ಮಂಗಳೂರು: ಬಿಜೆಪಿ ಭದ್ರಕೋಟೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಗೆಲ್ಲಲು ಕಸರತ್ತು ನಡೆಸುತ್ತಿರುವ ಜಿಲ್ಲಾ ಕಾಂಗ್ರೆಸ್ ನಾಯಕರು ಚುನಾವಣೆ ಹೊತ್ತಲ್ಲಿ (Karnataka Election) ವಾಸ್ತು ಮೊರೆ ಹೋಗಿದ್ದಾರೆ! ಅದರಂತೆ ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ವಾಸ್ತು ಸರಿಪಡಿಸಲು ನವೀಕರಣ ಕಾಮಗಾರಿ ಕೈಗೊಂಡಿರುವುದು ಕಂಡುಬಂದಿದೆ.
ವಾಸ್ತು ತಜ್ಞರ ಸಲಹೆಯಂತೆ ಮಂಗಳೂರಿನ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಕಚೇರಿ ಮೆಟ್ಟಿಲು ನವೀಕರಣ ಕಾಮಗಾರಿ ಕೈಗೊಳ್ಳಲಾಗಿದೆ. ಕಚೇರಿ ಪ್ರವೇಶ ದ್ವಾರದಲ್ಲಿ ಎಂಟು ಮೆಟ್ಟಿಲುಗಳಿದ್ದವು. ವಾಸ್ತು ಪ್ರಕಾರ ಎಂಟು ಮೆಟ್ಟಿಲುಗಳು ಇರುವುದು ದೋಷ. ಹೀಗಾಗಿ ಬೆಸ ಸಂಖ್ಯೆಯಲ್ಲಿ ಮೆಟ್ಟಿಲುಗಳಿರಬೇಕು ಎಂದು ಮತ್ತೊಂದು ಮೆಟ್ಟಿಲನ್ನು ಸೇರಿಸಲಾಗುತ್ತಿದೆ. ಅದೇ ರೀತಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಕೊಠಡಿಯ ದಿಕ್ಕನ್ನು ಬದಲಿಸಲಾಗುತ್ತಿದೆ ಎನ್ನಲಾಗಿದೆ.
2016ರಲ್ಲಿ ನೂತನ ಜಿಲ್ಲಾ ಕಾಂಗ್ರೆಸ್ ಕಚೇರಿ ಉದ್ಘಾಟನೆಯಾಗಿತ್ತು. ನಂತರ 2019ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳಲ್ಲಿ ಹೀನಾಯ ಸೋಲು ಅನುಭವಿಸಿತ್ತು. ಹೀಗಾಗಿ ವಾಸ್ತು ತಜ್ಞರ ಸಲಹೆಯಂತೆ ಮೆಟ್ಟಿಲು ನವೀಕರಣ ಮಾಡಲಾಗುತ್ತಿದೆ ಎನ್ನಲಾಗಿದ್ದು, ವಾಸ್ತು ಬದಲಾವಣೆ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಗುಸುಗುಸು ಚರ್ಚೆ ನಡೆಯುತ್ತಿದೆ. ಆದರೆ, ಈ ವಾಸ್ತು ವಾದವನ್ನು ಕಾಂಗ್ರೆಸ್ ಮುಖಂಡರು ನಿರಾಕರಿಸಿದ್ದಾರೆ.
ನಳಿನ್ ಕುಮಾರ್ ಕಟೀಲ್ ಟೀಕೆ
ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದು, ಹಿಂದುಗಳ ಪ್ರತಿ ಆಚರಣೆಯನ್ನೂ ಅಣಕ ಮಾಡುವ ಕಾಂಗ್ರೆಸ್ ಸೋಲಿನ ಭೀತಿಯಲ್ಲಿ ವಾಸ್ತು ಮೊರೆ ಹೋಗಿದೆ. ತಲೆಗೆ ಹೊಯ್ದ ನೀರು ಕಾಲಿಗೆ ಬರಲೇಬೇಕು ಎಂಬುದಕ್ಕೆ ಇದು ಒಂದು ಜ್ವಲಂತ ಉದಾಹರಣೆಯಾಗಿದೆ ಎಂದು ಟೀಕಿಸಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯ ಸೋಲಿನ ಮುನ್ಸೂಚನೆ ಸಿಗುತ್ತಿದ್ದಂತೆ ಕಾಂಗ್ರೆಸ್ ಇನ್ನಿಲ್ಲದ ಪ್ರಯತ್ನಗಳಿಗೆ ಕೈ ಹಾಕಿದೆ. ಅಂದು ಸಿದ್ದರಾಮಯ್ಯ ಕೇಸರಿ ತಿಲಕ ಇಡುವವರನ್ನು ಕಂಡರೆ ಭಯ ಎಂದರು. ತೀರಾ ಇತ್ತೀಚೆಗೆ ಕಾಂಗ್ರೆಸ್‌ನ ಒಬ್ಬ ಶಾಸಕರಂತೂ ಹಿಂದು ಎನ್ನುವ ಪದವೇ ಅಶ್ಲೀಲ ಎಂದು ಹೇಳಿಕೆ ಕೊಟ್ಟಿದ್ದರು. ಅವಕಾಶ ಸಿಕ್ಕಾಗಲೆಲ್ಲ ಹಿಂದು ಧರ್ಮವನ್ನು ಹೀಯಾಳಿಸುವ ಕೆಲಸ ಮಾಡಿದರು ಎಂದು ಕಟೀಲ್ ಕಿಡಿಕಾರಿದ್ದಾರೆ.
ಹಿಂದು ಧರ್ಮದ ಸಂಪ್ರದಾಯ, ಆಚಾರ, ವಿಚಾರಗಳನ್ನು ಹಿಯಾಳಿಸುವುದನ್ನೇ ಕಸುಬಾಗಿಸಿಕೊಂಡ ಕಾಂಗ್ರೆಸ್ ನಾಯಕರು ಈಗ ಪಕ್ಷದ ಪ್ರಗತಿಗಾಗಿ ವಾಸ್ತುವಿನ ಮೊರೆ ಹೋಗಿದ್ದಾರೆ. ಕಾಂಗ್ರೆಸ್ ಬಗ್ಗೆ ನನಗೆ ಮರುಕವಿದೆ, ಸನಾತನ ಧರ್ಮದಲ್ಲಿ ಎಲ್ಲದಕ್ಕೂ ಪರಿಹಾರವಿದೆ, ಇಂತಹ ಗಿಮಿಕ್‌ಗಳನ್ನು ಬಿಟ್ಟು ಮೊದಲು ಹಿಂದು ಧರ್ಮವನ್ನು ಗೌರವಿಸುವುದನ್ನು ಕಲಿಯಲಿ ಎಂದು ಕುಟುಕಿದ್ದಾರೆ.
ಇದನ್ನೂ ಓದಿ | BJP Shakti Sangama | ಡಿ.18ರಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಪ್ರಕೋಷ್ಠಗಳ ಸಮಾವೇಶ: ಡಾ.ಎಂ.ಆರ್. ವೆಂಕಟೇಶ್