Site icon Vistara News

Karnataka Election : ಸಿದ್ದರಾಮಯ್ಯ ಸಾಕು ಮಾಡು ನಿನ್ನ ಹೈಡ್ರಾಮಾ, ನಿನಗೆ ವರುಣಾ ಒಂದೇ ಆಸರೆ ಎಂದ ಇಬ್ರಾಹಿಂ

CM Ibrahim

#image_title

ಕೋಲಾರ: ʻʻಸಿದ್ದರಾಮಯ್ಯ ಸಾಕು‌ ಮಾಡು ನಿನ್ನ ಹೈಡ್ರಾಮಾ, ನಿನಗೆ ಇನ್ನೂ ನಾಲ್ಕು ಸಲ ರಾಜಕೀಯ ಭವಿಷ್ಯ ಬೇಕಾದರೆ ವರುಣಾಗೆ ಹೋಗಿ ಸ್ಪರ್ಧೆ ಮಾಡಿದರೆ ಒಳ್ಳೆಯದುʼʼ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ (Karnataka Election) ಸಿ.ಎಂ. ಇಬ್ರಾಹಿಂ ಸಲಹೆ ನೀಡಿದ್ದಾರೆ.

ಕೋಲಾರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ʻʻಸಿದ್ದರಾಮಯ್ಯ ಕೋಲಾರದಲ್ಲಿ ತಪ್ಪಿ ಸಿಕ್ಕಿಕೊಂಡಿದ್ದಾರೆ. ಒಳಗೆ ಬರೋಕೂ ಆಗ್ತಿಲ್ಲ, ಹೊರಗೆ ಹೋಗೋಕು ಆಗ್ತಿಲ್ಲ. ಸಿದ್ದರಾಮಯ್ಯ ನಮಗೆ ಒಳ್ಳೆಯ ಸ್ನೇಹಿತರು. ಅವರು ಗೆಲ್ಲಬೇಕು. ಹಾಗಾಗಿ ಎಲ್ಲಾದ್ರೂ ಒಳ್ಳೆ ಕಡೆ ಎಲೆಕ್ಷನ್‌ಗೆ ನಿಲ್ಲಲಿʼʼ ಎಂದು ಹೇಳಿದರು. ಸಿದ್ದರಾಮಯ್ಯ ಅವರ ಮನೆಗೆ ಮುತ್ತಿಗೆ ಹಾಕಿದ ಬಾದಾಮಿಯ ನಾಗರಿಕರು ʻಕೋಲಾರ ಬೇಡ ಬಾದಾಮಿಗೆ‌ ಬನ್ನಿʼ ಎಂದು ಕರೆಯುತ್ತಿದ್ದಾರೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು, ಇದೆಲ್ಲ ಬರೀ ಡ್ರಾಮಾ. ಅವರು ವರುಣಾದಲ್ಲಿ ನಿಂತ್ರೆ ಒಳ್ಳೆಯದುʼʼ ಎಂದರು.

ಆದರೂ ದೇವರು ನಿಮಗೆ ಒಳ್ಳೆದು ಮಾಡ್ಲಿ

ʻʻಆವತ್ತು ನೀವು ನಮ್ಮ ಮಾತು ಕೇಳಿ ಬಾದಾಮಿಯಲ್ಲಿ ಚುನಾವಣೆಗೆ ನಿಂತು ಗೆದ್ರಿ. ಈಗ ನೀವು ನಮ್ ಜೊತೆ ಇಲ್ಲ, ಆದರೂ ನಿಮಗೆ ಒಳ್ಳೆದಾಗಲಿʼʼ ಎಂದ ಅವರು, ʻʻಹುಮನಾಬಾದ್ ಕ್ಷೇತ್ರದಲ್ಲಿ ನನ್ನ ಮಗನ ವಿರುದ್ಧ ಪ್ರಚಾರ ಮಾಡಿ ಬಂದಿದ್ದೀರ. ಯಾರ ತಂದೆಯಿಂದ ನೀವು ಎರಡು ಸಲ ಗೆದ್ರೋ, ಅಂತವನ ಮಗನಿಗೆ ವಿಷ ಕೊಡೋಕೆ ಹೋಗಿದ್ದೀರಾ. ಅದ್ರೂ ದೇವರು ನಿಮಗೆ ಒಳ್ಳೆಯದು ಮಾಡಲಿʼʼ ಎಂದು ಹೇಳಿದರು.

ಚಾಮುಂಡೇಶ್ವರಿಯಲ್ಲಿ ಗೆಲ್ಲಿಸಿದ್ದೇ ನಾವು
ಈ ಹಿಂದೆ ಚಾಮುಂಡೇಶ್ವರಿ ಕ್ಷೇತ್ರ ಉಪಚುನಾವಣೆಯಲ್ಲಿ ವರ್ತೂರು ಪ್ರಕಾಶ್‌ ಅವರು ಸಿದ್ದರಾಮಯ್ಯ ಪರವಾಗಿ ಕೆಲಸ ಮಾಡಿದ್ದರು ಎಂದು ನೆನಪಿಸಿದ ಅವರು, ಆವತ್ತು ಎಸ್‌ಡಿಪಿಐ ಮತ್ತು ಪಿಎಫ್‌ಐ ಮತಗಳು ಸಿದ್ದರಾಮಯ್ಯರನ್ನು ಗೆಲ್ಲಿಸಿದ್ದವು ಎಂದರು.

ʻʻನಾನು ಚುನಾವಣೆಯಲ್ಲಿ ೩೦,೦೦೦ ಮತಗಳಿಂದ ಗೆಲ್ತೀನಿ ಅಂತ ಸಿದ್ದರಾಮಯ್ಯ ಹೇಳ್ತಿದ್ರು. ನಾನು ನಿಲ್ಲಬೇಡಿ ಅಂದಿದ್ದೆ. ಎಲೆಕ್ಷನ್‌ಗೆ ೧೦ ದಿನ ಇರುವಾಗ ಗೆಲ್ಲೋದು ಕಷ್ಟ, ಸೋತು ಬಿಡ್ತೀನಿ ಕಣಯ್ಯ, ಎಲ್ಲರೂ ಒಂದಾಗಿದ್ದಾರೆ ಅಂತ ಹೇಳಿದ್ರು. ನಾವೆಲ್ಲ ಇದೀವಿ ಎಂದು ಧೈರ್ಯ ತುಂಬಿದೆ. ರಾತ್ರಿ ಹಗಲು ಅವರ ಪರ ಕೆಲಸ ಮಾಡಿದ್ದೆ. ಚುನಾವಣೆ ಖರ್ಚಿಗಾಗಿ ಸಿದ್ದರಾಮಯ್ಯರಿಗಾಗಿ ನನ್ನ 60 ಲಕ್ಷ ಮೌಲ್ಯದ ಸೈಟು ಮಾರಿ 30 ಲಕ್ಷ ಅವರ ಕೈಗೆ ಕೊಟ್ಟಿದ್ದೇನೆʼʼ ಎಂದು ಹಿಂದಿನ ಕಥೆ ನೆನಪಿಸಿಕೊಂಡಿದ್ದಾರೆ.

ʻʻಆವತ್ತು ನಾನು ದೇವೇಗೌಡ್ರ ಮಾತು ಕೇಳಿದ್ರೆ ಇವತ್ತು ಸಿದ್ದರಾಮಯ್ಯ ಇರುತ್ತಿರಲಿಲ್ಲ. ಅದೇ ರೀತಿ ಬಾದಾಮಿ ಕ್ಷೇತ್ರದಲ್ಲೂ ಇಂತಹ ಇತಿಹಾಸ ಇದೆ ಈಗ ಹೇಳೋಕೆ ಆಗಲ್ಲʼʼ ಎಂದರು.

ʻʻರಾಜ್ಯದಲ್ಲಿ ಜೆಡಿಎಸ್‌ಗೆ ಒಳ್ಳೆಯ ವಾತಾವರಣ ಇದೆ. ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಪೂರ್ವವದಿಂದ ಸೂರ್ಯ ಹುಟ್ಟೋದು ಎಷ್ಟು ಸತ್ಯವೋ, ಜೂನ್ ತಿಂಗಳಲ್ಲಿ ಕುಮಾರಸ್ವಾಮಿ ಅಧಿಕಾರ ವಹಿಸಿಕೊಳ್ಳೋದು ಸತ್ಯʼʼ ಎಂದರು ಇಬ್ರಾಹಿಂ.

ʻʻಕೊಟ್ಟ ಕುದುರೆಯನ್ನು ಏರದವನು ಶೂರನು ಅಲ್ಲ, ಧೀರನು ಅಲ್ಲ ಅಂತ ಕುಮಾರಸ್ವಾಮಿ ಅವರನ್ನು ಗೇಲಿ ಮಾಡುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಇಬ್ರಾಹಿಂ, ʻʻಅವರು ಕೊಟ್ಟಿದ್ದು ಕುದುರೆ ಅಲ್ಲ, ಕತ್ತೆ. ಅವರ ಬಳಿ ಇದ್ದ 12 ಕುದುರೆಗಳು ಹೋಯ್ತಲ್ವಾ? ಸಮ್ಮಿಶ್ರ ಸರ್ಕಾರ ತೆಗೆದಿದ್ದು ಸಿದ್ದರಾಮಯ್ಯʼʼ ಎಂದರು.

ಇದನ್ನೂ ಓದಿ : Siddaramaiah: ಸಿದ್ದರಾಮಯ್ಯ ಬಾದಾಮಿಯಿಂದಲೇ ಸ್ಪರ್ಧಿಸಬೇಕು ಎಂದ ಮತದಾರರು: ಮನೆಯೆದುರು ಧರಣಿ

Exit mobile version