Site icon Vistara News

Karnataka Election | ರಾಜ್ಯ ರಾಜಕಾರಣದತ್ತ ಸಂಸದ ಡಿ.ಕೆ. ಸುರೇಶ್ ಒಲವು; ಯಾವ ಕ್ಷೇತ್ರದಿಂದ ಸ್ಪರ್ಧೆ?

MP D K Suresh latest statement In Anekal

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಹೋದರ, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್‌, ರಾಜ್ಯ ರಾಜಕಾರಣದತ್ತ ಒಲವು ತೋರಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಈ ನಡುವೆ ಡಿ.ಕೆ. ಸುರೇಶ್ ಕೂಡ ರಾಮನಗರ ಕ್ಷೇತ್ರದಿಂದ (Karnataka Election) ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಹೌದು, ರಾಮನಗರ ಇಲ್ಲವೇ ಆರ್.ಆರ್.ನಗರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಅವರ ಹೆಸರು ಕೇಳಿ ಬರುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿ.ಕೆ.ಸುರೇಶ್‌, ಪಕ್ಷ ಬಯಸಿದರೆ ಸ್ಪರ್ಧಿಸುವ ಬಗ್ಗೆ ಆಲೋಚಿಸುತ್ತೇನೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ರಾಮನಗರ ಕ್ಷೇತ್ರದಲ್ಲಿ ಅನಿತಾ ಕುಮಾರಸ್ವಾಮಿ ಅವರು ಹಾಲಿ ಶಾಸಕಿಯಾಗಿದ್ದಾರೆ. ಆದರೆ, ಮುಂದಿನ ಚುನಾವಣೆಗೆ ಪುತ್ರ ನಿಖಿಲ್‌ ಕುಮಾರಸ್ವಾಮಿ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದು, ಮಗನಿಗಾಗಿ ಅನಿತಾ ಕುಮಾರಸ್ವಾಮಿ ಅವರು ಕ್ಷೇತ್ರ ತ್ಯಾಗ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇನ್ನು ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಸಚಿವ ಮುನಿರತ್ನ ಹಾಲಿ ಶಾಸಕರಾಗಿದ್ದಾರೆ.

ಇದನ್ನೂ ಓದಿ | No Karnataka Tableau | ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ತಬ್ಧಚಿತ್ರವಿಲ್ಲ! ಕಾರಣ ಏನು?

ಆರ್‌.ಆರ್‌.ನಗರದಲ್ಲಿ ಕಾಂಗ್ರೆಸ್‌ನಿಂದ ಪಕ್ಷಾಂತರಗೊಂಡು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ಮುನಿರತ್ನ ಅವರ ವಿರುದ್ಧ ಪ್ರಬಲ ಅಭ್ಯರ್ಥಿಗಾಗಿ ಕಾಂಗ್ರೆಸ್‌ ಹುಡುಕಾಟ ನಡೆಸುತ್ತಿದೆ. ಜತೆಗೆ ಎಚ್‌.ಡಿ.ಕುಮಾರಸ್ವಾಮಿ ಅವರ ಜತೆ ಡಿ.ಕೆ.ಶಿವ‌ಕುಮಾರ್ ಸಂಬಂಧ ಸುಧಾರಿಸಲು ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡು ರಾಮನಗರಕ್ಕೆ ಬದಲಾಗಿ ರಾಜರಾಜೇಶ್ವರಿ ನಗರಕ್ಕೆ ಡಿ.ಕೆ.ಸುರೇಶ್‌ ಬರಬಹುದು ಎನ್ನಲಾಗಿದೆ.

ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಸಂಸದ ಡಿ.ಕೆ.ಸುರೇಶ್‌ ಪ್ರತಿಕ್ರಿಯಿಸಿ, ಸದ್ಯಕ್ಕೆ ನಾನು ಲೋಕಸಭಾ ಸದಸ್ಯ. ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ನಿಲ್ಲಬೇಕು ಎಂಬ ಇಚ್ಛೆ ಇಲ್ಲ. ನಾನು ಉಪ ಚುನಾವಣೆ ವಿರೋಧಿಯಾಗಿದ್ದೇನೆ. ರಾಜರಾಜೇಶ್ವರಿ ನಗರ, ರಾಮನಗರದಲ್ಲಿ ನನ್ನ ಹೆಸರು ಕೇಳಿ‌ ಬರುತ್ತಿದೆ. ಪಕ್ಷ ಬಯಸಿದರೆ ವಿಧಾನಸಭಾ ಚುನಾವಣೆಗೆ ನಿಲ್ಲುವ ಕುರಿತು ಯೋಚಿಸುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Panchamasali Reservation | ನಿರಾಣಿ-ಯತ್ನಾಳ್‌ ವಾಕ್ಸಮರ: ಅಪ್ಪನಿಗೆ ಹುಟ್ಟಿದ್ರೆ ಸಿಡಿ ಬಿಡುಗಡೆ ಮಾಡ್ಲಿ ಎಂದ ಬಸನಗೌಡ ಪಾಟೀಲ್‌

Exit mobile version