Site icon Vistara News

Karnataka Election : ಕಾಂಗ್ರೆಸ್‌ನಿಂದ ವೋಟ್‌ ಬ್ಯಾಂಕ್‌ ರಾಜಕಾರಣ, ಮೋದಿಯದ್ದು ರಿಪೋರ್ಟ್‌ ಕಾರ್ಡ್‌ ರಾಜಕಾರಣ: ನಡ್ಡಾ

JP Nadda ಬಿಜೆಪಿ ಸಮಾವೇಶ ತುಮಕೂರು

ತುಮಕೂರು: ಕಾಂಗ್ರೆಸ್ ವೋಟ್ ಬ್ಯಾಂಕ್, ಜಾತಿ ರಾಜಕಾರಣ ಮಾಡುವ ಮೂಲಕ ಜಾತಿ ಜಾತಿಗಳ ಮಧ್ಯೆ ಜಗಳ ತಂದಿಡುವ, ಕುಟುಂಬ ರಾಜಕಾರಣವನ್ನು ಬೆಳೆಸುವ ಕೆಲಸವನ್ನು ಮಾಡುತ್ತಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ರಿಪೋರ್ಟ್ ಕಾರ್ಡ್ ರಾಜಕಾರಣ ಆರಂಭಿಸಿದರು. ಕರ್ನಾಟಕದಲ್ಲಿ ನಾವು ರಿಪೋರ್ಟ್ ಕಾರ್ಡ್ ಆಧಾರದಲ್ಲಿ ಚುನಾವಣೆ (Karnataka Election) ಎದುರಿಸುತ್ತೇವೆ, ನಮ್ಮ ರಿಪೋರ್ಟ್ ಕಾರ್ಡ್ ಸಿದ್ಧವಾಗಿದೆ ಎಂದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.‌ ನಡ್ಡಾ ಹೇಳಿದರು.

ತುಮಕೂರು ಮತ್ತು ಮಧುಗಿರಿ ಸಂಘಟನಾ ಜಿಲ್ಲೆಗಳ ಶಕ್ತಿಕೇಂದ್ರ ಪ್ರಮುಖರು ಮತ್ತು ಪದಾಧಿಕಾರಿಗಳ ಬೃಹತ್‌ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಎಲ್ಲ ಸಮುದಾಯಗಳ ಸಮಾವೇಶಗಳು ಬಿಜೆಪಿ ಧ್ವಜದ ಅಡಿಯಲ್ಲಿ ನಡೆಯಬೇಕು. ದಲಿತ ಸಮುದಾಯಕ್ಕೆ ವಿಶೇಷ ಗಮನ ಕೊಟ್ಟು ಅವರನ್ನು ಬಿಜೆಪಿಯೊಂದಿಗೆ ಜೋಡಿಸಬೇಕಾಗಿದೆ. ಶಕ್ತಿ ಕೇಂದ್ರದಲ್ಲಿ ಉಪಾಹಾರ ಸಭೆ ಆಗಬೇಕು. ಆಗ ಜಾತಿವಾದ ಇಲ್ಲದಾಗುತ್ತದೆ. ನಮ್ಮ ಪಕ್ಷ ಒಂದು ವರ್ಗದ, ಒಂದು ಸಮುದಾಯದ ಪಕ್ಷ ಅಲ್ಲ. ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗುವ ಪಕ್ಷವಾಗಿದೆ ಎಂದು ಹೇಳಿದರು.

Karnataka Election

ಕರ್ನಾಟಕದಲ್ಲಿ ಬಿಜೆಪಿ ವಿಚಾರಧಾರೆ ಶಕ್ತಿಶಾಲಿಯಾಗಬೇಕು. ಸರ್ವ ಧರ್ಮಗಳನ್ನು ಒಗ್ಗೂಡಿಸಿಕೊಂಡು ಸಾಗಬೇಕಾಗಿದೆ. ತುಮಕೂರಿನ ಪವಿತ್ರ ನಗರದಲ್ಲಿ ಯಡಿಯೂರು ಸಿದ್ಧಲಿಂಗೇಶ್ವರ, ಗೊರವನಹಳ್ಳಿ ಮಹಾಲಕ್ಷ್ಮಿ ಕ್ಷೇತ್ರ, ಸಿದ್ದಗಂಗಾ ಶ್ರೀಗಳ ಪವಿತ್ರ ಸ್ಥಳ ಇದೆ. ಕರ್ನಾಟಕದ ಎಲ್ಲ ಸ್ಥಳಗಳಲ್ಲಿ ಹೋಗಬೇಕು, ಚುನಾವಣೆಗೆ ಸಿದ್ಧವಾಗಬೇಕು ಎಂದು ನಿರ್ಧಾರ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ರಾಜಕೀಯ ಸಂಸ್ಕೃತಿಯನ್ನೇ ಬದಲಿಸಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ | ಫೆಬ್ರವರಿ ಅಂತ್ಯಕ್ಕೆ Bengaluru-Mysuru Expressway ಲೋಕಾರ್ಪಣೆ, ಟೋಲ್ ಕೊಡಲೇಬೇಕು ಎಂದ ಗಡ್ಕರಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತದಲ್ಲಿ ಕೊರೊನಾ ಲಸಿಕೆಯನ್ನು ಕಂಡುಹಿಡಿಯಲಾಯಿತು. ಇದು ಜನರನ್ನು ರಕ್ಷಿಸಿದೆ. ಕಾಂಗ್ರೆಸ್‌ನವರಿಗೆ ತಿಳಿವಳಿಕೆ ಕಡಿಮೆ ಇದೆ. ಪೊಲಿಯೋ ಲಸಿಕೆ ಸೇರಿದಂತೆ ಬೇರೆ ಬೇರೆ ಲಸಿಕೆಯನ್ನು ಕಂಡು ಹಿಡಿಯಲು ಎಷ್ಟು ವರ್ಷ ಬೇಕಾಯಿತು ಎಂದು ಅವರಿಗೆ ಗೊತ್ತಿಲ್ಲ ಎಂದು ನಡ್ಡಾ ವ್ಯಂಗ್ಯವಾಡಿದರು.

ಇನ್ನು ಮೋದಿ ನೇತೃತ್ವದಲ್ಲಿ ಭಾರತವು ತೆಗೆದುಕೊಳ್ಳುವ ದೇಶವಾಗದೇ ಕೊಡುವ ದೇಶವಾಯಿತು. ಉಕ್ರೇನ್ ಯುದ್ಧದ ವೇಳೆ ಬೇರೆ ದೇಶದ ವಿದ್ಯಾರ್ಥಿಗಳೂ ಸಹ ಭಾರತದ ಧ್ವಜ ಹಿಡಿದು ಬಂದರು. ಇದನ್ನು ನಾವು ಜನರಿಗೆ ತಿಳಿಸಬೇಕಾಗಿದೆ. ಇಂದು ಭಾರತದ ಪ್ರಪಂಚದ ಎರಡನೇ ಅತಿ ದೊಡ್ಡ ಮೊಬೈಲ್ ಉತ್ಪಾದಕ ರಾಷ್ಟ್ರವಾಗಿದೆ. ಭಾರತದ ರಪ್ತು ಕ್ಷೇತ್ರ ವಿಸ್ತರಣೆಗೊಂಡಿದೆ ಎಂದು ನಡ್ಡಾ ತಿಳಿಸಿದರು.

ಕಾರ್ಯಕರ್ತರು ಹಳ್ಳಿ ಹಳ್ಳಿಗೆ ಹೋಗಬೇಕು. ಮಾತೆಯರ ಜತೆ ಉಜ್ವಲ ಯೋಜನೆ, ವಿದ್ಯುತ್ ಪೂರೈಕೆ ಬಗ್ಗೆ ಕೇಳಬೇಕು. ಕೇಂದ್ರ ಸರ್ಕಾರದ ಹಲವು ಯೋಜನೆಗಳು ಮಹಿಳೆಯರಿಗೆ ಶಕ್ತಿ ನೀಡಿವೆ. ಇಂದು ಫಲಾನುಭವಿಗಳಿಗೆ ಹಾಕಿದ ಅಷ್ಟೂ ಹಣ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದೆ. ಗುಂಡಿ ಅದುಮಿದ 15 ಸೆಕೆಂಡ್‌ಗಳಲ್ಲಿ ಹಣ ಖಾತೆಯಲ್ಲಿ ಜಮೆ ಆಗಿರುತ್ತದೆ. ಕಾಂಗ್ರೆಸ್ ಅವಧಿಯಲ್ಲಿ ಮಹಿಳೆಯರು ಸೂರ್ಯೋದಯಕ್ಕಿಂತ ಮೊದಲು, ಸೂರ್ಯಾಸ್ತದ ಬಳಿಕ ತಮ್ಮ ನಿತ್ಯಕರ್ಮಕ್ಕಾಗಿ ಗ್ರಾಮದಿಂದ ಹೊರಗೆ ಹೋಗಬೇಕಾಗಿತ್ತು. ಆದರೆ, ಈಗ ಕಾಲ ಬದಲಾಗಿದೆ. ಎಲ್ಲ ಕಡೆ ಶೌಚಾಲಯವನ್ನು ನಿರ್ಮಿಸಲಾಗಿದೆ. ಈ ಮೂಲಕ ೧೨ ಕೋಟಿ ಮಹಿಳೆಯರ ಮರ್ಯಾದೆಯನ್ನು ಮೋದಿ ರಕ್ಷಣೆ ಮಾಡಿದ್ದಾರೆ. ೫೦ ಲಕ್ಷ ಜನರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಕೊಟ್ಟಿದ್ದಾರೆ ಎಂದು ನಡ್ಡಾ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ತಿಳಿಸಿದರು.

ಇದನ್ನೂ ಓದಿ | Nora Fatehi | 30ರ ನಟಿ ನೋರಾ ಫತೇಹಿ ಜತೆ 25ರ ಆರ್ಯನ್ ಖಾನ್ ಡೇಟಿಂಗ್? ಫೋಟೊ ವೈರಲ್‌!

Exit mobile version