ಕೋಲಾರ: ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುವುದಾಗಿ ಘೋಷಣೆ (Karnataka Election) ಮಾಡಿದ ಮೇಲೆ ಕೋಲಾರ ಜಿಲ್ಲಾ ಕಾಂಗ್ರೆಸ್‌ನಲ್ಲಿನ ಬಣ ರಾಜಕೀಯ ಕಡಿಮೆಯಾಗಿ ಭಿನ್ನಮತ ಶಮನವಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ, ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕೋಲಾರ ತಾಲೂಕಿನ ವೇಮಗಲ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ಮಹಿಳಾ ಸಮಾವೇಶದಲ್ಲೂ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಹಾಗೂ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ನಡುವಿನ ಮುನಿಸು ಕಡಿಮೆಯಾದಂತೆ ಕಾಣಲಿಲ್ಲ.
ವೇಮಗಲ್‌ನಲ್ಲಿ ಏರ್ಪಡಿಸಿದ್ದ ಮಹಿಳಾ ಸಮಾವೇಶಕ್ಕೆ ಮೊದಲಿಗೆ ವಲಸಿಗ ಕಾಂಗ್ರೆಸ್ ನಾಯಕರಾದ ರಮೇಶ್ ಕುಮಾರ್, ಶ್ರೀನಿವಾಸಗೌಡ, ನಂಜೇಗೌಡ, ಕೃಷ್ಣ ಭೈರೇಗೌಡ, ಎಂ.ಸಿ.ಸುಧಾಕರ್ ಆಗಮಿಸಿದ್ದರು. ಹೀಗಾಗಿ ಕಾರ್ಯಕ್ರಮಕ್ಕೆ ಮೂಲ ಕಾಂಗ್ರೆಸ್ ನಾಯಕರಾದ ಮಾಜಿ ಸಂಸದ ಕೆ.ಎಚ್ ಮುನಿಯಪ್ಪ, ಬಂಗಾರಪೇಟೆ ಹಾಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಕೆ.ಜಿ.ಎಫ್ ಹಾಲಿ ಶಾಸಕಿ ರೂಪಕಲಾ ಶಶಿಧರ್ ಅವರು ಗೈರು ಹಾಜರಾಗಿದ್ದರು, ಆದರೆ, ನಂತರ ಸಮಾವೇಶಕ್ಕೆ ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ತಡವಾಗಿ ಆಗಮಿಸಿದ್ದು ಕಂಡುಬಂತು.
ಇದನ್ನೂ ಓದಿ | Assembly Session: ಇದು ಕೊನೆಯ ಸದನ; ಯಾರೂ ಮಿಸ್ ಮಾಡದೇ ಬನ್ನಿ: ಶಾಸಕರಿಗೆ ಮನವಿ ಮಾಡಿದ ಸ್ಪೀಕರ್ ಕಾಗೇರಿ
ವೇದಿಕೆ ಮೇಲೆ ಕೆ.ಎಚ್.ಮುನಿಯಪ್ಪ ಆಗಮಿಸಿದಾಗ ಮಾಜಿ ಸಿಎಂ ಸಿದ್ದರಾಮಯ್ಯ ಎದ್ದು ನಿಂತು ಆತ್ಮೀಯವಾಗಿ ಬರಮಾಡಿಕೊಂಡರು. ಆದರೆ, ಪಕ್ಕದಲ್ಲೇ ಇದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಕೆ.ಎಚ್.ಮುನಿಯಪ್ಪ ಕಡೆ ತಿರುಗಿಯೂ ನೋಡಲಿಲ್ಲ. ಅಸಮಾಧಾನದ ನಡುವೆಯೇ ಮುನಿಯಪ್ಪ ವೇದಿಕೆ ಹಂಚಿಕೊಂಡರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ರಮೇಶ್ ಕುಮಾರ್ ಬಣ ಬಿಜೆಪಿಗೆ ಬೆಂಬಲ ನೀಡಿದ್ದರಿಂದ ಸೋಲುವಂತಾಯಿತು ಎಂದು ಕೆ.ಎಚ್.ಮುನಿಯಪ್ಪ ಆರೋಪಿಸಿದ್ದರು. ಇದರಿಂದ ಜಿಲ್ಲಾ ಕಾಂಗ್ರೆಸ್‌ನಲ್ಲಿನ ಬಣ ರಾಜಕೀಯ ಬಹಿರಂಗವಾಗಿತ್ತು. ಇತ್ತೀಚೆಗೆ ಸಿದ್ದರಾಮಯ್ಯ ಅವರು, ಕ್ಷೇತ್ರ ಘೋಷಣೆ ಮಾಡಿದಾಗ ಏರ್ಪಡಿಸಿದ್ದ ಸಮಾವೇಶದಲ್ಲಿ ಮುನಿಯಪ್ಪ ಅವರನ್ನು ಭೇಟಿಯಾಗಿ ಭಿನ್ನಮತ ಶಮನ ಮಾಡಲು ಮಾಜಿ ಸಿಎಂ ಯತ್ನಿಸಿದ್ದರು. ಆದರೆ, ಸೋಮವಾರ ನಡೆದ ಕಾರ್ಯಕ್ರಮದಲ್ಲೂ ಇಬ್ಬರು ನಾಯಕರು ದೂರ ಉಳಿದಿದ್ದು ಕಂಡುಬಂತು.