Site icon Vistara News

Karnataka Election | ಯಲ್ಲಾಪುರ ಕ್ಷೇತ್ರದ ಧ್ವನಿಯಾಗಿ ಕಾಂಗ್ರೆಸ್‌ ಸೇರಿದ್ದೇನೆ, ಪಕ್ಷಕ್ಕಾಗಿ ದುಡಿಯುವೆ: ಶ್ರೀನಿವಾಸ್‌ ಭಟ್‌ ಧಾತ್ರಿ

yellapura srinivasa bhat dhatri

ಯಲ್ಲಾಪುರ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾ ರಾಜಕೀಯ ಗರಿಗೆದರಿದೆ. ಇದೇ ವೇಳೆ ಈಚೆಗೆ ಕಾಂಗ್ರೆಸ್‌ ಸೇರ್ಪಡೆಗೊಂಡಿರುವ ಮಾಜಿ ಶಾಸಕ ವಿ.ಎಸ್. ಪಾಟೀಲ್ ಹಾಗೂ ಉದ್ಯಮಿ ಶ್ರೀನಿವಾಸ್ ಭಟ್ ಧಾತ್ರಿ ಅವರಿಗೆ ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅದ್ಧೂರಿ ಸ್ವಾಗತ ದೊರೆಯಿತು.

ಪಟ್ಟಣದ ವೇದವ್ಯಾಸ ಕಲ್ಯಾಣ ಮಂಟಪದಲ್ಲಿ ಹೊಸದಾಗಿ ಕಾಂಗ್ರೆಸ್ ಸೇರ್ಪಡೆಗೊಂಡವರಿಗೆ ಸ್ವಾಗತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಇದೇ ವೇಳೆ ಮಾತನಾಡಿದ ಶ್ರೀನಿವಾಸ್ ಭಟ್ ಧಾತ್ರಿ, ಯಾವುದೇ ತಪ್ಪನ್ನು ಎತ್ತಿ ಹೇಳಲು ಒಬ್ಬನಿಂದ ಸಾಧ್ಯವಿಲ್ಲ. ಅದಕ್ಕೆ ಒಂದು ಸಂಘಟನೆಯ ಅವಶ್ಯಕತೆ ಇದೆ. ಅದಕ್ಕಾಗಿ ನಾನು ಕಾಂಗ್ರೆಸ್ ಅನ್ನು ಆಯ್ಕೆ ಮಾಡಿದ್ದೇನೆ. ಕ್ಷೇತ್ರದ ಧ್ವನಿಯಾಗಿ ನಾನು ಕಾಂಗ್ರೆಸ್ ಸೇರಿದ್ದೇನೆಯೇ ಹೊರತು ಯಾವುದೇ ಮಹತ್ವಾಕಾಂಕ್ಷೆಯಿಂದ ಅಲ್ಲ. ಯಾರಿಗೆ ಟಿಕೆಟ್ ನೀಡಿದರೂ ಸಹ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯಲು ಸಿದ್ಧನಾಗಿದ್ದೇನೆ. ಕ್ಷೇತ್ರದಲ್ಲಿರುವ ಕೊಳೆಯನ್ನು ನಾವೇ ಸ್ವಚ್ಛಗೊಳಿಸಬೇಕು. ಮುಂದೆ ವಿಜಯೋತ್ಸವದ ಆಚರಣೆಗೆ ಮತ್ತೊಮ್ಮೆ ಎಲ್ಲರೂ ಸೇರುವಂತಾಗಲಿ ಎಂದರು.

ಇದನ್ನೂ ಓದಿ | Sensex crash | ಸೆನ್ಸೆಕ್ಸ್‌ 635 ಅಂಕ ಕುಸಿತ, ಭಾರಿ ಪತನಕ್ಕೆ ಕಾರಣವೇನು?

ಪ್ರಜಾಪ್ರಭುತ್ವ ಉಳಿಕೆಗೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು
ಮಾಜಿ‌ ಶಾಸಕ ವಿ.ಎಸ್. ಪಾಟೀಲ್ ಮಾತನಾಡಿ, ಅಂದು ಕಾಂಗ್ರೆಸ್ ಬಡವರ ಪಕ್ಷ ಎಂದು ಹೇಳಿ ಮತ ಪಡೆದವರು ಇಂದು ಹಣ ಮಾಡುವ ಪಕ್ಷಕ್ಕೆ ಸೇರಿದ್ದಾರೆ. ಹಣದಿಂದ ಯಾರನ್ನಾದರೂ ಖರೀದಿಸಬಹುದು ಎಂದು ಅವರು ಅಂದುಕೊಂಡಿದ್ದಾರೆ. ಆ ಹಣ ಹೇಗೆ ಮಾಡಿದ್ದಾರೆ ಎನ್ನುವುದನ್ನು ಸಹ ಜನರು ಅರಿತಿದ್ದಾರೆ. ಮನೆ ಹಂಚುವ ಗ್ರಾಮ ಪಂಚಾಯಿತಿಯ ಕಾರ್ಯವನ್ನು ಸಹ ಇಂದು ಮಂತ್ರಿಗಳೇ ಮಾಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ಪ್ರಜಾಪ್ರಭುತ್ವ ಹದಗೆಡುತ್ತಿದೆ. ಮತ್ತೊಮ್ಮೆ ಪ್ರಜಾಪ್ರಭುತ್ವವನ್ನು ಉಳಿಸಬೇಕು. ಅದಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತಗಳನ್ನು ಮೆಚ್ಚಿ ಇಂದು ಇವರಿಬ್ಬರೂ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅವರೊಂದಿಗೆ ಪಕ್ಷವನ್ನು ಬೆಳೆಸುವತ್ತ ಇನ್ನಷ್ಟು ಶ್ರಮಿಸೋಣ. ಅಧಿಕಾರದ ಆಸೆಗಾಗಿ ಸಾವಿರಾರು ಕಾರ್ಯಕರ್ತರನ್ನು ಬದಿಗೊತ್ತಿ ಪಕ್ಷ ತೊರೆದಿದ್ದರು. ಆದರೂ ಸಹ ಪಕ್ಷದ ಕಾರ್ಯಕರ್ತರು ನನಗೆ ನೀಡಿದ ಬೆಂಬಲದಿಂದ 50 ಸಾವಿರಕ್ಕೂ ಅಧಿಕ ಮತವನ್ನು ನಾನು ಪಡೆದಿದ್ದೆ. ಅಂತೆಯೇ ಮುಂದಿನ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾದರೂ ಅವರೊಂದಿಗೆ ನಿಂತು ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳೋಣ ಎಂದರು.

ಕಾರ್ಯಕ್ರಮಕ್ಕೂ ಮುನ್ನ ವಿ.ಎಸ್. ಪಾಟೀಲ್ ಹಾಗೂ ಶ್ರೀನಿವಾಸ್ ಭಟ್ ಧಾತ್ರಿ ಅವರನ್ನು ಅದ್ಧೂರಿಯಾಗಿ ಪಟ್ಟಣಕ್ಕೆ ಬರಮಾಡಿಕೊಳ್ಳಲಾಯಿತು. ಮೆರವಣಿಗೆಯ ಮೂಲಕ ದೇವಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಇದನ್ನೂ ಓದಿ | ಅಯೋಧ್ಯೆ ಮಾದರಿಯಲ್ಲಿ ರಾಮದೇವರ ಬೆಟ್ಟ ಅಭಿವೃದ್ಧಿ: ಸಿಎಂಗೆ ಸಚಿವ ಅಶ್ವತ್ಥನಾರಾಯಣ ಪತ್ರ

Exit mobile version