ಹಾಸನ: ರಾಜ್ಯ ಕಾಂಗ್ರೆಸ್‌ನಲ್ಲಿನ ಒಡಕು ಆಗಾಗ ಕಾಣಿಸಿಕೊಳ್ಳುತ್ತಲೇ ಇದೆ. ವಿಧಾನಸಭಾ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆದಿಯಾಗಿ ಹಲವರು ಒಗ್ಗಟ್ಟಿನ ಮಂತ್ರವನ್ನು ಜಪಿಸಿದರೂ ಮತ್ತೆ ಮತ್ತೆ ಅಸಮಾಧಾನಗಳು ಸ್ಫೋಟಗೊಳ್ಳುತ್ತಲೇ ಇವೆ. ಈಗ ಹಾಸನದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪ್ರಜಾಧ್ವನಿ (Congress Prajadhwani) ಸಮಾವೇಶದಲ್ಲಿ ಕಲಾವಿದರು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕುರಿತಾಗಿ ಹಾಡಲು ಮುಂದಾದಾಗ ಸಂಸದ ಡಿ.ಕೆ. ಸುರೇಶ್ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಹಾಡದಂತೆ ತಡೆದಿದ್ದಾರೆ.
ಹಾಸನದ ದೊಡ್ಡಮಂಡಿಗನಹಳ್ಳಿಯ ಮೈದಾನದಲ್ಲಿ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಯಾತ್ರೆಯ ವೇದಿಕೆ ಕಾರ್ಯಕ್ರಮ ಆರಂಭಕ್ಕೂ ಮುನ್ನ ಆರ್ಕೆಸ್ಟ್ರಾ ತಂಡದಿಂದ ಹಾಡನ್ನು ಹಾಡಿಸಲಾಗುತ್ತಿತ್ತು. ಈ ವೇಳೆ ಕಲಾವಿದರೊಬ್ಬರು ಸಿದ್ದರಾಮಯ್ಯ ಅವರ ಬಗ್ಗೆ ಹಾಡಲು ಆರಂಭಿಸಿದ್ದರು. ಆಗ ವೇದಿಕೆಯಲ್ಲಿ ಆಸೀನರಾಗಿದ್ದ ಡಿ.ಕೆ. ಸುರೇಶ್ ತಕ್ಷಣ ಆ ಹಾಡನ್ನು ಹಾಡದಂತೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ‘ಮೂರು ಕ್ಷೇತ್ರ’ ಬಿಟ್ಟ ಸಿದ್ದರಾಮಯ್ಯಗೆ ಕೋಲಾರದಲ್ಲೂ ಸಂಕಷ್ಟ, ಸಿದ್ದು ಸ್ಪರ್ಧೆಗೆ ದಲಿತರಿಂದ ಭಾರಿ ವಿರೋಧ
“ಸಿದ್ದರಾಮಯ್ಯ ಹಿಡಿದ ಬಡವರ ಕೈಯ್ಯಾ” ಎಂದು ಹಾಡು ಹಾಡಲು ಗಾಯಕ ಮುಂದಾಗಿದ್ದ. ಈ ಸಾಲನ್ನು ಕೇಳುತ್ತಿದ್ದಂತೆ ಡಿ.ಕೆ. ಸುರೇಶ್ ಹಾಡನ್ನು ನಿಲ್ಲಿಸುವಂತೆ ತಾಕೀತು ಮಾಡಿದರು. ಯಾವುದೇ ಒಬ್ಬ ವ್ಯಕ್ತಿಯ ಹಾಡು ಹಾಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಗ ಎಚ್ಚೆತ್ತ ಕಲಾವಿದ ಹಲವು ಧರ್ಮದಾ ನಾಡು ಎಂಬ ಹಾಡನ್ನು ಹಾಡಿದರು. ಪ್ರಜಾಧ್ವನಿ ಯಾತ್ರೆಯಲ್ಲಿ ಪದೇ ಪದೆ ಸಿದ್ದರಾಮಯ್ಯ ಹಾಡುಗಳನ್ನು ಹಾಡಲಾಗುತ್ತಿತ್ತು ಎನ್ನಲಾಗಿತ್ತು. ಇದು ಸುರೇಶ್ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.