ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಬಿಜೆಪಿಗೆ ಬಹುಮತ ಬರುವುದಿಲ್ಲ. ಆದರೆ, ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಮಾತನಾಡಿದ್ದಾರೆನ್ನಲಾದ ಆಡಿಯೊ ಬಹಿರಂಗವಾದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಪಿವೈ ಅವರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ ಸಿಎಂ ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪ್ಲೇಟ್ ಉಲ್ಟಾ ಮಾಡಿರುವ ಯೋಗೇಶ್ವರ್, ಆ ಆಡಿಯೊ ತನ್ನದಲ್ಲ, ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.
ಆಡಿಯೊ ವೈರಲ್ ಬೆನ್ನಲ್ಲೇ ಅವರಿಗೆ ಕರೆ ಮಾಡಿರುವ ಸಿಎಂ ಬೊಮ್ಮಾಯಿ ಸಿ.ಪಿ. ಯೋಗಿಶ್ವರ್ ಅವರನ್ನು ಮನೆಗೆ ಕರೆಸಿಕೊಂಡಿದ್ದಾರೆ. ಚುನಾವಣಾ ಸಮಯದಲ್ಲಿ ಬಾಯಿಗೆ ಬಂದಂತೆ ಮಾತನಾಡಬೇಡಿ. ಪಕ್ಷಕ್ಕೆ ಡ್ಯಾಮೇಜ್ ಮಾಡಿದರೆ ಸಹಿಸುವುದಿಲ್ಲ ಎಂದ ಎಚ್ಚರಿಕೆ ನೀಡಿದ್ದಾರೆ. ಸಿಎಂ ಭೇಟಿ ಬಳಿಕ ಹೊರಗೆ ಬಂದ ಸಿಪಿವೈ, ಅದು ತಮ್ಮ ಆಡಿಯೊ ಅಲ್ಲ. ತಾವು ಹಾಗೆ ಹೇಳಿಯೇ ಇಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಫೇಕ್ ಆಡಿಯೊ; ಸಿಪಿವೈ
ಈಗ ಎಲ್ಲೆಡೆ ವೈರಲ್ ಆಗಿರುವ ಆಡಿಯೊ ನನ್ನದಲ್ಲ. ನಾನು ಏನೇ ಇದ್ದರೂ ನೇರವಾಗಿ ಮಾತನಾಡೋನು. ಅದು ನಕಲಿ ಎಂದು ಸಿಪಿವೈ ಹೇಳಿಕೆ ನೀಡಿದ್ದು, ನಾವು ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ಮಾಧ್ಯಮದವರಿಗೆ ತಿಳಿಸಿದರು.
ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಏನೂ ಅಭಿವೃದ್ಧಿ ಮಾಡಿಲ್ಲ. ಕುಮಾರಸ್ವಾಮಿ ವಿರುದ್ಧ ನಾನು ಕೆಲಸ ಮಾಡುತ್ತಿದ್ದೇನೆ. ನಾನು ಕ್ಷೇತ್ರದಲ್ಲಿ ಪಾದಯಾತ್ರೆ ಮಾಡುತ್ತೇನೆ. ಜನರು ನನ್ನ ಕೈ ಹಿಡಿಯುವ ವಿಶ್ವಾಸವಿದೆ. ಜನರೇ ತೀರ್ಮಾನ ಮಾಡುತ್ತಾರೆ. ಸಚಿವನಾಗಬೇಕು ಅಂತ ನಾನೇನು ವೈಯಕ್ತಿಕವಾಗಿ ಆಸೆಪಟ್ಟಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ಆ ಬಗ್ಗೆ ನಿರ್ಧಾರ ಮಾಡುತ್ತಾರೆ. ಮೇ ಬಳಿಕ ನಮ್ಮ ಸರ್ಕಾರ ಬರಲಿದೆ. ಆಗ ಅಭಿಮಾನದಿಂದ ಸಚಿವ ಸ್ಥಾನ ಕೇಳುತ್ತೇನೆ. ಈಗ ನಾನು ಸೋತಿದ್ದೇನೆ, ಹೇಗೆ ಕೇಳಲಿ? ಸಚಿವ ಸ್ಥಾನ ವಿಸ್ತರಣೆ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ | Shri Ram-Janaki Yatra | ರಾಮ ಜನ್ಮಸ್ಥಾನದಿಂದ ಸೀತೆ ಹುಟ್ಟಿದ ಊರಿಗೆ ಶ್ರೀ ರಾಮ-ಜಾನಕಿ ಯಾತ್ರೆ: ಫೆ.17ರಿಂದ ಶುರು