Site icon Vistara News

Karnataka Election : ಕಾಂಗ್ರೆಸನ್ನು ಸಂಪರ್ಕಿಸಿಲ್ಲ, ಯಾವ ಕಾರಣಕ್ಕೂ ಜೆಡಿಎಸ್‌ ಬಿಡಲ್ಲ: ಹಾಸನದ ಎಚ್‌.ಪಿ ಸ್ವರೂಪ್‌ ಸ್ಪಷ್ಟೋಕ್ತಿ

HP swarup

#image_title

ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿ ಎಚ್‌.ಪಿ. ಸ್ವರೂಪ್‌ ಅವರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ಭಾರಿ ಸುದ್ದಿ ಮಾಡುತ್ತಿದೆ. ಇದು ಎಷ್ಟರ ಮಟ್ಟಿಗೆ ಬಿರುಗಾಳಿಯಂತೆ ಹರಡುತ್ತಿದೆ ಎಂದರೆ ಸ್ವತಃ ಎಚ್‌.ಪಿ. ಸ್ವರೂಪ್‌ ಅವರೇ ಇದು ಸುಳ್ಳು ಸುದ್ದಿ, ನಾನು ಕಾಂಗ್ರೆಸ್‌ನ್ನು ಸಂಪರ್ಕಿಸಿಲ್ಲ, ಜೆಡಿಎಸ್‌ನ್ನು ಬಿಡಲ್ಲ ಎಂದು ಪತ್ರಿಕಾ ಹೇಳಿಕೆಯನ್ನೇ ಬಿಡುಗಡೆ ಮಾಡಿದ್ದಾರೆ.

ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗಾಗಿ ಜೆಡಿಎಸ್‌ನಲ್ಲೇ ಭಾರಿ ಪೈಪೋಟಿ ಇದೆ. ಎಚ್‌.ಡಿ. ಕುಮಾರಸ್ವಾಮಿ ಅವರು ಯುವ ನಾಯಕ ಎಚ್‌.ಪಿ. ಸ್ವರೂಪ್‌ ಅವರಿಗೇ ಟಿಕೆಟ್‌ ನೀಡುವ ಬಗ್ಗೆ ಸ್ಪಷ್ಟ ನಿರ್ಧಾರ ಹೊಂದಿದ್ದಾರೆ. ಆದರೆ, ಎಚ್‌.ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಪ್ರಬಲ ಆಕಾಂಕ್ಷಿಯಾಗಿದ್ದಾರೆ ಮಾತ್ರವಲ್ಲ ಪ್ರಚಾರದ ಕಣಕ್ಕೂ ಇಳಿದಿದ್ದರು. ಹಾಸನ ಕ್ಷೇತ್ರದಲ್ಲಿ ನಮ್ಮ ಕುಟುಂಬದ ಯಾರನ್ನೋ ನಿಲ್ಲಿಸಿ ಗೆಲ್ಲುವ ಅನಿವಾರ್ಯತೆ ಇಲ್ಲ, ಸಾಮಾನ್ಯ ಕಾರ್ಯಕರ್ತರನ್ನೇ ಗೆಲ್ಲಿಸಬಲ್ಲ ಶಕ್ತಿ ಜೆಡಿಎಸ್‌ಗೆ ಇದೆ ಎನ್ನುವುದು ಎಚ್‌.ಡಿ. ಕುಮಾರಸ್ವಾಮಿ ವಾದ. ಇದರ ನಡುವೆಯೇ ಎಚ್.ಡಿ. ರೇವಣ್ಣ ಅವರು ತಾನೇ ನಿಂತರೆ ಹೇಗೆ ಎಂದು ಯೋಚಿಸುತ್ತಿದ್ದಾರೆ. ಈ ಟಿಕೆಟ್‌ ಜಗಳ ಈಗ ಎಚ್‌.ಡಿ. ದೇವೇಗೌಡರ ಅಂಗಳದಲ್ಲಿದೆ. ಅವರು ಆಸ್ಪತ್ರೆಯಲ್ಲಿದ್ದಾರೆ. ಇಂಥ ಅಯೋಮಯ ಸ್ಥಿತಿಯಲ್ಲಿ ಸ್ವರೂಪ್‌ ಅವರು ಕಾಂಗ್ರೆಸ್‌ ಸಂಪರ್ಕದಲ್ಲಿದ್ದಾರೆ ಎಂದು ಡಿ.ಕೆ. ಶಿವಕುಮಾರ್‌ ಅವರು ಹೇಳಿದ್ದು ಕೆಲವರಿಗೆ ಇದ್ದರೂ ಇರಬಹುದು ಎಂಬ ಅಭಿಪ್ರಾಯವನ್ನು ಮೂಡಿಸಿತ್ತು. ಅದಕ್ಕಾಗಿ ಸ್ವರೂಪ್‌ ಅವರು ಪತ್ರಿಕಾ ಹೇಳಿಕೆಯನ್ನೇ ಬಿಡುಗಡೆ ಮಾಡಿದ್ದಾರೆ.

ಸ್ವರೂಪ್‌ ಹೇಳಿದ್ದೇನು?

ʻʻನಾನು ಮತ್ತು ನನ್ನ ಕುಟುಂಬದವರು ಜೆಡಿಎಸ್ ಪಕ್ಷದ ಕಟ್ಟಾ ಬೆಂಬಲಿಗರು. ನಾನು‌ ಹುಟ್ಟಿ ಬೆಳೆದಿದ್ದೆಲ್ಲಾ ಜೆಡಿಎಸ್ ಪರಿಸರದಲ್ಲಿಯೇ. ನಾನು 2023 ರ ವಿಧಾನಸಭಾ ಚುನಾವಣೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಾಕಾಂಕ್ಷಿ. ಈ ವಿಚಾರದಲ್ಲಿ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧ ಎಂದು ನಾನು ಹಲವು ಭಾರಿ ಸ್ಪಷ್ಟಪಡಿಸಿದ್ದೇನೆ. ಹೀಗಿದ್ದಾಗಲೂ ನಾನು ಕಾಂಗ್ರೆಸ್ ಪಕ್ಷದ ಸಂಪರ್ಕದಲ್ಲಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ರವರು ಹೇಳಿಕೆ ನೀಡಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದ್ದನ್ನು ಗಮನಿಸಿದ್ದೇನೆ. ಇದೆಲ್ಲಾ ಊಹಾಪೋಹ ನನ್ನನ್ನು ಯಾವ ಕಾಂಗ್ರೆಸ್ ಮುಖಂಡ ಕೂಡ ಸಂಪರ್ಕಿಸಿಲ್ಲ. ನಾನು ಯಾವ ಕಾಂಗ್ರೆಸ್ ಮುಖಂಡರನ್ನು ಸಂಪರ್ಕಿಸುವ ಪ್ರಯತ್ನವನ್ನು ಮಾಡಿಲ್ಲ ಎಂಬುದನ್ನು ಪ್ರಮಾಣಪೂರ್ವಕವಾಗಿ ಹೇಳ ಬಯಸುತ್ತೇನೆʼʼ ಎಂದು ಎಚ್‌.ಪಿ. ಸ್ವರೂಪ್‌ ಹೇಳಿದ್ದಾರೆ.

ʻʻನನಗೆ ಎಚ್.ಡಿ.ದೇವೇಗೌಡರೇ ದೇವರು, ಜೆಡಿಎಸ್ ಪಕ್ಷವೇ ಆಶ್ರಯ. ಎಚ್.ಡಿ.ರೇವಣ್ಣ‌ನವರು, ಎಚ್.ಡಿ‌.ಕುಮಾರಸ್ವಾಮಿನವರೇ ರಾಜಕೀಯ ಆಶ್ರಯದಾತರು. ಹಾಗಾಗಿ ನಾನು ಬೇರೆ ಯಾವ ಪಕ್ಷದ ಸಂಪರ್ಕದಲ್ಲಿರುವೆ ಎಂಬುದೆಲ್ಲಾ ಆಧಾರರಹಿತ ಮತ್ತು ನನಗೆ ತೊಂದರೆ ಕೊಡುವ ಪ್ರಯತ್ನಗಳೆಂದೇ ಭಾವಿಸುವೆʼʼ ಎಂದು ಪ್ರತಿಕ್ರಿಯಿಸಿದ್ದಾರೆ.

ʻʻಹಾಗಾಗಿ ಮಾಧ್ಯಮಗಳಲ್ಲಿ ಕಾಂಗ್ರೆಸ್ ಸಂಪರ್ಕದಲ್ಲಿರುವೆ ಎಂಬ ವರದಿಗಳನ್ನು ಸಾರಸಗಟಾಗಿ ಅಲ್ಲಗಳೆಯುತ್ತೇನೆʼʼ ಎಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ ಎಚ್.ಪಿ.ಸ್ವರೂಪ್.

ಇದನ್ನೂ ಓದಿ : Hasana politics : ಹಾಸನ ಟಿಕೆಟ್‌ ಸಭೆಗೆ ದೇವೇಗೌಡರ ಬ್ರೇಕ್; ಎಚ್‌ಡಿಕೆ ಕೆಂಡಾಮಂಡಲ, ಮುಂದೂಡಿದ್ದು ಯಾರು ಅಂತ ನೋಡ್ತೇನೆ

Exit mobile version