ಕೊಪ್ಪಳ: ಮಾಜಿ ಸಚಿವರಾದ ಜನಾರ್ದನ ರೆಡ್ಡಿ ಬಿಜೆಪಿಯಲ್ಲೇ (karnataka Election) ಇರುತ್ತಾರೆ, ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ತಾಲೂಕಿನ ಬಸಾಪೂರ ಬಳಿಯ ಲಘು ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʻʻರೆಡ್ಡಿ ಗಂಗಾವತಿಯಲ್ಲಿ ಮನೆ ಮಾಡಿರುವುದರಿಂದ ಗೊಂದಲ ಉಂಟಾಗಿರಬಹುದು. ಯಾವ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬುದನ್ನು ಪಕ್ಷ ನಿರ್ಧರಿಸಲಿದೆʼʼ ಎಂದರು.
ʻʻಜನಾರ್ದನ ರೆಡ್ಡಿಯವರ ಮೇಲೆ ಕೆಲವೊಂದು ಕೇಸ್‌ಗಳಿರುವುದರಿಂದ ಬಿಜೆಪಿಯಲ್ಲಿ ಮತ್ತೆ ಸಕ್ರಿಯವಾಗಿ ಪಾಲ್ಗೊಳ್ಳುವುದು ವಿಳಂಬವಾಗಿದೆ. ರೆಡ್ಡಿಯವರ ಜತೆ ಈಗಾಗಲೇ ನಾನು ಮಾತನಾಡಿದ್ದೇನೆ. ಕೇಸ್ ಒಂದೊಂದೇ ಇತ್ಯರ್ಥವಾಗುತ್ತಿದ್ದು, ವರಿಷ್ಠರ ಜತೆ ಮಾತನಾಡಿ, ಅವರನ್ನು ಪಕ್ಷಕ್ಕೆ ಕರೆದು ಕೊಳ್ಳಲಾಗುವುದುʼʼ ಎಂದರು.
ʻʻಕಾಂಗ್ರೆಸ್‌ನವರು ತಮ್ಮಲ್ಲಿರುವ ಗೊಂದಲ ಬಗೆಹರಿಸಿಕೊಳ್ಳುವುದು ಬಿಟ್ಟು ಬಿಜೆಪಿ ಮೇಲೆ ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ. ನಾನು ಈಗಾಗಲೇ ಮುಖ್ಯಮಂತ್ರಿಯಾದೆ ಎಂದು ಕಾಂಗ್ರೆಸ್ ಪಕ್ಷದ ಕೆಲವರು ಹಗಲು ಕಾಣುತ್ತಿರುವುದು ಸರಿಯಲ್ಲ. ಹಗುರವಾಗಿ ಮಾತನಾಡಿದರೇ ಪ್ರಸಿದ್ಧಿ ಪಡೆಯುತ್ತೇನೆ ಎನ್ನುವ ಭ್ರಮೆಯಲ್ಲಿ ಪ್ರಿಯಾಂಕ ಖರ್ಗೆ ಇದ್ದಾರೆʼʼ ಎಂದು ವಾಗ್ದಾಳಿ ಮಾಡಿದರು.
ʻʻರಾಜ್ಯದಲ್ಲಿ ಬಿಜೆಪಿ ಗಟ್ಟಿಯಾಗಿ ನೆಲೆಯೂರುವಂತೆ ಮಾಡಿದವನಲ್ಲಿ ನಾನು ಒಬ್ಬ. ಪಕ್ಷದಲ್ಲಿ ನನ್ನನ್ನು ನಿರ್ಲಕ್ಷ್ಯ ಮಾಡುವ ಪ್ರಮೇಯವೇ ಇಲ್ಲ. ಕರ್ನಾಟಕದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ. ನಾವೆಲ್ಲ ಒಗ್ಗಟ್ಟಾಗಿದ್ದು, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲʼʼ ಎಂದರು.
ʻʻನಾನು ಮತ್ತೆ ಮುಖ್ಯಮಂತ್ರಿ ಅಭ್ಯರ್ಥಿಯಲ್ಲ. ಮುಖ್ಯಮಂತ್ರಿ ಹುದ್ದೆಗೆ ರಾಜಿನಾಮೆ ಕೊಟ್ಟು ಹೊರ ಬಂದಿರುವೆ. ಸಾಮಾನ್ಯ ಕಾರ್ಯಕರ್ತನಾಗಿದ್ದು, ಪಕ್ಷವನ್ನು ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ತರುವೆ, ವಿಜಯೇಂದ್ರಗೆ ಶಿಕಾರಿಪುರ ದಿಂದ ಸ್ಪರ್ಧೆ ಮಾಡಲು ಈಗಾಗಲೇ ಕ್ಷೇತ್ರ ಬಿಟ್ಟುಕೊಡುವುದಾಗಿ ತಿರ್ಮಾನಿಸಿದ್ದೇನೆ. ಆದರೆ, ಪಕ್ಷದ ತಿರ್ಮಾನಕ್ಕೆ ಬದ್ಧನಾಗಿರುತ್ತೇನೆʼʼ ಎಂದರು.
ಇದನ್ನೂ ಓದಿ | Karnataka Election |ಯಾವುದೇ ಭಿನ್ನಾಭಿಪ್ರಾಯ ಇಲ್ಲ, ನನ್ನನ್ನು ಮುಗಿಸೋಕೆ ಯಾರಿಂದಲೂ ಸಾಧ್ಯವಿಲ್ಲ: ಬಿಎಸ್‌ವೈ