ವಿಜಯಪುರ: ಮುಂಬರುವ ವಿಧಾನಸಭಾ ಚುನಾವಣೆಯನ್ನು (Karnataka Election) ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯಾದ್ಯಂತ ಮಹಿಳಾ ಕಾಂಗ್ರೆಸ್ ಪಕ್ಷ ಸಂಘಟನೆಗೆ ಮುಂದಾಗಿದ್ದು, ಪ್ರತಿ ತಾಲೂಕಿನಲ್ಲಿ ಮಹಿಳಾ ಘಟಕದ ಬಲವರ್ಧನೆಗೆ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಂದಾಗಿದೆ ಎಂದು ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ ಮಾಹಿತಿ ನೀಡಿದರು.
ಈ ಕುರಿತು ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾರಿ ಶಕ್ತಿ, ಮನೆ ಮನೆಗೆ ಮಹಿಳಾ ಕಾಂಗ್ರೆಸ್ ಎನ್ನುವ ವಿನೂತನ ಪಕ್ಷ ಬಲವರ್ಧನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಯಾವುದೇ ಪಕ್ಷದಲ್ಲಾಗಿರಲಿ ಮಹಿಳೆಯರಿಗೆ ರಾಜಕೀಯ ಸ್ಥಾನಮಾನ ಸಿಗುವುದು ಸ್ವಲ್ಪ ಕಷ್ಟ. ಯಾರ ಮನೆಯಲ್ಲಿಯೂ ಒಬ್ಬ ಮಹಿಳೆ ರಾಜಕೀಯಕ್ಕೆ ಬರುತ್ತಾಳೆ ಅಂದರೆ ಅವಳನ್ನು ನೋಡುವ ದೃಷ್ಟಿ ಬೇರೆಯಾಗಿರುತ್ತದೆ. ಜತೆಗೆ ಪಕ್ಷದಲ್ಲಿಯೂ ಮಹಿಳೆ ಹಿಂದಿನ ಸೀಟಿಗೆ ಮೀಸಲು. ಇಂಥ ಸಂದರ್ಭದಲ್ಲಿ ಮಹಿಳೆಯರು ರಾಜಕೀಯಕ್ಕೆ ಬಂದು ಏನನ್ನಾದರೂ ಸಾಧನೆ ಮಾಡುವುದು ಕಷ್ಟದ ಕೆಲಸ. ಹೀಗಾಗಿ ಮಹಿಳೆಯರಿಗೂ ರಾಜಕೀಯ ಪ್ರಾತಿನಿಧ್ಯ ಸಿಗಬೇಕು ಎಂಬುದು ತಮ್ಮ ಆಸೆ ಎಂದರು.
ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಲು ಸುಮಾರು 80ಕ್ಕೂ ಹೆಚ್ಚು ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಜಿಲ್ಲೆಗೆ ಕನಿಷ್ಠ ಒಬ್ಬ ಮಹಿಳೆಯರಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದೇವೆ. ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು ಎಂದರು.
ಇನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಳ ಮಾತನಾಡಿ, ಜಿಲ್ಲೆಯಲ್ಲಿ ಮೂರು ಕ್ಷೇತ್ರಗಳಿಗೆ ಸುಮಾರು 6 ರಿಂದ 8 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ಯಾರಿಗಾದರೂ ಒಬ್ಬರಿಗೆ ಟಿಕೆಟ್ ನೀಡುವಂತೆ ಮನವಿ ಮಾಡುತ್ತೇವೆ ಎಂದರು.
ಮಹಿಳೆಯರಿಗೆ ರಾಜಕೀಯ ಸ್ಥಾನಮಾನ ಕೊಡಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಆದರೆ ಪ್ರಸ್ತುತ ಸನ್ನಿವೇಶ ಇದಕ್ಕೆ ತದ್ವಿರುದ್ಧ ಆಗಿದೆ. ಇನ್ನೂ ನಾವು ಪುರುಷ ಪ್ರಧಾನ ಸ್ಥಿತಿಯಲ್ಲಿ ಇದ್ದೇವೆ. ಕಾಂಗ್ರೆಸ್ ಮಹಿಳೆಯರಿಗೆ ಸಮಾನ ಅವಕಾಶ ನೀಡುತ್ತದೆ.
| ಕಾಂತಾ ನಾಯಕ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನನ್ನ ಸೋಲಿಗೆ ಯಾರು ಕಾರಣ ಎಂಬುದು ಎಲ್ಲರಿಗೂ ಗೊತ್ತು. ಸಮಯ ಬಂದಾಗ ಈ ಎಲ್ಲ ಸಂಗತಿಗಳ ಬಗ್ಗೆ ಕಾರಣವನ್ನು ಬಹಿರಂಗಪಡಿಸುತ್ತೇನೆ.
| ವಿದ್ಯಾರಾಣಿ ತುಂಗಳ, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ
ಇದನ್ನೂ ಓದಿ | Karnataka University | ಕವಿವಿ ನೀತಿ ವಿರೋಧಿಸಿ ಡಿ.17ರಂದು ರಾಜ್ಯಾದ್ಯಂತ ಕಾಲೇಜು ಬಂದ್