Site icon Vistara News

Karnataka Election : ಜೆ.ಪಿ. ನಡ್ಡಾ ಮಠ ಯಾತ್ರೆ; ರಾಜ್ಯ ಚುನಾವಣೆಗೆ ಜಾತಿ ಲೆಕ್ಕಾಚಾರದ ಸೂತ್ರ

jp nadda in siddaganga ಮಠಗಳಿಗೆ ಭೇಟಿ

ಬೆಂಗಳೂರು: ರಾಜ್ಯದಲ್ಲಿ ಚುನಾವಣಾ (Karnataka Election) ಅಖಾಡ ಸಜ್ಜಾಗಿದೆ. ಬಿಜೆಪಿಯೂ ಸಹ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಹಿಂದುತ್ವದ ಜಪ ಮಾಡುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ರಾಜ್ಯದಲ್ಲಿ ೨ ದಿನಗಳ ಕಾಲ ಕೈಗೊಂಡಿರುವ ಪ್ರವಾಸದಲ್ಲಿ ಗುರುವಾರ (ಜ.೫) ಪ್ರಮುಖ ಮಠಗಳಿಗೆ ಭೇಟಿ ನೀಡಿದ್ದಾರೆ. ಇನ್ನು ಶುಕ್ರವಾರವೂ (ಜ.೬) ಹಲವು ಮಠಗಳಿಗೆ ಭೇಟಿ ನೀಡಲಿದ್ದಾರೆ. ಈ ಮೂಲಕ ನಡ್ಡಾ ಚುನಾವಣಾ ಕಾರ್ಯತಂತ್ರವನ್ನು ಹೆಣೆದಿದ್ದಾರೆ.

ತುಮಕೂರಿನಲ್ಲಿ ಶಕ್ತಿಕೇಂದ್ರದ ಪ್ರಮುಖರ ಸಭೆ ಮುಗಿಸಿದ ಜೆ.ಪಿ. ನಡ್ಡಾ ನೇರವಾಗಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಶತಾಯುಷಿ, ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದ ನಡ್ಡಾ ಅವರು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಂತರ ಸಿದ್ದಲಿಂಗ ಸ್ವಾಮೀಜಿ ಅವರನ್ನು ಭೇಟಿ ಮಾಡಿ, ಕಾಲಿಗೆ ಬಿದ್ದು ಆಶೀರ್ವಾದವನ್ನೂ ಪಡೆದುಕೊಂಡರು. ಇದೇ ವೇಳೆ ಸ್ವಾಮೀಜಿಯೊಂದಿಗೆ ಸುಮಾರು 40 ನಿಮಿಷಗಳ ಕಾಲ ಸುದೀರ್ಘ ಚರ್ಚೆಯನ್ನೂ ನಡೆಸಿದರು. ಈ ವೇಳೆ ನಡ್ಡಾಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಮಾಧುಸ್ವಾಮಿ, ಶಾಸಕರಾದ ಜ್ಯೋತಿ ಗಣೇಶ್, ಮಸಾಲೆ ಜಯರಾಮ್ ಸೇರಿದಂತೆ ಹಲವು ನಾಯಕರು ಸಾಥ್ ನೀಡಿದ್ದಾರೆ.

jp nadda in siddaganga ಮಠಗಳಿಗೆ ಭೇಟಿ

ಮಾದಾರ ಚೆನ್ನಯ್ಯ ಪೀಠಕ್ಕೆ ಭೇಟಿ
ಚಿತ್ರದುರ್ಗದಲ್ಲಿ ಮಾದಾರ ಚೆನ್ನಯ್ಯ ಪೀಠಕ್ಕೆ ಭೇಟಿ ನೀಡಿದ ಜೆಪಿ ನಡ್ಡಾ ಅವರು, ಬಸವಮೂರ್ತಿ ಮಾದಾರ ಚೆನ್ನಯ್ಯ ಶ್ರೀಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಅವರಿಗೆ ಮಹಿಳೆಯರು ಆರತಿ ಎತ್ತಿ ಸ್ವಾಗತ ಕೋರಿದರು. ಈ ವೇಳೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸಚಿವ ಗೋವಿಂದ ಕಾರಗೋಳ ಸಹ ಭಾಗಿಯಾಗಿದ್ದರು.

ಇದನ್ನೂ ಓದಿ | Earthquake In Delhi | ದೆಹಲಿಯಲ್ಲಿ ಮತ್ತೆ ಭೂಕಂಪ, ಜನರಲ್ಲಿ ಹೆಚ್ಚಿದ ಆತಂಕ

jp nadda in siddaganga ಮಠಗಳಿಗೆ ಭೇಟಿ

ಭೋವಿ ಪೀಠಕ್ಕೆ ಭೇಟಿ
ಚಿತ್ರದುರ್ಗದ ಭೋವಿ ಪೀಠಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಭೇಟಿ ನೀಡಿದ್ದು, ಇಮ್ಮಡಿ ಸಿದ್ಧರಾಮೇಶ್ವರ ಶ್ರೀ ಜತೆ ಕೆಲಕಾಲ ಸಮಾಲೋಚನೆ ನಡೆಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್‌ ಸೇರಿದಂತೆ ಶಾಸಕರಾದ ಎಂ. ಚಂದ್ರಪ್ಪ, ಗೂಳಿಹಟ್ಟಿ ಶೇಖರ್ ಜತೆಗಿದ್ದರು.

ನಾಳೆ ದಾವಣಗೆರೆಯಲ್ಲಿ ವಿವಿಧ ಮಠಗಳಿಗೆ ಭೇಟಿ
ದಾವಣಗೆರೆಗೆ ಗುರುವಾರ ರಾತ್ರಿ ಆಗಮಿಸಲಿರುವ ಜೆ.ಪಿ. ನಡ್ಡಾ, ಶುಕ್ರವಾರ (ಜ.6) ದಾವಣಗೆರೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಜತೆಗೆ ವಿವಿಧ ಮಠಗಳಿಗೆ ಭೇಟಿ ನೀಡಲಿದ್ದಾರೆ. ಹರಿಹರದ ಪಂಚಮಸಾಲಿ ಪೀಠ, ಬೆಳ್ಳೋಡಿ ಕನಕ ಗುರು ಪೀಠ, ರಾಜನಹಳ್ಳಿ ವಾಲ್ಮೀಕಿ ಗುರುಪೀಠಗಳಿಗೆ ಭೇಟಿ ನೀಡಲಿದ್ದಾರೆ.

ಜಾತಿ ಲೆಕ್ಕಾಚಾರದ ಚುನಾವಣೆ
ಸಿದ್ದಗಂಗಾ ಮಠವು ವೀರಶೈವ ಲಿಂಗಾಯತ ಧರ್ಮದ ಶಕ್ತಿ ಕೇಂದ್ರವಾಗಿದೆ. ಇಲ್ಲಿ ಈ ಸಮುದಾಯಗಳ ಅನೇಕ ನಾಯಕರು ಬದ್ಧರಾಗಿದ್ದಾರೆ. ಜನರೂ ಸಹ ಸಾಕಷ್ಟು ಸಂಖ್ಯೆಯಲ್ಲಿ ಶ್ರೀಮಠದಿಂದ ಪ್ರಭಾವಿತರಾಗಿದ್ದಾರೆ. ಇನ್ನು ಮಾದಾರ ಚೆನ್ನಯ್ಯ ಪೀಠಕ್ಕೆ ಭೇಟಿ ನೀಡುವ ಮೂಲಕ ಎಸ್‌ಸಿ ಸಮುದಾಯವನ್ನು ಸೆಳೆಯುವ ಕೆಲಸವನ್ನೂ ನಡ್ಡಾ ಮಾಡಿದ್ದಾರೆ. ಈ ಮೂಲಕ ಬಿಜೆಪಿ ಜಾತಿ ಲೆಕ್ಕಾಚಾರದ ಮೂಲಕ ಎಲ್ಲ ಸಮುದಾಯಗಳನ್ನು ಸೆಳೆಯುವ ಕಾರ್ಯಕ್ಕೆ ಬಿಜೆಪಿ ಕೈಹಾಕಿದೆ.

ಈ ಬಾರಿ ಚುನಾವಣೆಯು ಸಂಪೂರ್ಣವಾಗಿ ಮತ್ತು ನೇರವಾಗಿ ಜನ-ಜಾತಿಗಳ ಆಧಾರದ ಮೇಲೆಯೇ ನಡೆಯಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಟಿಕೆಟ್‌ ಹಂಚಿಕೆ, ಕಾರ್ಯಕ್ರಮ ಆಯೋಜನೆ, ಚುನಾವಣಾ ಪ್ರಣಾಳಿಕೆ ರೂಪಿಸುವುದು ಸೇರಿದಂತೆ ಮತ್ತಿತರ ಅಂಶಗಳ ಕೇಂದ್ರಿತವಾಗಿ ಚುನಾವಣೆಗೆ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತದೆ. ಆ ಮೂಲಕ ಜಾತಿಕೇಂದ್ರಿತವಾಗಿ ಮತ ಸೆಳೆಯಲು ಮುಂದಾಗಲಾಗುತ್ತಿದೆ. ಕಾಂಗ್ರೆಸ್‌ ಸಹ ಈಗಾಗಲೇ ರೈತರು, ಕಾರ್ಮಿಕ ವರ್ಗ ಸೇರಿದಂತೆ ಬೇರೆ ಬೇರೆ ಜಾತಿಗಳ ಸಮಾವೇಶಗಳನ್ನು ನಡೆಸುತ್ತಾ ಬಂದಿದೆ. ಸಮುದಾಯ ಕೇಂದ್ರಿತ ರಾಜಕೀಯವೇ ಈ ಚುನಾವಣೆಯಲ್ಲಿ ಮಹತ್ವವನ್ನು ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ | Reservation Politics | EWS ಆರ್ಥಿಕವಾಗಿ ಹಿಂದುಳಿದವರ ಹಕ್ಕು, ಬೇರೆಯವರಿಗೆ ಹಂಚಲಾಗದು ಎಂದ ಹಾರ್ನಹಳ್ಳಿ

Exit mobile version