Site icon Vistara News

Karnataka Election | ಬಿಜೆಪಿಯಲ್ಲಿ ಸೈಡ್‌ಲೈನ್‌ ಆದ ಸಚಿವ ಶ್ರೀರಾಮುಲು, ಮೋದಿ ಕಾರ್ಯಕ್ರಮಕ್ಕೂ ಆಹ್ವಾನವಿಲ್ಲ!

ಶ್ರೀರಾಮುಲು

ರಾಯಚೂರು: ಸಮಾಜ ಕಲ್ಯಾಣ ಖಾತೆ ಸಚಿವ ಶ್ರೀರಾಮುಲು ಅವರು ಬಿಜೆಪಿಯಲ್ಲಿ ಸೈಡ್‌ ಲೈನ್‌ ಆಗುತ್ತಿರುವುದು ನಿಜವಾ? (Karnataka Election) ಹೌದು ಎನ್ನುತ್ತವೆ ಇತ್ತೀಚಿನ ಕೆಲವು ಘಟನಾವಳಿಗಳು. ಅತ್ತ ಆಪ್ತ ಗೆಳೆಯ ಜನಾರ್ದನ ರೆಡ್ಡಿ ಅವರ ಜತೆಗೆ ಸೇರಲಾಗದೆ, ಇತ್ತ ಬಿಜೆಪಿ ಜತೆಗೂ ಹೆಚ್ಚು ಬೆರೆಯಲಾಗದೆ ಇಕ್ಕಟ್ಟಿನ ಸ್ಥಿತಿಯಲ್ಲಿದ್ದಾರೆ ಶ್ರೀರಾಮುಲು. ಆದರೆ, ಬಿಜೆಪಿಗೆ ಮಾತ್ರ ಅವರು ಇವತ್ತಲ್ಲ ನಾಳೆ ಜನಾರ್ದನ ರೆಡ್ಡಿ ಅವರ ಜತೆಗೇ ಕೈಜೋಡಿಸಬಹುದು ಎಂಬ ಸಂಶಯ ಕಾಡುತ್ತಲೇ ಇದೆ ಅನಿಸುತ್ತಿದೆ. ಹೀಗಾಗಿ ಅದು ಅವರನ್ನು ಕಡೆಗಣಿಸುವ ತೀರ್ಮಾನಕ್ಕೆ ಬಂದಿದೆಯಾ?

ಈ ಪ್ರಶ್ನೆ ಜೋರಾಗಿ ಎದ್ದು ನಿಂತಿದ್ದು ಯಾದಗಿರಿಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಶ್ರೀರಾಮುಲು ಕಾಣಿಸಿಕೊಳ್ಳದೆ ಹೋದಾಗ!

ಗುರುವಾರ ಯಾದಗಿರಿ ಜಿಲ್ಲೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ ಅತಿದೊಡ್ಡ ಕಾರ್ಯಕ್ರಮ ನಡೆದಿತ್ತು. ಇದು ಸರ್ಕಾರಿ ಕಾರ್ಯಕ್ರಮವೆಂದು ಹೇಳಲಾಗಿದ್ದರೂ ಅದು ಬಿಜೆಪಿಯ ಕಾರ್ಯಕ್ರಮವೇ ಅದಾಗಿತ್ತು. ಇಲ್ಲಿ ಯಾದಗಿರಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದರೆ, ಪಕ್ಕದ ರಾಯಚೂರಿನಲ್ಲೇ ಇದ್ದರು ಶ್ರೀರಾಮುಲು. ಆದರೆ, ಅವರಿಗೆ ಆಮಂತ್ರಣವೇ ಇರಲಿಲ್ಲ.

ಯಾದಗಿರಿಯ ಎಸ್‌ಟಿ ಮೀಸಲು ಕ್ಷೇತ್ರದಲ್ಲೇ ಕಾರ್ಯಕ್ರಮ ನಡೆದಿದೆಯಾದರೂ ಶ್ರೀರಾಮುಲು ಅವರಿಗೆ ಕರೆ ಇರಲಿಲ್ಲ. ಯಾದಗಿರಿ ಜಿಲ್ಲೆ ಸುರಪುರ ಎಸ್ ಟಿ ಮೀಸಲು ಕ್ಷೇತ್ರದ ಕೊಡೇಕಲ್‌ನಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು. ಕಾರ್ಯಕ್ರಮಕ್ಕೆ ಕರೆಯುವುದು ಬಿಡಿ, ಅಲ್ಲೆಲ್ಲ ಹಾಕಲಾದ ದೊಡ್ಡ ದೊಡ್ಡ ಫ್ಲೆಕ್ಸ್‌ಗಳಲ್ಲಿ ಶ್ರೀರಾಮುಲು ಅವರ ಫೋಟೊವೇ ಇರಲಿಲ್ಲ. ನಿಜವೆಂದರೆ ರಾಯಚೂರಿನಲ್ಲೂ ರಾಮುಲು ಅವರಿಗೆ ದೊಡ್ಡ ಕೆಲಸವೇನೂ ಇರಲಿಲ್ಲ. ಅಧಿಕಾರಿಗಳ ಸಭೆ ಕರೆದಿದ್ದರು ಅಷ್ಟೆ.

ಒಂದು ಹಂತದಲ್ಲಿ ಶ್ರೀರಾಮುಲು ಅವರನ್ನು ಹಿಂದುಳಿದ ವರ್ಗಗಳ ಮುಂಚೂಣಿ ನಾಯಕ ಎಂದು ಬಿಂಬಿಸಿದ್ದ ಬಿಜೆಪಿ ಈಗ ಅವರನ್ನು ದೂರ ಮಾಡುತ್ತಿರುವುದು ಕಾಣಿಸುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಅವರ ಆಪ್ತರ ಮೇಲೆ ಐಟಿ ದಾಳಿಯೂ ನಡೆದಿತ್ತು.

ಜನಾರ್ದನ ರೆಡ್ಡಿ ಅವರಿಗೆ ಪಕ್ಷದಲ್ಲೊಂದು ಸ್ಥಾನಮಾನ ಕೊಡಿಸಬೇಕು ಎಂದು ಭಾರಿ ಪ್ರಯತ್ನ ನಡೆಸಿದ್ದ ಶ್ರೀರಾಮುಲು ಅವರಿಗೆ ಹಿನ್ನಡೆ ಆಗಿತ್ತು. ಹಾಗಂತ ರೆಡ್ಡಿಯನ್ನು ಬಿಟ್ಟುಬಿಡುವ ಹಾಗೂ ಇರಲಿಲ್ಲ. ಈ ನಡುವೆ, ಜನಾರ್ದನ ರೆಡ್ಡಿ ಅವರು ಹೊಸ ಪಕ್ಷ ಸ್ಥಾಪನೆ ಮಾಡಿದಾಗ ಶ್ರೀರಾಮುಲು ದೂರ ನಿಂತರು. ಆದರೂ ಅವರು ಒಳಗಿಂದೊಳಗೆ ಬೆಂಬಲಿಸುತ್ತಿದ್ದಾರೆಯೇ ಎಂಬ ಸಂಶಯ ಬಿಜೆಪಿಗೆ ಇರುವಂತಿದೆ. ಅದೇ ಕಾರಣಕ್ಕೆ ಅವರ ಆಪ್ತರ ಮೇಲೆ ಐಟಿ ದಾಳಿ ನಡೆದಿದೆ ಎನ್ನಲಾಗುತ್ತಿದೆ.

ಇದರ ನಡುವೆಯೇ ಜನಾರ್ದನ ರೆಡ್ಡಿ ಅವರ ಕಾರ್ಯಕ್ರಮಕ್ಕೆ ಜನ ಸೇರಬೇಕು ಎಂದು ಮನವಿ ಮಾಡಿದ್ದ ಶ್ರೀರಾಮುಲು ಟ್ವೀಟ್‌ ಭಾರಿ ಸುದ್ದಿ ಮಾಡಿತ್ತು. ಆದರೆ, ಇದು ಯಾರೋ ಹ್ಯಾಕ್‌ ಮಾಡಿ ಈ ಟ್ವೀಟ್‌ ಮಾಡಿದ್ದಾರೆ ಎಂದು ರಾಮುಲು ಪೊಲೀಸರಿಗೆ ದೂರು ನೀಡಿದ್ದಾರೆ. ಕಾಂಗ್ರೆಸ್‌ ಈ ವಿಚಾರವನ್ನು ಬಳಸಿಕೊಂಡು ಬಿಜೆಪಿ ಮತ್ತು ಶ್ರೀರಾಮುಲು ಅವರನ್ನು ಕೆಣಕಿತ್ತು.

ಶ್ರೀರಾಮುಲು ಹೇಳುವುದೇನು?
ಮೋದಿ ಕಾರ್ಯಕ್ರಮಕ್ಕೆ ಗೈರಾದ ಬಗ್ಗೆ ಪ್ರತಿಕ್ರಿಯಿಸಿದ್ದ ಶ್ರೀರಾಮುಲು, ಮೋದಿ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನ ಮಾಡಿರಲಿಲ್ಲ. ಪ್ರೋಟೋಕಾಲ್‌ನಲ್ಲಿ ಯಾರೆಲ್ಲ ಭಾಗವಹಿಸಬೇಕು ಅಂತ ಇರುತ್ತದೆ. ನನಗೆ ಆಹ್ವಾನ ಇರದ ಹಿನ್ನೆಲೆ ಕಾರ್ಯಕ್ರಮಕ್ಕೆ ಗೈರಾಗಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ | Karnataka Election | ರೆಡ್ಡಿ ಪಕ್ಷದ ಕಾರ್ಯಕ್ರಮಕ್ಕೆ ಜನರನ್ನು ಆಹ್ವಾನಿಸಿ ಟ್ವೀಟ್ ಮಾಡಿದರೇ ‌ಶ್ರೀರಾಮುಲು?

Exit mobile version