ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಬೆಂಗಳೂರು ದಕ್ಷಿಣ ಕ್ಷೇತ್ರದ ಜೆಡಿಎಸ್ ನಾಯಕ ಪ್ರಭಾಕರ್ ರೆಡ್ಡಿ ಅವರು ಪಕ್ಷ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಆ ಮೂಲಕ ದಳಪತಿಗಳಿಗೆ ಶಾಕ್ ನೀಡಿದ್ದಾರೆ.
ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಭಾಕರ ರೆಡ್ಡಿ ಕಾಂಗ್ರೆಸ್ ಧ್ವಜ ಸ್ವೀಕರಿಸಿದರು. ಅವರ ಜತೆಗೆ ಕನಕಪುರದ ಜೆಡಿಎಸ್ ನಾಯಕ ನಾರಾಯಣ ಗೌಡ ಅವರೂ ಪಕ್ಷ ಸೇರಿದರು. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಎಂಎಲ್‌ಸಿ ಎಸ್.ರವಿ ಮತ್ತು ಕಾಂಗ್ರೆಸ್ ಮುಖಂಡ ದಿನೇಶ್ ಗೂಳಿಗೌಡ ಅವರು ಉಪಸ್ಥಿತರಿದ್ದರು.
ಪ್ರಭಾಕರ ರೆಡ್ಡಿ ಅವರು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಆದರೆ, ದಳಪತಿಗಳಿಗೇ ಶಾಕ್ ಆಗುವಂತೆ ಈಗ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡಿದ್ದಾರೆ. ಚುನಾವಣೆ ಹೊಸ್ತಿಲಲ್ಲೇ ಈ ಹೊಸ ಸೇರ್ಪಡೆ ಕಾಂಗ್ರೆಸ್‌ಗೆ ಬಲ ತುಂಬಿದಂತಾಗಿದೆ.
ಇಬ್ಬರು ನಾಯಕರನ್ನು ಪಕ್ಷಕ್ಕೆ ಆಹ್ವಾನಿಸಿದ ಬಳಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಹೊಸ ಬದಲಾವಣೆ ಕಾಣುತ್ತಿದ್ದೇವೆ. ಹಿಂದೆ ನನ್ನ ವಿರುದ್ಧ ಸ್ಪರ್ಧೆ ಮಾಡಿದ್ದ ಪಿಜಿ ಆರ್ ಸಿಂಧ್ಯಾ ಕಾಂಗ್ರೆಸ್ ಪಕ್ಷ ಸೇರಿದರು. ನನ್ನ ವಿರುದ್ಧ ಏಳು ಸಾವಿರ ಮತಗಳಿಂದ ಸೋತಿದ್ದ ವಿಶ್ವನಾಥ್ ಅವರು ಕೂಡಾ ಕಾಂಗ್ರೆಸ್ ತೆಕ್ಕೆಗೆ ಬಂದಿದ್ದಾರೆ. ಕನಕಪುರದಲ್ಲಿ ನನ್ನ ವಿರುದ್ಧ ಸ್ಪರ್ಧಿಸಿದ್ದ ನಾರಾಯಣ ಗೌಡರೂ ಪ್ರೀತಿಯಿಂದ ಪಕ್ಷಕ್ಕೆ ಬಂದಿದ್ದಾರೆ. ಅವರು ರೈತ ನಾಯಕರು, ಡಿಕೆಶಿಗೆ ಒಳ್ಳಯದಾಗಲಿ ಎಂದು ಸೇರುತ್ತಿದ್ದಾರೆ ಎಂದು ಹೇಳಿದರು.
ಇದೆಲ್ಲವೂ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ ಎನ್ನುವುದರ ಸ್ಪಷ್ಟ ಸೂಚನೆ. ನಾವು ಮಾಡುವ ಕಾರ್ಯಕ್ರಮದಲ್ಲಿ ಸೇರುತ್ತಿರುವ ಜನರೇ ಇದಕ್ಕೆ ಸಾಕ್ಷಿ. ದಕ್ಷಿಣ ಭಾರತದ ಕರ್ನಾಟಕದ ಹೆಬ್ಬಾಗಿಲು ಓಪನ್ ಆಗಲಿದೆ, 13ಕ್ಕೆ ಬಹುಮತ ಪಡೆದು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಯಾರ ಬೆಂಬಲ ಇಲ್ಲದೆ, ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ ಎನ್ನುವ ಆತ್ಮವಿಶ್ವಾಸದ ಮಾತುಗಳನ್ನು ಆಡಿದರು ಡಿ.ಕೆ. ಶಿವಕುಮಾರ್.
ಇದನ್ನೂ ಓದಿ : Karnataka Election : ಮೋದಿಜಿ ನಮ್ ಗ್ಯಾರಂಟಿ ಕಾರ್ಡ್ ನೋಡಿದ್ದಕ್ಕೆ ಥ್ಯಾಂಕ್ಸ್, ನಿಮ್ಮ ಗ್ಯಾರಂಟೀನೂ ನೋಡ್ಕೊಳ್ಳಿ ಎಂದ ಡಿಕೆಶಿ