ಬೆಂಗಳೂರು: “ಭಾರತವನ್ನು ವಿಶ್ವಗುರುವನ್ನಾಗಿ ಮಾಡುವ ದಿಸೆಯಲ್ಲಿ ಪ್ರತಿಯೊಬ್ಬರೂ ಮತದಾನ ಮಾಡಬೇಕು” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು. ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಬಾಲಕಿಯರ ಸರ್ಕಾರಿ ಮಾದರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮತದಾನ ಮಾಡಿದ ಬಳಿಕ ಅವರು ಮಾತನಾಡಿದರು. “ಶೇ.100ರಷ್ಟು ಮತದಾನ ಆಗಬೇಕು ಎಂಬುದು ಸಂಘದ ಆಶಯವಾಗಿದೆ” ಎಂದು ಹೇಳಿದರು.
ಮತದಾನದ ಬಳಿಕ ಹೊಸಬಾಳೆ ಮಾತು
“ಲೋಕತಂತ್ರವನ್ನು ರಕ್ಷಿಸುವ ಜತೆಗೆ ಅದನ್ನು ಸದೃಢಗೊಳಿಸಬೇಕು. ಎಲ್ಲರ ರಾಜ್ಯಗಳು ಹಾಗೂ ಕೇಂದ್ರದಲ್ಲಿ ಒಳ್ಳೆಯ ಶಾಸನ ಬರಬೇಕು. ಅದಕ್ಕಾಗಿ, ದೇಶದ ಧರ್ಮ, ಸಂಸ್ಕೃತಿಯ ರಕ್ಷಣೆ, ಜನತೆಯ ವಿಕಾಸ, ಸಮಾಜದ ಏಳಿಗೆ, ರಾಷ್ಟ್ರದ ರಕ್ಷಣೆ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಸಶಕ್ತ ರಾಷ್ಟ್ರವಾಗಿ, ವಿಶ್ವಗುರುವಾಗಿ ನಿರ್ಮಾಣ ಮಾಡಬೇಕು ಎಂದರೆ, ನೇತೃತ್ವ ವಹಿಸಿಕೊಳ್ಳಬೇಕು ಎಂದರೆ ನಮ್ಮ ಜನ ಸರಿಯಾಗಿ ಮತ ಹಾಕಬೇಕು ಎಂಬುದಾಗಿ ಮನವಿ ಮಾಡುತ್ತೇನೆ. ನಾವು ಕೂಡ ಅದಕ್ಕಾಗಿ ಕೆಲಸ ಮಾಡುತ್ತೇವೆ” ಎಂದು ತಿಳಿಸಿದರು.
ಇದನ್ನೂ ಓದಿ: Karnataka Election 2023: ಚಿಕ್ಕಬಳ್ಳಾಪುರದಲ್ಲಿ ಒಂದೇ ಕುಟುಂಬದ 65 ಸದಸ್ಯರಿಂದ ಏಕಕಾಲಕ್ಕೆ ಮತದಾನ!
ರಾಜ್ಯಾದ್ಯಂತ ಸೆಲೆಬ್ರಿಟಿಗಳು, ಸ್ವಾಮೀಜಿಗಳು ಸೇರಿ ಹೆಚ್ಚಿನ ಜನ ಮತದಾನ ಮಾಡುತ್ತಿದ್ದಾರೆ. ಮಧ್ಯಾಹ್ನ ಹೆಚ್ಚಿನ ಬಿಸಿಲು ಇರುವುದರಿಂದ ಬೆಳಗ್ಗೆಯೇ ಹೆಚ್ಚಿನ ಪ್ರಮಾಣದಲ್ಲಿ ಜನ ಮತಗಟ್ಟೆಗಳಿಗೆ ತೆರಳಿ ಹಕ್ಕು ಚಲಾಯಿಸುತ್ತಿದ್ದಾರೆ. ಯುವಕರು ಹಿರಿಯರನ್ನು ಕೂಡ ಮತಗಟ್ಟೆಗಳಿಗೆ ಕರೆದುಕೊಂಡು ಬಂದು ಮತ ಹಾಕಿಸುತ್ತಿರುವ ದೃಶ್ಯಗಳು ಹೆಚ್ಚಿವೆ.