ಪುತ್ತೂರು (ದಕ್ಷಿಣ ಕನ್ನಡ): ಪುತ್ತೂರು ಕ್ಷೇತ್ರಕ್ಕೆ ಎಲ್ಲಾ ಮೂಲ ಸೌಕರ್ಯ ಒದಗಿಸುವುದರ ಜೊತೆಗೆ ಇಲ್ಲಿ ತುಂಬಿ ಹೋಗಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು ತನ್ನ ಪ್ರಮುಖ ಗುರಿಯಾಗಿದೆ ಎಂದು ಪುತ್ತೂರು ವಿಧಾನ ಸಭಾ ಕ್ಷೇತ್ರದ (Karnataka Election 2023) ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ (Ashok kumar Rai) ತಿಳಿಸಿದ್ದಾರೆ.
ಅವರು ಶನಿವಾರ ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುತ್ತೂರಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. 94ಸಿ, ಅಕ್ರಮ ಸಕ್ರಮ ಕಡತಗಳು ಸಾಕಷ್ಟು ವಿಲೇವಾರಿಯಾಗದೆ ಬಾಕಿಯಾಗಿದೆ. ಹಣ ನೀಡದಿದ್ದಲ್ಲಿ ಜನರ ಕೆಲಸ ಆಗುತ್ತಿಲ್ಲ. ಹಣ ನೀಡಿದರೂ ಕೆಲವರಿಗೆ ಸತಾಯಿಸಲಾಗುತ್ತಿದೆ. ಇದೆಲ್ಲವನ್ನೂ ಪರಿಹರಿಸಲು ನನಗೆ ಜನರ ಆಶೀರ್ವಾದ ಬೇಕಾಗಿದೆ ಎಂದರು.
ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು, ಉದ್ಯೋಗ ಸೃಷ್ಟಿಗೆ ಕ್ರಮ
ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ, ಜನರಿಗೆ ಸಮರ್ಪಕ ಕುಡಿಯುವ ನೀರು, ಕೊಯ್ಲದಲ್ಲಿ ಪಶು ವೈದ್ಯಕೀಯ ಕಾಲೇಜು ಸ್ಥಾಪನೆ, ನಗರದಲ್ಲಿ ಸಮರ್ಪಕ ಡ್ರೈನೇಜ್ ವ್ಯವಸ್ಥೆ, ನಗರದಲ್ಲಿನ ಕಟ್ ಕನ್ವರ್ಷನ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದರ ಜೊತೆಗೆ ಉದ್ಯೋಗ ಸೃಷ್ಟಿಗೆ ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.
ನನಗೆ ಯಾರ ಮೇಲೂ ದ್ವೇಷವಿಲ್ಲ, ಯಾರನ್ನೂ ಟಾರ್ಗೆಟ್ ಮಾಡಿಲ್ಲ
ಎಸ್‍ಡಿಪಿಐ ತನ್ನ ಮೇಲೆ ಮಾಡಿರುವ ಆರೋಪದ ಬಗ್ಗೆ ಉತ್ತರಿಸಿದ ಅವರು, ʻʻನಾನು ಯಾರೊಂದಿಗೂ ದ್ವೇಷ ಹೊಂದಿಲ್ಲ. ಯಾರನ್ನೂ ಟಾರ್ಗೆಟ್ ಮಾಡಿಲ್ಲ. ರಾಜಕೀಯ ವಿಚಾರದಲ್ಲಿ ಕೆಲವೊಂದು ಹೇಳಿಕೆ ನೀಡಿದ್ದೇನೆಯೇ ಹೊರತು ಯಾರ ಮೇಲೆಯೂ ವೈಯಕ್ತಿಕ ಆರೋಪ ಮಾಡಿಲ್ಲ. ಜಲೀಲ್ ಕರೋಪಾಡಿ ಹತ್ಯೆಯ ಆರೋಪಿಗಳ ರಕ್ಷಣೆ ಮಾಡಿರುವ ಬಗ್ಗೆ ನನ್ನ ಮೇಲೆ ಮಾಡುತ್ತಿರುವ ಆರೋಪಗಳು ಚುನಾವಣಾ ಗಿಮಿಕ್ ಆಗಿದೆ. ಜಲೀಲ್ ಕರೋಪಾಡಿ ಅವರ ತಂದೆಯನ್ನು ಭೇಟಿಯಾಗಿ ಅವರ ಜೊತೆಗೆ ಈಗಾಗಲೇ ಮಾತುಕತೆ ಮಾಡಿದ್ದೇನೆʼʼ ಎಂದು ತಿಳಿಸಿದರು.
ಕಾಂಗ್ರೆಸ್ ಗೂಂಡಾಗಿರಿ ಮಾಡುತ್ತಿದೆ ಎಂಬ ಆರೋಪ ಸುಳ್ಳು
ʻʻನನಗೆ ಬಿಜೆಪಿಯೇ ಪ್ರಮುಖ ಎದುರಾಳಿಯಾಗಿದೆ. ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಯಿಂದ 20 ಸಾವಿರ ಹೆಚ್ಚು ಮತ ಪಡೆಯುವ ವಿಶ್ವಾಸವಿದೆʼʼ ಎಂದು ಹೇಳಿದ ಅವರು, ʻʻಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಯಾವುದೇ ಗೂಂಡಾಗಿರಿ ನಡೆಸಿಲ್ಲ. ಕಾಂಗ್ರೆಸ್ ಗೂಂಡಾಗಿರಿ ಮಾಡುತ್ತಿದೆ ಎನ್ನುವ ಬಿಜೆಪಿಯವರು ಮೊದಲಿಗೆ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಲಿ. ಕಾಂಗ್ರೆಸ್‍ನ ಗ್ಯಾರಂಟಿಯ ಬಗ್ಗೆ ದೂರುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷವು ಈ ಹಿಂದೆ ಕೃಷಿ ಪಂಪ್‍ಗೆ ಉಚಿತ ವಿದ್ಯುತ್ ನೀಡಿರುವುದು. ಪ್ರತಿ ಬಿಪಿಎಲ್ ಕುಟುಂಬಕ್ಕೆ 10 ಕೆಜಿ ಅಕ್ಕಿ ಮತ್ತು ಇತರ ಆಹಾರ ವಸ್ತು ನೀಡಿರುವುದು ಬಿಜೆಪಿಗರಿಗೆ ಮರೆತು ಹೋಗಿದೆಯೇʼʼ ಎಂದು ಪ್ರಶ್ನಿಸಿದರು.
ಮೇ 8ರಂದು ಪುತ್ತೂರಿನಲ್ಲಿ ನಡೆಯಲಿದೆ ಬೃಹತ್ ರ‍್ಯಾಲಿ
ಮೇ 8ರಂದು ಸಂಜೆ 3 ಗಂಟೆಗೆ ಪುತ್ತೂರಿನಲ್ಲಿ ಕಾಂಗ್ರೆಸ್‌ನ ಬೃಹತ್ ರ‍್ಯಾಲಿ ನಡೆಯಲಿದೆ. ಪುತ್ತೂರಿನ ಬೊಳುವಾರು ಜಂಕ್ಷನ್‍ನಿಂದ ಮುಖ್ಯ ರಸ್ತೆಯಲ್ಲಿ ದರ್ಬೆ ಜಂಕ್ಷನ್ ತನಕ ರ‍್ಯಾಲಿ ಸಾಗಲಿದೆ. ರ‍್ಯಾಲಿಯಲ್ಲಿ ಕಾಂಗ್ರೆಸ್ ನಾಯಕಿ, ಚಿತ್ರನಟಿ ರಮ್ಯಾ ಅವರು ಭಾಗವಹಿಸಲಿದ್ದಾರೆ. ಅದಕ್ಕೂ ಮೊದಲು ವಿಟ್ಲ ಮತ್ತು ಉಪ್ಪಿನಂಗಡಿಯಲ್ಲಿ ಮತಯಾಚನೆಯ ರ‍್ಯಾಲಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ನೋಡಿ : Karnataka Election : ಕರಾವಳಿ, ಮಲೆನಾಡಲ್ಲಿ ಯೋಗಿ ಹವಾ; ಪುತ್ತೂರಲ್ಲಿ ಪುತ್ತಿಲ ಎಫೆಕ್ಟ್ ತಗ್ಗಿಸಲು ಯತ್ನ