ಕೊಪ್ಪಳ: ತಮ್ಮನ್ನು ಪ್ರತಿ ಬಾರಿಯೂ ವಿದೂಷಕ, ಜೋಕರ್ ಎಂದೆಲ್ಲ ಗೇಲಿ ಮಾಡುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ. ʻʻಸಿದ್ದರಾಮಯ್ಯ ನನಗೆ ಜೋಕರ್ ಎನ್ನುತ್ತಾರೆ. ನಾನು ಸಿದ್ದರಾಮಯ್ಯ ಬ್ರೋಕರ್ ಎನ್ನುತ್ತೇನೆʼʼ ಎಂದು ಅವರು ಕೊಪ್ಪಳ ಜಿಲ್ಲೆ ಕುಕನೂರಿನಲ್ಲಿ ಮಂಗಳವಾರ ಆಯೋಜನೆಗೊಂಡ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ (Karnataka Election) ಹೇಳಿದರು.
ವಿಜಯ ಸಂಕಲ್ಪ ಯಾತ್ರೆಯ ಎರಡನೇ ಹಂತದಲ್ಲಿ ಮಂಗಳವಾರ ಕೊಪ್ಪಳ ಜಿಲ್ಲೆಯ ಕುಕನೂರು ಮತ್ತು ಗಂಗಾವತಿಯಲ್ಲಿ ಕಾರ್ಯಕ್ರಮ ನಡೆಯಿತು. ನಳಿನ್ ಕುಮಾರ್ ಅವರ ನೇತೃತ್ವದಲ್ಲಿ ಬೆಳಗ್ಗೆ ಮಸಬಹಂಚಿನಾಳನಿಂದ ಕುಕನೂರುವರೆಗೂ ಬೈಕ್ ರ‌್ಯಾಲಿ ನಡೆಯಿತು. ಮಧ್ಯಾಹ್ನ ಬೂದಗುಂಪಾದಿಂದ ಬೈಕ್ ರ‍್ಯಾಲಿ ಆಯೋಜನೆಗೊಂಡಿತು. ಆ ಬಳಿಕ ಗಂಗಾವತಿಯ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ವಿಜಯ ಸಂಕಲ್ಪ ಯಾತ್ರೆಯ ವೇದಿಕೆ ಕಾರ್ಯಕ್ರಮ ಜರುಗಿತು. ಅಲ್ಲಿ ನಳಿನ್ ಕುಮಾರ್ ಕಟೀಲ್ ಮಾತನಾಡಿ ಸಿದ್ದರಾಮಯ್ಯ ಅವರಿಗೆ ಠಕ್ಕರ್ ನೀಡಿದರು.
ನನ್ನನ್ನು ಜೋಕರ್ ಅಂದರೆ ತೊಂದರೆ ಇಲ್ಲ. ಜೋಕರ್‌ಗಳಿಂದ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ. ಆದರೆ, ಖಳನಾಯಕರಾದರೆ, ಬ್ರೋಕರ್‌ಗಳಾದರೆ ಕಷ್ಟ. ನಿಜವೆಂದರೆ ಕಾಂಗ್ರೆಸ್ ಈಗ ಕತ್ತೆಗೂ ಬೇಡವಾಗಿದೆ ಎಂದು ಹೇಳಿದ ಅವರು, ಈ ಬಾರಿಯ ಚುನಾವಣೆಯ ಬಳಿಕ ʻಬಂಡೆ ಒಡೆದು ಹೋಗುತ್ತದೆ, ಹುಲಿ ಕಾಡಿಗೆ ಹೋಗುತ್ತದೆʼ ಎಂದರು.
ನನ್ನ ಅಪ್ಪನ ಆಣೆಯಾಗಿಯೂ ಸಿದ್ದರಾಮಯ್ಯ ಸಿಎಂ ಆಗಲ್ಲ
ʻʻಸಿದ್ದರಾಮಯ್ಯ ಅವರು ತಾಕತ್ತು ಇದ್ದರೆ ಬಾದಾಮಿಯಲ್ಲಿ ಸ್ಪರ್ಧಿಸಲಿ. ನನ್ನಪ್ಪನ ಆಣೆಯಾಗಿಯೂ ಸಿದ್ದರಾಮಣ್ಣ ಮತ್ತೆ ಮುಖ್ಯಮಂತ್ರಿಯಾಗುವುದಿಲ್ಲ. ಆವತ್ತು ಅವರು ಸೋನಿಯಾ ಗಾಂಧಿ ಕಾಲು ಹಿಡಿದು ಮುಖ್ಯಮಂತ್ರಿಯಾದರು. ಸಿದ್ದರಾಮಣ್ಣ ದೇವೇಗೌಡರಿಂದ ಬೆಳೆದು ಅವರನ್ನು ತುಳಿದರುʼʼ ಎಂದು ಹೇಳಿದರು.
ʻʻಸಿದ್ದರಾಮಣ್ಣ ಹಿಜಾಬ್ ಪರ, ಡಿಜೆಹಳ್ಳಿಯಲ್ಲಿ ನೀವು ಕಲ್ಲು ಹೊಡೆದವರ ಪರʼʼ ಎಂದು ಹೇಳಿದ ನಳಿನ್, ʻʻಸಿದ್ದರಾಮಯ್ಯ ಅವರು ತಮ್ಮ ಆಡಳಿತಾವಧಿಯಲ್ಲಿ 220 ಪಿಎಫ್ಐ ಕಾರ್ಯಕರ್ತರನ್ನು ಬಂಧಮುಕ್ತಗೊಳಿಸಿದರು. ಅವರ ಕಾಲದಲ್ಲೇ 24 ಹಿಂದು ಕಾರ್ಯಕರ್ತರ ಹತ್ಯೆಯಾಯಿತುʼʼ ಎಂದರು.
ʻʻಕಾಂಗ್ರೆಸ್ ಭಯೋತ್ಪಾದಕರ ಪರವಾಗಿರುವ ಪಕ್ಷ. ಮುಸಲ್ಮಾನರ ಪರವಾಗಿರುವ ಪಕ್ಷ. ಅವರು ಒಂದು ದಿನವೂ ಭಾರತ್ ಮಾತಾಕಿ ಜೈ ಎನ್ನಲ್ಲಿಲ್ಲ. ಇಂದಿರಾ ಗಾಂಧಿ ಕೀ ಜೈ, ಸೋನಿಯಾ ಗಾಂಧಿ ಕಿ ಜೈ, ರಾಹುಲ್ ಗಾಂಧೀ ಕಿ ಜೈ, ಪ್ರಿಯಾಂಕಾ ಗಾಂಧಿ ಕಿ ಜೈ ಅನ್ನುತ್ತಿದ್ದಾರೆ. ಮುಂದೆ ಪ್ರಿಯಾಂಕ ಗಾಂಧಿ ಮಕ್ಕಳಿಗೆ ಜೈ ಎನ್ನುತ್ತಾರೆʼʼ ಎಂದರು ಗೇಲಿ ಮಾಡಿದರು.
ʻʻನಾವು ರಾಮಭಕ್ತರು, ಆಂಜನೇಯ ಭಕ್ತರು. 2024ರಲ್ಲಿ ರಾಮ ಪಟ್ಟಾಭಿಷೇಕವಾಗುತ್ತದೆ. ನಾವು ಈ ನೆಲದಲ್ಲಿ ಟಿಪ್ಪು ಭಜನೆ ಮಾಡುವವರನ್ನು ಹೊರ ಕಳುಹಿಸಬೇಕು. ರಾಜ್ಯವನ್ನು ಕಾಂಗ್ರೆಸ್ ಮುಕ್ತಗೊಳಿಸಬೇಕುʼʼ ಎಂದು ಹೇಳಿದರು.
ʻʻಕೊರೊನಾ ಲಸಿಕೆ ಹಾಕಿಕೊಂಡರೆ ಮಕ್ಕಳಾಗುವುದಿಲ್ಲ ಎಂದಿದ್ದರು ರಾಹುಲ್ ಗಾಂಧಿ. ಅವರಿಗೆ ಈಗಲೂ ಮದುವೆಯಾಗಿಲ್ಲʼʼ ಎಂದು ರಾಹುಲ್ ಗಾಂಧಿ ಕಾಲೆಳೆದರು ನಳಿನ್.