Site icon Vistara News

Karnataka Election : ಜೆಡಿಎಸ್‌ ನಾಯಕ ವೆಂಕಟಶಿವಾ ರೆಡ್ಡಿ ಎಲೆಕ್ಷನ್‌ಗೆ 5 ಕೋಟಿ ಕೊಡ್ತಾರಾ ಡಾ. ಸುಧಾಕರ್‌? ಏನಿದು ಒಳಒಪ್ಪಂದದ ಆಡಿಯೊ?

Venkata Shiva reddy

#image_title

ಕೋಲಾರ: ಜೆಡಿಎಸ್‌ ಕೋಲಾರ ಜಿಲ್ಲಾಧ್ಯಕ್ಷರೂ ಆಗಿರುವ, ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಅವರು ಪದೇಪದೆ ಆರೋಗ್ಯ ಸಚಿವ ಡಾ. ಸುಧಾಕರ್‌ ಅವರನ್ನು ಭೇಟಿಯಾಗುತ್ತಿರುವುದು ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಸುಧಾಕರ್‌ ಅವರನ್ನು ಹೊಗಳುತ್ತಿರುವುದು ಜೆಡಿಎಸ್‌ ಕಾರ್ಯಕರ್ತರಿಗೆ ನುಂಗಲಾರದ ತುತ್ತಾಗಿದೆ. ಈ ನಡುವೆ, ವೆಂಕಟಶಿವಾ ರೆಡ್ಡಿ ಅವರು, ಸುಧಾಕರ್‌ ಎಲೆಕ್ಷನ್‌ಗೆ (Karnataka Election) ೫ ಕೋಟಿ ರೂ. ಕೊಡ್ತಾರೆ, ಸ್ವಲ್ಪ ಎಡ್ಜಸ್ಟ್‌ಮೆಂಟ್‌ ಮಾಡ್ಕೊಂಡು ಹೋಗೋಣ ಎಂದು ಕಾರ್ಯಕರ್ತರೊಬ್ಬರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾದ ಆಡಿಯೊ ವೈರಲ್‌ ಆಗಿರುವುದು ಇದಕ್ಕೆ ಪೂರಕವಾಗಿದೆ.

https://vistaranews.com/wp-content/uploads/2023/02/Venkata-Shivareddy-1.mp3
ವೆಂಕಟಶಿವಾರೆಡ್ಡಿ- ಜೆಡಿಎಸ್‌ ಕಾರ್ಯಕರ್ತನ ನಡುವಿನ ಮಾತುಕತೆ

ಶ್ರೀನಿವಾಸಪುರದಲ್ಲಿ ಕಳೆದ ಬಾರಿ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರ ವಿರುದ್ಧ ಸೋಲನುಭವಿಸಿದ್ದ ವೆಂಕಟಶಿವಾ ರೆಡ್ಡಿ ಅವರಿಗೆ, ರಮೇಶ್‌ ಕುಮಾರ್‌ ಅವರನ್ನು ಹೇಗಾದರೂ ಮಾಡಿ ಸೋಲಿಸಬೇಕು ಎನ್ನುವುದು ಗುರಿ. ಈ ಕಾರಣಕ್ಕಾಗಿ ಅವರು ಬಿಜೆಪಿ ಜತೆ ಕೈಜೋಡಿಸಿದ್ದಾರಾ? ಅಥವಾ ಬಿಜೆಪಿಯನ್ನೇ ಸೇರುತ್ತಾರಾ ಎನ್ನುವ ಚರ್ಚೆ ಜೋರಾಗಿತ್ತು. ಸದ್ಯ ಅವರು ಬಿಜೆಪಿ ಸೇರುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗುತ್ತಿದೆ. ಆದರೆ, ಬಿಜೆಪಿ ಅದರಲ್ಲೂ ಮುಖ್ಯವಾಗಿ ಡಾ.ಕೆ. ಸುಧಾಕರ್‌ ಅವರ ಜತೆ ಸೇರಿಕೊಂಡು ರಮೇಶ್‌ ಕುಮಾರ್‌ ಅವರನ್ನು ಸೋಲಿಸುವ ಪ್ರಯತ್ನದಲ್ಲಿದ್ದಾರೆ ಎನ್ನಲಾಗಿದೆ. ಈ ಆಡಿಯೋ ಕೂಡಾ ಅಂತಹುದೇ ಸೂಚನೆಗಳನ್ನು ನೀಡುತ್ತಿದೆ.

ಏನಿದೆ ಆಡಿಯೊದಲ್ಲಿ?
ಇದು ವೆಂಕಟಶಿವಾರೆಡ್ಡಿ ಅವರು ಜೆಡಿಎಸ್‌ ಕಾರ್ಯಕರ್ತರೊಂದಿಗೆ ಮಾತನಾಡಿರುವ ಆಡಿಯೊ. ಇದರಲ್ಲಿ ಜೆಡಿಎಸ್ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ಅವರು ಕೂಡಾ ಮಧ್ಯ ಪ್ರವೇಶ ಮಾಡಿದ್ದಾರೆ.

ʻʻನಿನ್ನೆ ನೀವು ನಡೆದುಕೊಂಡಿದ್ದು ಸರೀನಾ? ಸುಧಾಕರ್ ಜೊತೆ ಕಾಣಿಸಿಕೊಂಡಿದ್ದು ಸರೀನಾ? ಏನಣ್ಣಾ ಹೀಗಾಯ್ತು? ನೀವು ಅವರು ಚೆನ್ನಾಗಿದ್ದೀರʼʼ ಎಂದು ಎಂದು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಅವರನ್ನು ಪ್ರಶ್ನೆ ಮಾಡುತ್ತಾನೆ ಕಾರ್ಯಕರ್ತ.

ʻʻನಿಮ್ಮತ್ರ ಹಣ ಇಲ್ಲ ಅನ್ನೋದು ನನಗೂ ಗೊತ್ತಿದೆ ಅಣ್ಣಾ… ನಿಮ್ಮನ್ನ ನಾವು ದುಡ್ಡು ಕಾಸು ಕೊಡಿ ಎಂದು ಕೇಳಿದ್ದೀವಾ ಹೇಳಿ… ಆದ್ರೆ ನೀವು ಮಾಡ್ತಾ ಇರೋದು ಸರಿನಾʼʼ ಎನ್ನುವುದು ಕಾರ್ಯಕರ್ತನ ಅಳಲು ಮತ್ತು ಆಕ್ರೋಶ. ʻʻನಿಮ್ಮ ಅವರ ಸಂಬಂದ ಚೆನ್ನಾಗಿದೆ ಅಂದ್ರೆ ಚೆನ್ನಾಗಿರಿ ಅಣ್ಣಾʼʼ ಎಂದು ಕಾರ್ಯಕರ್ತ ಹೇಳುತ್ತಾನೆ.

ಆಗ ಉತ್ತರ ನೀಡುವ ವೆಂಕಟಶಿವಾರೆಡ್ಡಿ ಅವರು, ʻʻಸುಮ್ಮನಿರಪ್ಪ ಅವರು ೨೪ ಗಂಟೆ ನಮ್ಮ ಕೆಲಸ ಮಾಡಿಕೊಡ್ತಾರೆʼʼ ಎಂದು ಡಾ. ಕೆ. ಸುಧಾಕರ್‌ ಅವರನ್ನು ಹೊಗಳುತ್ತಾರೆ.

ಆಗ ಕಾರ್ಯಕರ್ತ, ʻʻಅಲ್ಲ ಅಣ್ಣಾ ನಾವೆಲ್ಲಾ ನಿಮ್ಮ ಪರವಾಗಿರುವವರು ಏನ್ ಮಾಡೋದು. ನಾವು ಸೋಷಿಯಲ್ ಮೀಡಿಯಾದಲ್ಲಿರುವವರು, ಕಾರ್ಯಕರ್ತರು ಏನ್ ಮಾಡೋದುʼʼ ಎಂದು ಪ್ರಶ್ನಿಸುತ್ತಾನೆ.

ʻʻಕಾಂಗ್ರೆಸ್‌ನವರು ಈಗಾಗಲೇ ಜೆಡಿಎಸ್‌ನ್ನು ಬಿಜೆಪಿಯ ಬಿ ಟೀಂ ಅಂತಾ ಇದ್ದಾರೆʼʼ ಎಂದಿರುವ ಕಾರ್ಯಕರ್ತ ಈ ಹೊತ್ತಿನಲ್ಲಿ ನೀವೆಲ್ಲ ಅದನ್ನು ಪ್ರೂವ್‌ ಮಾಡುತ್ತಾ ಇದ್ದೀರಿ ಎಂದು ಆಕ್ಷೇಪಿಸುತ್ತಾನೆ.

ಆಗ ಜೆಡಿಎಸ್ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ಅವರು ಫೋನ್‌ನಲ್ಲಿ ಮಾತನಾಡುತ್ತಾರೆ. ʻʻಯೇ ಅವರು ಬಿ ಟೀಂ ಅಂತಾದ್ರು ಅನ್ನಲಿ, ಪುಡುಗೋಸಿ ಅಂತಾದ್ರು ಅನ್ನಲಿ. ಸುಧಾಕರ್ ಎಲೆಕ್ಷನ್‌ಗೆ ೫ ಕೋಟಿ ರೂ. ಹಣ ಕೊಡ್ತಾರೆ ಸುಮ್ಮನಿರಯ್ಯʼʼ ಎನ್ನುತ್ತಾರೆ.

ಆಗ ಕಾರ್ಯಕರ್ತ, ʻʻನೀವು ಏನು ಬೇಕಾದ್ರೂ ಮಾಡಿಕೊಳ್ಳಿ. ಆದರೆ, ಬಹಿರಂಗವಾಗಿ ಮಾಡಿದ್ರೆ ನಮಗೆ ತೊಂದರೆಯಾಗುತ್ತದೆ. ಒಳಗಿನಿಂದಲೇ ಮಾಡಿಕೊಳ್ಳಿʼʼ ಎಂದು ಸಲಹೆ ನೀಡಿದ್ದಾರೆ.

ಸುಮಾರು ಎರಡು ಮೂಕ್ಕಾಲು ನಿಮಿಷದ ಆಡಿಯೊ ಇದಾಗಿದೆ. ಇದರ ಒಟ್ಟಾರೆ ಸಾರಾಂಶವನ್ನು ನೋಡುವುದಾದರೆ ಕಾಂಗ್ರೆಸ್‌ನ ಹಾಲಿ ಶಾಸಕರಾಗಿರುವ ರಮೇಶ್ ಕುಮಾರ್‌ಗೆ ಮಾಜಿ ಶಾಸಕರಾಗಿರುವ ವೆಂಕಟಶಿವಾ ರೆಡ್ಡಿ ಖೆಡ್ಡಾ ತೋಡಲು ತಯಾರಿ ಮಾಡಿದಂತೆ ಕಾಣುತ್ತಿದೆ. ಅರೋಗ್ಯ ಸಚಿವ ಸುಧಾಕರ್ ಜೊತೆ ಸೇರಿ ಗೇಮ್ ಪ್ಲಾನ್ ಮಾಡಿದ್ದಾರೆ ಎಂಬ ಸುದಿದ ಕೇಳಿಬರುತ್ತಿದೆ.

ಇದನ್ನೂ ಓದಿ | Karnataka Congress : ಸಚಿವ ಡಾ. ಕೆ. ಸುಧಾಕರ್‌ ವಿರುದ್ಧ ಇಡಿಗೆ ದೂರು ನೀಡಲು ಕಾಂಗ್ರೆಸ್‌ ನಿರ್ಧಾರ

Exit mobile version