಇದನ್ನೂ ಓದಿ : Siddaramaiah: ಕರ್ನಾಟಕ ರಾಜಕಾರಣದಲ್ಲಿ ನಾನು ಎಂದೆಂದಿಗೂ ಪ್ರಸ್ತುತನಾಗಿಯೇ ಇರುತ್ತೇನೆ: ಸಿದ್ದರಾಮಯ್ಯ