Site icon Vistara News

Karnataka Election : ಜಾರಕಿಹೊಳಿ ಜತೆ ಹೊಂದಾಣಿಕೆ ಮಾಡಿಲ್ಲ: ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿದ ಕೈ ಟಿಕೆಟ್‌ ಆಕಾಂಕ್ಷಿ ಅಶೋಕ ಪೂಜಾರಿ

#image_title

ಚಿಕ್ಕೋಡಿ/ ಮಂಗಳೂರು: ಬೆಳಗಾವಿ ಯಾವತ್ತೂ ರಂಗುರಂಗಿನ ರಾಜಕಾರಣಕ್ಕೆ ಹೆಸರು. ಸಾಹುಕಾರ್‌ ಬ್ರದರ್ಸ್‌, ಅಂಗಡಿ ಫ್ಯಾಮಿಲಿ, ಹೆಬ್ಬಾಳ್ಕರ್‌ ಕುಟುಂಬ, ಕತ್ತಿ ಯಜಮಾನಿಕೆ, ಹುಕ್ಕೇರಿ ಬ್ರದರ್ಸ್‌ ಹೀಗೆ ಬಲಾಢ್ಯ ರಾಜಕೀಯ (Karnataka Election) ಖಾನ್‌ ದಾನ್‌ಗಳೇ ಅಲ್ಲಿವೆ. ಇಂಥ ಊರಿನಲ್ಲಿ ಈಗ ಆಣೆ ಪ್ರಮಾಣ ಚರ್ಚೆಗೆ ಕಾರಣವಾಗಿವೆ

ನಾನು ರಮೇಶ್‌ ಜಾರಕಿಹೊಳಿ ಜತೆ ಯಾವುದೇ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿಲ್ಲ ಎಂದು ಗೋಕಾಕ ಕ್ಷೇತ್ರದಲ್ಲಿ ನಿರಂತರವಾಗಿ ಸ್ಪರ್ಧಿಸಿ ಸೋಲುತ್ತಿರುವ ಅಶೋಕ್‌ ಪೂಜಾರಿ ಅವರು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿದ್ದಾರೆ. ಅವರು ಗೋಕಾಕದಿಂದ ಧರ್ಮಸ್ಥಳ ಕ್ಷೇತ್ರಕ್ಕೆ ತೆರಳಿ ಪ್ರಮಾಣ ಮಾಡಿದ್ದಾರೆ.

ಅಶೋಕ್‌ ಪೂಜಾರಿಯವರು 2008, 2013, 2018 ಮತ್ತು 2019ರಲ್ಲಿ ಗೋಕಾಕ ಕ್ಷೇತ್ರದಲ್ಲಿ ರಮೇಶ್‌ ಜಾರಕಿಹೊಳಿ ಅವರ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದರು. 2008 ಹಾಗೂ 2013ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ, 2018ರಲ್ಲಿ ಬಿಜೆಪಿಯಿಂದ, 2019ರ ಉಪ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದಿಂದ ಅವರು ಕಣಕ್ಕಿಳಿದಿದ್ದರು. 2023ರಲ್ಲಿ ಅವರು ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಕಳೆದ ಎಲ್ಲ ಚುನಾವಣೆಗಳಲ್ಲೂ ಅವರು ರಮೇಶ್‌ ಜಾರಕಿಹೊಳಿ ಅವರ ಜತೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂಬ ಆರೋಪ ಎದುರಾಗಿದೆ ಎನ್ನಲಾಗಿದೆ. ಆದರೆ, ಅಶೋಕ ಪೂಜಾರಿ ಅವರು ಹೇಳುವುದೇ ಬೇರೆ. ನಾನು ಹೊಂದಾಣಿಕೆ ರಾಜಕಾರಣ ಮಾಡದೆ ಇರುವುದರಿಂದಲೇ ಪ್ರತಿ ಬಾರಿಯೂ ಪಕ್ಷ ಬದಲಾಯಿಸಬೇಕಾಗಿದೆ ಎಂದು!

ʻʻನಮ್ಮದು ಮಧ್ಯಮ ವರ್ಗದ ಕುಟುಂಬ. ನಾನು ಜನರೊಂದಿಗೆ ಬೆರೆತು ಚುನಾವಣೆ ಎದುರಿಸುವ ಅನಿವಾರ್ಯತೆ ಇದೆ. ಈ ಹಿಂದೆ ಮೂರು ಬಾರಿ ಸ್ಪರ್ಧಿಸುವಾಗಲೂ ಚುನಾವಣೆಯ ಕೊನೆಯ ಘಳಿಗೆಯಲ್ಲಿ ನನ್ನ ವಿರುದ್ಧ ಪ್ರತಿಪಕ್ಷದವರು ಹಾಗೂ ನನ್ನ ಜತೆ ಇದ್ದವರೇ ಗುಲ್ಲು ಎಬ್ಬಿಸಿದ್ದಾರೆ. ಆದರೆ ತಾನು ಯಾವುದೇ ರೀತಿಯಲ್ಲಿ ಪ್ರತಿಸ್ಪರ್ಧಿಗಳಿಂದ ಹಣ ಪಡೆದಿಲ್ಲ. ಹೀಗಾಗಿ ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮಾಡಿದ್ದೇನೆ,” ಎಂದು ಅಶೋಕ್‌ ಪೂಜಾರಿ ಅವರು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿದ ಬಳಿಕ ಹೇಳಿದರು.

ಅಶೋಕ್‌ ಪೂಜಾರಿ ಅವರ ಸೋಲಿನ ಹಾದಿ

ಅಶೋಕ ಪೂಜಾರಿ ಅವರು ರಮೇಶ್ ಜಾರಕಿಹೊಳಿ ವಿರುದ್ಧ 2008ರಿಂದಲೂ ಸೋಲಿನ ಸುಳಿಯಲ್ಲೇ ಇದ್ದಾರೆ. 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಅಶೋಕ ಪೂಜಾರಿ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ರಮೇಶ್ ಜಾರಕಿಹೊಳಿ ವಿರುದ್ಧ ಸೋಲನುಭವಿಸಿದ್ದರು. ಅದರಲ್ಲಿ ಅಶೋಕ ಪೂಜಾರಿ ಅವರು 75961 ಮತ ಪಡೆದಿದ್ದರೆ ರಮೇಶ್ ಜಾರಕಿಹೊಳಿ ಅವರಿಗೆ 90,249 ಮತ ಸಿಕ್ಕಿತ್ತು.

ಈ ನಡುವೆ, 2019ರ ಹೊತ್ತಿಗೆ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್‌ ಬಿಟ್ಟು ಬಿಜೆಪಿ ಪಾಳಯ ಸೇರಿಕೊಂಡರೆ, ಅದೇ ಹೊತ್ತಿಗೆ ಬಿಜೆಪಿಯಲ್ಲಿದ್ದ ಅಶೋಕ ಪೂಜಾರಿ ಅವರು ಜೆಡಿಎಸ್‌ ಸೇರಿದರು. ಅಲ್ಲಿಂದ ಮೈತ್ರಿಕೂಟದ ಸ್ಪರ್ಧಿಯಾದರು. ಈ ಸ್ಪರ್ಧೆಯಲ್ಲಿ ರಮೇಶ್‌ ಜಾರಕಿಹೊಳಿಗೆ 87,450 ಮತಗಳು ಬಿದ್ದರೆ, ಅಶೋಕ ಪೂಜಾರಿ ಸಿಕ್ಕಿದ್ದು 58,444. ಇದೀಗ ಅವರು ಮತ್ತೆ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

ತಮ್ಮ ಮೇಲಿನ ಹೊಂದಾಣಿಕೆ ರಾಜಕಾರಣದ ಆರೋಪವನ್ನು ತೊಡೆದುಹಾಕುವುದಕ್ಕೆ ಮುಂದಾದ ಅಶೋಕ್‌ ಪೂಜಾರಿ ಅವರು, ನಾನು ರಮೇಶ್‌ ಜಾರಕಿಹೊಳಿ ಅವರಿಂದ ದುಡ್ಡು ಪಡೆದು ಹೊಂದಾಣಿಕೆ ರಾಜಕೀಯ ಮಾಡಿಲ್ಲ ಎಂದು ಪ್ರಮಾಣ ಮಾಡಿದ್ದಾರೆ.

ತಮ್ಮ ಮಕ್ಕಳು ಹಾಗೂ ಕಾರ್ಯಕರ್ತರೊಂದಿಗೆ ಧರ್ಮಸ್ಥಳಕ್ಕೆ ಆಗಮಿಸಿದ್ದ ಅವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮುಂದೆ ತಮ್ಮ ನೋವನ್ನು ಹೇಳಿಕೊಂಡರು. ಜತೆಗೆ ಧರ್ಮಸ್ಥಳದ ಮಂಜುನಾಥ ಸ್ವಾಮಿ ಮೇಲೆ ಪ್ರಮಾಣ ಮಾಡಿದರು.

ಅಶೋಕ್‌ ಪೂಜಾರಿ ಅವರು 2019ರ ಚುನಾವಣೆಯ ಸಂದರ್ಭದಲ್ಲೂ ಮೈಮೇಲೆ ನೀರು ಹಾಕಿಕೊಂಡು ಮನೆ ದೇವರನ್ನು ಸ್ಪರ್ಶಿಸಿ ಇದೇ ರೀತಿ ಪ್ರಮಾಣ ಮಾಡಿದ್ದರು.

ಇದನ್ನೂ ಓದಿ : Ramesh Jarkiholi: ರಮೇಶ್‌ ಜಾರಕಿಹೊಳಿ ಮೆಂಟಲ್‌ ಕೇಸ್‌; ಆತನ ಬಗ್ಗೆ ನನಗೆ ಕೇಳಲೇಬೇಡಿ: ಡಿ.ಕೆ. ಶಿವಕುಮಾರ್

Exit mobile version