Site icon Vistara News

Karnataka Election: ಕರ್ನಾಟಕ ಸೇರಿ ದೇಶದ ಎಷ್ಟು ರಾಜ್ಯಗಳಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ?

Karnataka Election

Karnataka Election

ಬೆಂಗಳೂರು: ರಾಜ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ (Karnataka Election) ಕಾಂಗ್ರೆಸ್‌ ಗೆದ್ದು ಬೀಗಿದೆ. ಸ್ಪಷ್ಟ ಬಹುಮತ ಪಡೆದಿದ್ದು, ಸರ್ಕಾರ ರಚಿಸಲು ಸನ್ನದ್ಧವಾಗುತ್ತಿದೆ. ಅದರಲ್ಲೂ, ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿರುವುದು ಲೋಕಸಭೆ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್‌ಗೆ ಅನುಕೂಲ ಎಂದೇ ಹೇಳಲಾಗುತ್ತಿದೆ. ಕರ್ನಾಟಕದಲ್ಲಿ ಗೆಲುವಿನೊಂದಿಗೆ ದೇಶದಲ್ಲಿ ಕಾಂಗ್ರೆಸ್‌ ಬಲವೂ ಹೆಚ್ಚಾಗಿದೆ. ಹಾಗಾದರೆ, ಕರ್ನಾಟಕದ ಗೆಲುವಿನ ಜತೆ ದೇಶದ ಯಾವ ರಾಜ್ಯಗಳಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ? ಎಷ್ಟು ರಾಜ್ಯಗಳಲ್ಲಿ ಸ್ವತಂತ್ರವಾಗಿ ಅಧಿಕಾರ ರಚಿಸಿದೆ? ಎಷ್ಟು ರಾಜ್ಯಗಳಲ್ಲಿ ಮೈತ್ರಿ ಸರ್ಕಾರದ ಭಾಗವಾಗಿದೆ ಎಂಬುದರ ಮಾಹಿತಿ ಇಲ್ಲಿದೆ.

ಕರ್ನಾಟಕ

ಕರ್ನಾಟಕದಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆದಿದೆ. ಒಟ್ಟು 224 ಕ್ಷೇತ್ರಗಳ ಪೈಕಿ 136 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿರುವ ಕಾರಣ ಸುಗಮವಾಗಿ ಸರ್ಕಾರ ರಚಿಸಬಹುದಾಗಿದೆ. ಆಡಳಿತ ವಿರೋಧಿ ಅಲೆಯನ್ನು ಸಮರ್ಥವಾಗಿ ಬಳಸಿಕೊಂಡ ಕಾಂಗ್ರೆಸ್‌ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಜನರ ಗಮನವೀಗ ಕಾಂಗ್ರೆಸ್‌ ಆಡಳಿತದ ಮೇಲಿದೆ. ಜನರ ನಿರೀಕ್ಷೆಯನ್ನು ಎಷ್ಟರಮಟ್ಟಿಗೆ ಕಾಂಗ್ರೆಸ್‌ ನಿಜವಾಗಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶದಲ್ಲಿ ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆದಿದೆ. ಒಟ್ಟು 68 ಕ್ಷೇತ್ರಗಳ ಪೈಕಿ 45 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದು, ಸುಖವಿಂದರ್‌ ಸಿಂಗ್‌ ಸುಖು ಮುಖ್ಯಮಂತ್ರಿಯಾಗಿದ್ದಾರೆ. ಸದ್ಯದ ಮಟ್ಟಿಗೆ ಹಿಮಾಚಲ ಪ್ರದೇಶದಲ್ಲಿ ಸರ್ಕಾರ ಸುಗಮವಾಗಿ ಸಾಗುತ್ತಿದ್ದು, 2027ರತನಕ ಬಿಜೆಪಿಗೆ ಅಧಿಕಾರದ ಕನಸು ಕನಸಾಗಿಯೇ ಇರಲಿದೆ.

ಹಿಮಾಚಲ ಪ್ರದೇಶ ಸಿಎಂ ಸುಖವಿಂದರ್‌ ಸಿಂಗ್‌ ಸುಖು.

ರಾಜಸ್ಥಾನ

ಕಾಂಗ್ರೆಸ್‌ ಆಂತರಿಕ ಬಿಕ್ಕಟ್ಟಿನ ಮಧ್ಯೆಯೂ ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸ್ವಂತ ಬಲದ ಮೇಲೆ ಕಳೆದ ನಾಲ್ಕು ವರ್ಷದಿಂದ ಆಡಳಿತ ನಡೆಸುತ್ತಿದೆ. ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಹಾಗೂ ಪಕ್ಷದ ನಾಯಕ ಸಚಿನ್‌ ಪೈಲಟ್‌ ಮಧ್ಯೆ ಆಗಾಗ ಸಂಘರ್ಷ ನಡೆಯುತ್ತಿದ್ದರೂ ಸರ್ಕಾರ ಮಾತ್ರ ಸ್ಥಿರವಾಗಿದೆ. 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದು, ಇದೇ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿದೆ.

ಛತ್ತೀಸ್‌ಗಢ

ಛತ್ತೀಸ್‌ಗಢದಲ್ಲೂ ಕಾಂಗ್ರೆಸ್‌ 2018ರಿಂದ ಸ್ವಂತ ಬಲದಿಂದ ಆಡಳಿತ ನಡೆಸುತ್ತಿದೆ. ಭೂಪೇಶ್‌ ಬಘೇಲ್‌ ಅವರು ಮುಖ್ಯಮಂತ್ರಿಯಾಗಿದ್ದು, ವರ್ಷಾಂತ್ಯದಲ್ಲಿ ನಡೆಯುವ ಚುನಾವಣೆಗೆ ಸಿದ್ಧರಾಗುತ್ತಿದ್ದಾರೆ. 2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 90 ಕ್ಷೇತ್ರಗಳಲ್ಲಿ 68 ಕ್ಷೇತ್ರ ಗೆದ್ದು ಸರ್ಕಾರ ರಚಿಸಿತ್ತು. ಆದರೆ, ಈ ಬಾರಿ ಆಡಳಿತ ವಿರೋಧಿ ಅಲೆಯನ್ನೂ ಮೆಟ್ಟಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದೇ ಎಂಬ ಪ್ರಶ್ನೆ ಕಾಡುತ್ತಿದೆ.

ಮೂರು ರಾಜ್ಯದಲ್ಲಿ ಕಾಂಗ್ರೆಸ್‌ ಮೈತ್ರಿ ಸರ್ಕಾರದ ಭಾಗ

ನಾಲ್ಕು ರಾಜ್ಯದಲ್ಲಿ ಸ್ವತಂತ್ರವಾಗಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌, ಮೂರು ರಾಜ್ಯದಲ್ಲಿ ಮೈತ್ರಿ ಸರ್ಕಾರದ ಭಾಗವಾಗಿದೆ. ಬಿಹಾರದಲ್ಲಿ ಕಳೆದ ವರ್ಷ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದ ನಿತೀಶ್‌ ಕುಮಾರ್‌ ಅವರು ಆರ್‌ಜೆಡಿ, ಕಾಂಗ್ರೆಸ್‌ ಸೇರಿ ಹಲವು ಪಕ್ಷಗಳ ಜತೆಗೂಡಿ ಸರ್ಕಾರ ರಚಿಸಿದ್ದಾರೆ. 19 ಶಾಸಕರನ್ನು ಹೊಂದಿರುವ ಕಾಂಗ್ರೆಸ್‌, ಮೈತ್ರಿಕೂಟದ ಭಾಗವಾಗಿದೆ. ಜಾರ್ಖಂಡ್‌ನಲ್ಲಿ 2019ರಿಂದ ಜೆಎಂಎಂ ಸರ್ಕಾರದ ಭಾಗವಾಗಿ, ತಮಿಳುನಾಡಿನಲ್ಲಿ 2021ರಿಂದ ಡಿಎಂಕೆ ಸರ್ಕಾರದ ಭಾಗವಾಗಿ ಕಾಂಗ್ರೆಸ್‌ ಇದೆ.

ಪ್ರಸಕ್ತ ವರ್ಷ ಎಲ್ಲೆಲ್ಲಿ ಚನಾವಣೆ?

2023ರಲ್ಲಿ ದೇಶದ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಛತ್ತೀಸ್‌ಗಢ, ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ ಹಾಗೂ ತೆಲಂಗಾಣದಲ್ಲಿ ಚುನಾವಣೆ ನಡೆಯಲಿದ್ದು, ಎರಡು ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ಗೆ ಅಧಿಕಾರ ಉಳಿಸಿಕೊಳ್ಳುವ ಸವಾಲಿದೆ. ರಾಜಸ್ಥಾನದಲ್ಲಿ ಹೆಚ್ಚಿನ ಪ್ರಮಾಣದ ಆಡಳಿತವಿರೋಧಿ ಅಲೆ, ಮುಖ್ಯಮಂತ್ರಿ ವಿರುದ್ಧವೇ ಸಚಿನ್‌ ಪೈಲಟ್‌ ಸಮರ ಸಾರಿರುವುದು ಸೇರಿ ಹಲವು ಸವಾಲುಗಳು ಎದುರಾಗಿವೆ. ಇವೆಲ್ಲವನ್ನೂ ಮೀರಿ ಕಾಂಗ್ರೆಸ್‌ ಉತ್ತಮ ಪ್ರದರ್ಶನ ತೋರಬೇಕಿದೆ.

ಇದನ್ನೂ ಓದಿ: Karnataka Election Results: ಲಿಂಗಾಯತ ಮತಗಳನ್ನು ಕಾಂಗ್ರೆಸ್‌ ಸೆಳೆದಿದ್ದು ಹೇಗೆ? ಬಿಜೆಪಿ ಎಡವಿದ್ದೆಲ್ಲಿ?

Exit mobile version