ಮೈಸೂರು: ʻʻಸಿದ್ಧರಾಮಯ್ಯ ಅವರನ್ನು ಟಿಪ್ಪು ಸುಲ್ತಾನ್‌ನಂತೆ ಹೊಡೆದು ಹಾಕಬೇಕುʼʼ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ಅಶ್ವಥ್ ನಾರಾಯಣ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (Karnataka Election) ತಿರುಗೇಟು ನೀಡಿದ್ದಾರೆ.
ʻʻಅಶ್ವಥ್ ನಾರಾಯಣ್ ಹೇಳಿಕೆಗೆ ನಾನು ಉತ್ತರ ಕೊಡಲ್ಲ. ಆ ಭ್ರಷ್ಟ ಬಚ್ಚಲು ಬಾಯಿ ಮಾತಿಗೆ ನಾನು ಉತ್ತರಿಸೋದಿಲ್ಲ. ಸಚಿವರ ಮಾತಿನ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ, ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಉತ್ತರ ಕೊಡಬೇಕು. ಇದು ನನ್ನ ಆಗ್ರಹʼʼ ಎಂದು ಡಿ.ಕೆ. ಶಿವಕುಮಾರ್ ಮೈಸೂರಿನಲ್ಲಿ ಹೇಳಿದರು.
ತಲೆ ತೆಗೆಯಬೇಕು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ತಲೆ ತೆಗೆಯಲು ಅದೇನು ಟಗರಿನ ತಲೆಯೇ ಎಂದು ಕೇಳಿದರು.
ಸುದೀಪ್ ಅವರನ್ನು ಪಕ್ಷಕ್ಕೆ ಆಹ್ವಾನಿಸಿಲ್ಲ
ʻʻಚಿತ್ರನಟ ಸುದೀಪ್ ನನ್ನ ಸ್ನೇಹಿತ. ಅವರ ಜತೆ ಲೋಕಾಭಿರಾಮವಾಗಿ ಚರ್ಚೆ ಮಾಡಿದ್ದೇನೆ. ರಾಜಕೀಯದ ಬಗ್ಗೆಯೂ ಮಾತನಾಡಿದ್ದೇನೆ. ಅವರು ಸಾಮಾಜಿಕ ಸೇವೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಜತೆ ಚರ್ಚೆ ನಡೆಸಿದ್ದೇನೆ. ಅವರನ್ನು ಬಲವಂತ ಮಾಡುವ ಪ್ರಶ್ನೆಯೇ ಇಲ್ಲ. ನನ್ನ ಅನುಭವದ ಬಗ್ಗೆ ಅವರಿಗೆ ಕೆಲವು ವಿಚಾರ ಹೇಳಿದ್ದೇನೆ ಅಷ್ಟೆ. ನಾನೇನು ಪಕ್ಷಕ್ಕೆ ಆಹ್ವಾನ ಮಾಡಿಲ್ಲʼʼ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಅಶ್ವತ್ಥ್ ನಾರಾಯಣ್ ಹೇಳಿದ್ದೇನು?
ಮಂಡ್ಯದಲ್ಲಿ ಮಾತನಾಡಿದ ಅಶ್ವತ್ಥ್ ನಾರಾಯಣ ಅವರು, ಟಿಪ್ಪುವಿನ ಜಾಗಕ್ಕೆ ಸಿದ್ದರಾಮಯ್ಯ ಬಂದು ಬಿಡುತ್ತಾರೆ. ನಿಮಗೆ ಸಾವರ್ಕರ್ ಬೇಕಾ? ಇಲ್ಲವೇ ಟಿಪ್ಪು ಬೇಕಾ? ನೀವೇ ತೀರ್ಮಾನವನ್ನು ತೆಗೆದುಕೊಳ್ಳಿ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳುತ್ತಿದ್ದಂತೆ ಸಭೆಯಲ್ಲಿ ಸೇರಿದ್ದ ಕಾರ್ಯಕರ್ತರೆಲ್ಲರೂ, ನಮಗೆ ಸಾವರ್ಕರ್ ಬೇಕು ಎಂದು ಹೇಳಿದ್ದಾರೆ. ಮತ್ತೆ ಮತ್ತೆ ಇದನ್ನೇ ಕೇಳಿದಾಗಲೂ ಎಲ್ಲರೂ ಸಾವರ್ಕರ್ ಎಂದೇ ಉತ್ತರಿಸಿದ್ದಾರೆ.
ಆಗ ಮತ್ತೆ ಮಾತನಾಡಿದ ಸಚಿವರು, ಹಾಗಾದರೆ ಟಿಪ್ಪು ಸುಲ್ತಾನನ್ನು ಎಲ್ಲಿಗೆ ಕಳುಹಿಸಬೇಕು? ಟಿಪ್ಪುವನ್ನು ಉರಿಗೌಡ, ನಂಜೇಗೌಡ ಏನ್ ಮಾಡಿದರು? ಎಂದು ಕೇಳಿದರು. ಆಗ ಅಲ್ಲಿನ ಕಾರ್ಯಕರ್ತರು ಹೊಡೆದು ಹಾಕಿದರು ಎಂದು ಉತ್ತರಿಸಿದರು. ಆಗ ಸಚಿವರು, “ಹೌದು. ಟಿಪ್ಪುವನ್ನು ಉರಿಗೌಡ, ನಂಜೇಗೌಡ ಹೊಡೆದು ಹಾಕಿದಂತೆ ಇವರನ್ನೂ ಹೊಡೆದು ಹಾಕಬೇಕು ಎಂದು ಹೇಳುತಾ, ನಮ್ಮತನವನ್ನು ನಾವು ಕಾಪಾಡಬೇಕೆಂದರೆ ಬಿಜೆಪಿಯಿಂದ ಮಾತ್ರ ಸಾಧ್ಯ. ಹೀಗಾಗಿ ಎಲ್ಲರೂ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ : Karnataka Election: ಸಿದ್ದರಾಮಯ್ಯರನ್ನು ಹೊಡೆದು ಹಾಕಿ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಅಶ್ವತ್ಥನಾರಾಯಣ