ಬೆಂಗಳೂರು: ರಾಜ್ಯ ವಿಧಾನಸಭೆ ಹಿನ್ನೆಲೆಯಲ್ಲಿ ಮತದಾನ ಮಾಡಿದವರಿಗೆ ಉಚಿತ ಉಪಾಹಾರ ನೀಡುವ ಹೋಟೆಲ್‌ಗಳ ತೀರ್ಮಾನಕ್ಕೆ ತಡೆ ನೀಡಿದ ಬಿಬಿಪಿಎಂಗೆ ಹಿನ್ನಡೆಯಾಗಿದೆ. ಹೋಟೆಲ್‌ಗಳಲ್ಲಿ ಉಚಿತವಾಗಿ ಉಪಾಹಾರ, ಪಾನೀಯ ನೀಡುವ ಕುರಿತು ಬಿಬಿಎಂಪಿ ಸಲ್ಲಿಸಿದ ಮೇಲ್ಮನವಿಯನ್ನು ಮಂಗಳವಾರ ತಡರಾತ್ರಿಯೇ ವಿಚಾರಣೆ ನಡೆಸಿದ ಹೈಕೋರ್ಟ್, ಉಚಿತವಾಗಿ ಉಪಾಹಾರ ನೀಡುವುದಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿತು. ಇದರಿಂದಾಗಿ ಬಿಬಿಎಂಪಿಗೆ ಹಿನ್ನಡೆಯಾದಂತಾಗಿದೆ.
ಮತದಾನ ಜಾಗೃತಿ ಮೂಡಿಸುವ ದಿಸೆಯಲ್ಲಿ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಹೋಟೆಲ್ ಸೇರಿ ಹಲವು ಹೋಟೆಲ್‌ಗಳು ಮತದಾನ ಮಾಡಿದವರಿಗೆ ಉಚಿತವಾಗಿ ಉಪಾಹಾರ, ಪಾನೀಯ ನೀಡುವುದಾಗಿ ಘೋಷಿಸಿವೆ. ಆದರೆ, ಮೊದಲಿಗೆ ಬಿಬಿಎಂಪಿಯು ಇದನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಬಿಬಿಎಂಪಿ ಆದೇಶ ಪ್ರಶ್ನಿಸಿ ಹೋಟೆಲ್ ಮಾಲೀಕರ ಸಂಘ ಹಾಗೂ ನಿಸರ್ಗ ಹೋಟೆಲ್ ಹೈಕೋರ್ಟ್ ಮೊರೆ ಹೋಗಿದ್ದವು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಬಿಬಿಎಂಪಿ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು. ಆದರೆ, ಹೈಕೋರ್ಟ್ ಆದೇಶ ಪ್ರಶ್ನಿಸಿ ಬಿಬಿಎಂಪಿ ಅಧಿಕಾರಿಗಳು ಮೇಲ್ಮನವಿ ಸಲ್ಲಿಸಿದ್ದವು.
ಇದನ್ನೂ ಓದಿ: Karnataka Election 2023: ಮೇ 10ಕ್ಕೆ ಹಾಕಿ ಮತ; ಬೆಣ್ಣೆ ದೋಸೆ, ಮೈಸೂರ್ ಪಾಕ್ ಪೂರ್ತಿ ಉಚಿತ, ಸಿನಿಮಾ ಟಿಕೆಟ್ಟೂ ಖಚಿತ
ವಿಚಾರಣೆ ನಡೆಸಿ ಏಕಸದಸ್ಯ ಪೀಠ ತಿರ್ಪನ್ನು ಎತ್ತಿ ಹಿಡಿದ ದ್ವಿ ಸದಸ್ಯ ಪೀಠವು ಕೆಲವು ಷರತ್ತುಗಳೊಂದಿಗೆ ಬಿಬಿಎಂಪಿ ನೊಟೀಸ್‌ಗೆ ನೀಡಿದ್ದ ತಡೆಯಾಜ್ಞೆಯನ್ನು ಮುಂದುವರಿಸಿ ಆದೇಶ ನೀಡಿತು. ಇದರಿಂದಾಗಿ, ಬುಧವಾರ ಮತದಾನ ಮಾಡಿ ಬರುವ ನಾಗರಿಕರಿಗೆ ಹೋಟೆಲ್‌ಗಳು ಉಚಿತವಾಗಿ ಉಪಾಹಾರ, ಪಾನೀಯವನ್ನು ನೀಡಬಹುದಾಗಿದೆ.