ಕೊಪ್ಪಳ: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣಾ (Karnataka Election) ಕಣವು ರಂಗೇರುತ್ತಿದ್ದು, ಎಲ್ಲ ಪಕ್ಷಗಳ ರಾಜಕೀಯ ನಾಯಕರು ಪ್ರಚಾರದಲ್ಲಿ ನಿರತರಾಗಿದ್ದಾರೆ. ತಮ್ಮ ಮುಂದಿನ ಕನಸುಗಳನ್ನು ಜನರ ಮನದಲ್ಲಿ ಬಿತ್ತಲು ಮುಂದಾಗಿದ್ದಾರೆ. ಈ ನಡುವೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಕಟ್ಟಿದ್ದಲ್ಲದೆ, ಗಂಗಾವತಿಯಲ್ಲೇ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿರುವುದು ಈಗ ಹಾಲಿ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಹಾಗೂ ಕಾಂಗ್ರೆಸ್‌ನ ಟಿಕೆಟ್ ಆಕಾಂಕ್ಷಿ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರಿಗೆ ಭಯ ಹುಟ್ಟಿಸಿದೆ. ಈ ನಡುವೆ ಎರಡೂ ಪಕ್ಷಗಳ ಅನೇಕ ಕಾರ್ಯಕರ್ತರು, ಮುಖಂಡರು ರೆಡ್ಡಿ ಪಾಳಯದಲ್ಲಿ ಗುರುತಿಸಿಕೊಳ್ಳುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಮೂರೇ ತಿಂಗಳಲ್ಲಿ ಊರು ಬಿಡುವ ರೆಡ್ಡಿ- ಅನ್ಸಾರಿ
ಬೇರೆ ಬೇರೆ ಊರಿನಿಂದ ಎಂಎಲ್ಎ ಆಗಬೇಕು ಎಂದು ಬರುತ್ತಾರೆ. ಅವರ ಜತೆ ಯಾರೂ ಹೋಗಬೇಡಿ. ಅವರ ಜತೆಗೆ ಹೋದರೆ ಮೂರು ತಿಂಗಳು ಆದ ಮೇಲೆ ನಿಮ್ಮನ್ನು ಬಿಟ್ಟು ಹೋಗಿಬಿಡುತ್ತಾರೆ ಎಂದು ಕೆಆರ್‌ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ವಿರುದ್ಧ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ವಾಗ್ದಾಳಿ ನಡೆಸಿದ್ದಾರೆ.
ಕೊಪ್ಪಳ ಜಿಲ್ಲೆ ಗಂಗಾವತಿ ನಗರದಲ್ಲಿ ಪ್ರಚಾರ ಭಾಷಣ ಮಾಡಿದ ಅನ್ಸಾರಿ, ಅವರು ಊರು ಬಿಟ್ಟು ಹೋದರೆ ನಿಮಗ್ಯಾರು ದಿಕ್ಕು? ಜನರು ಯಾವುದೇ ಕಾರಣಕ್ಕೂ ದಾರಿ ತಪ್ಪಲು ಹೋಗಬೇಡಿ. ಹಣ ಕೊಡುತ್ತಾರೆ ಎಂದು ಅವರ ಹಿಂದೆ ಹೋಗಬೇಡಿ. ಯಾರೂ ಸಹ ದುಡ್ಡು ಕೊಡುವುದಿಲ್ಲ. ನಮಗೆ ಸ್ವಾಭಿಮಾನ ಮುಖ್ಯ. ಸ್ವಾಭಿಮಾನದಿಂದ ಬದುಕಿ ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ : Karnataka Tableau | ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಟ್ಯಾಬ್ಲೋಗೆ ಅವಕಾಶ!
ಇನ್ನೂ ಕೆಲ ಗಿರಾಕಿಗಳು ನಿಮ್ಮ ಮನೆಗೆ ಚಹಾ ಕುಡಿಯಲು ಬರ್ತೀವಿ ಎಂದು ಬರುತ್ತಾರೆ. ಅವರ ಬಗ್ಗೆ ಜನರು ತಲೆಕೆಡಿಸಿಕೊಳ್ಳಬೇಡಿ. ಕೆಲವರು ದುಡ್ಡು ತೆಗೆದುಕೊಂಡಿದ್ದಾರೆ. ಅವರ ಬಗ್ಗೆ ಹುಷಾರಾಗಿರಿ. ಹೀಗಾಗಿ ಗಂಗಾವತಿ ಮಗನಾದ ನನ್ನನ್ನು ಬೆಂಬಲಿಸಿ. ನಾನು ನಿಮ್ಮ ಜತೆ ಇರುತ್ತೇನೆ ಎಂದು ಅನ್ಸಾರಿ ಮತಯಾಚನೆ ಮಾಡಿದ್ದಾರೆ.
ನಾನು ಜನರಿಗೆ ತಕ್ಷಣ ಸಿಗುವೆ, ನನ್ನನ್ನೇ ಬೆಂಬಲಿಸಿ- ಪರಣ್ಣ ಮುನವಳ್ಳಿ
ಕ್ಷೇತ್ರದ ಜನ ಸ್ಥಳೀಯರಿಗೆ, ಜನರಿಗೆ ತಕ್ಷಣ ಸಿಗುವಂಥ ವ್ಯಕ್ತಿಯನ್ನು ಬೆಂಬಲಿಸುತ್ತಾರೆ. ನಾನು ಗಂಗಾವತಿ ಕ್ಷೇತ್ರದಿಂದ ಎರಡು ಬಾರಿ ಗೆಲುವು ಸಾಧಿಸಿದ್ದೇನೆ. ನಾನು ಬಿಜೆಪಿ ಟಿಕೆಟ್ ಅಪೇಕ್ಷಿತ ಅಭ್ಯರ್ಥಿಯಾಗಿದ್ದಾನೆ. ನನಗೆ ಟಿಕೆಟ್ ಕೊಡಲಿದ್ದಾರೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ.
ಬಿಜೆಪಿ ತತ್ವ ಸಿದ್ಧಾಂತದಿಂದ ಕೂಡಿರುವ ಪಕ್ಷವಾಗಿದೆ. ಅಭಿವೃದ್ಧಿ ಪರ ಜನ ಬೆಂಬಲಿಸುತ್ತಾರೆ. ಎಲ್ಲರಿಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿದೆ. ಕಾರ್ಯಕರ್ತರಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸುತ್ತೇವೆ. ನಾನು ಗಂಗಾವತಿಯಲ್ಲಿದ್ದರೆ ತಕ್ಷಣ ಎಲ್ಲರಿಗೂ ಸಿಗುತ್ತೇನೆ. ಯಾರೇ ಕರೆ ಮಾಡಿದರೂ ಸಿಗುತ್ತೇನೆ. ಎರಡು ಅವಧಿಯಲ್ಲಿ ಗಂಗಾವತಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಪಡಿಸಲಾಗಿದೆ. ಅಂಜನಾದ್ರಿ ಅಭಿವೃದ್ಧಿಗೆ 120 ಕೋಟಿ ರೂಪಾಯಿಯನ್ನು ನಮ್ಮ ಸರ್ಕಾರ ಮಂಜೂರು ಮಾಡಿದೆ. ನಾನು ಬೇರೆಯವರ ಬಗ್ಗೆ ಮಾತನಾಡಲಾರೆ. ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಮಾಡಿರುವುದು ಅವರ ವೈಯಕ್ತಿಕ ನಿರ್ಣಯವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ | Tea time | ಜೀವನದಲ್ಲೊಮ್ಮೆ ಇಂತಹ ಚಹಾಗಳ ರುಚಿ ನೋಡದಿದ್ದರೆ ಬದುಕಿದ್ದೂ ವ್ಯರ್ಥ!