Site icon Vistara News

Karnataka Election : ಮುಂದುವರಿದ ಜೆ.ಪಿ. ನಡ್ಡಾ ಮಠ ಯಾತ್ರೆ; ಸಮುದಾಯ ಆಧಾರಿತ ಮತ ಬೇಟೆ ತೀವ್ರ

kaginele guru peeta and nadda Karnataka election

ದಾವಣಗೆರೆ: ಮುಂದಿನ ಬೆರಳೆಣಿಕೆಯಷ್ಟು ತಿಂಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election) ಇರುವುದರಿಂದ ಈಗಾಗಲೇ ಅಖಾಡಕ್ಕೆ ಧುಮುಕಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ರಾಜ್ಯದಲ್ಲಿ ೨ ದಿನಗಳ ಕಾಲ ಪ್ರವಾಸ ಕೈಗೊಂಡಿದ್ದು, ವಿವಿಧ ಸಭೆ-ಸಮಾರಂಭಗಳಲ್ಲಿ ಭಾಗಿಯಾಗಿದ್ದಾರೆ. ಗುರುವಾರ (ಜ.೫) ರಾಜ್ಯದ ಪ್ರಮುಖ ಮಠಗಳಿಗೆ ಭೇಟಿ ನೀಡಿದ್ದ ಅವರ ಮಠ ಯಾತ್ರೆ ಶುಕ್ರವಾರವೂ (ಜ. ೬) ಮುಂದುವರಿದಿದೆ. ಈ ಮೂಲಕ ಪ್ರಬಲ ಸಮುದಾಯಗಳ ಮತ ಕ್ರೋಢೀಕರಣದತ್ತ ಚಿತ್ತ ನೆಟ್ಟಿದ್ದಾರೆ.

ಕನಕ ಗುರುಪೀಠಕ್ಕೆ ಭೇಟಿ
ದಾವಣಗೆರೆಯ ಬೆಳ್ಳೂಡಿ ಸಮೀಪದ ಕನಕ ಗುರುಪೀಠಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ನೀಡಿದ್ದು, ಶ್ರೀ ನಿರಂಜನಾನಂದ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಗೌರವ ಸಮರ್ಪಣೆ ಮಾಡಿದರು. ಈ ವೇಳೆ ಶ್ರೀಮಠದಲ್ಲಿ ವಿಶೇಷ ಪೂಜೆಯಲ್ಲಿ ಭಾಗಿಯಾದರು. ಶ್ರೀಗಳಿಗೆ ಗೌರವ ಸಮರ್ಪಣೆ ಮಾಡಿ ಆಶೀರ್ವಾದ ಪಡೆದುಕೊಂಡರು. ಬಳಿಕ ಶ್ರೀಗಳ ಜತೆ ಕೆಲಕಾಲ ಮಾತುಕತೆ ನಡೆಸಿದರು.

ಸಮುದಾಯದ ಜತೆ ಬಿಜೆಪಿ ನಿಲ್ಲಲಿದೆ: ನಡ್ಡಾ
ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶ್ರೀ ನಿರಂಜನಾನಂದ ಸ್ವಾಮೀಜಿ ಅವರ ಜತೆ ಮಾತುಕತೆ ನಡೆಸಿದರು. ಸಮುದಾಯದ ಜತೆ ಬಿಜೆಪಿ ಸರ್ಕಾರ ನಿಲ್ಲುವುದಾಗಿ ಭರವಸೆ ನೀಡಿದರು. ಈ ವೇಳೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಾಗಿಯಾಗಿದ್ದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಹಾವೇರಿಯನ್ನು ರಂಗೇರಿಸಿದ ಸಮ್ಮೇಳನಾಧ್ಯಕ್ಷರ ಮೆರವಣಿಗೆ

ನಡ್ಡಾ ಮೇಲೆ ಮುನಿಸಿಕೊಂಡರಾ ವಾಲ್ಮೀಕಿ ಶ್ರೀ?
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ನಡ್ಡಾ ಅವರ ಮೇಲೆ ಮುನಿಸಿಕೊಂಡಿದ್ದಾರೆಂದು ಹೇಳಲಾಗಿದೆ. ನಡ್ಡಾ ಅವರು ಮೊದಲು ವಾಲ್ಮೀಕಿ ಪೀಠಕ್ಕೆ ಆಗಮಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, ನಿಗದಿತ ಸಮಯಕ್ಕೆ ಅವರು ಬಂದಿಲ್ಲ. ಹೀಗೆ ಬರಲು ಅವರು ವಿಳಂಬ ಮಾಡಿದ್ದಕ್ಕೆ ಶ್ರೀಗಳು ಬೇಸರಗೊಂಡಿದ್ದಾರೆ. ಅದಕ್ಕಾಗಿ ನಡ್ಡಾ ಬರುವುದನ್ನು ಕಾಯದೇ ಶ್ರೀಮಠದಿಂದ ಹೊರಟು ಹೋದರು.

ಈ ಸಂದರ್ಭದಲ್ಲಿ ಮಠದಲ್ಲಿಯೇ ಇದ್ದ ಜಗಳೂರು ಶಾಸಕ ಎಸ್.ವಿ. ರಾಮಚಂದ್ರಪ್ಪ ಶ್ರೀಗಳ ಮನವೊಲಿಸಲು ಪ್ರಯತ್ನಿಸಿದ್ದಾರೆ. ಸ್ವಲ್ಪ ಸಮಯದಲ್ಲಿಯೇ ಬರುತ್ತಾರೆ ಎಂದು ಹೇಳಿದರೂ ಅಸಮಾಧಾನಗೊಂಡಿದ್ದ ವಾಲ್ಮೀಕಿ ಶ್ರೀಗಳು ಮಠದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ. ಸ್ವಾಮೀಜಿ ಇಲ್ಲದೇ ಇರುವ ವಿಚಾರ ತಿಳಿದಿದ್ದರಿಂದ ನಡ್ಡಾ ಮಠಕ್ಕೆ ಬರಲು ಹಿಂದೇಟು ಹಾಕಿದರು. ಹೀಗಾಗಿ ಪಂಚಮಸಾಲಿ ಪೀಠದತ್ತ ಪ್ರಯಾಣ ಬೆಳೆಸಿದರು.

ಮತ್ತೆ ವಾಲ್ಮೀಕಿ ಪೀಠಕ್ಕೆ ಭೇಟಿ ನೀಡಿ ಗದ್ದುಗೆ ದರ್ಶನ
ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಮುನಿಸು ಹಿನ್ನೆಲೆಯಲ್ಲಿ ಜೆ.ಪಿ.ನಡ್ಡಾ ವಾಲ್ಮೀಕಿ ಗುರುಪೀಠಕ್ಕೆ ಭೇಟಿ ನೀಡಿ, ಲಿಂಗೈಕ್ಯ ಪುಣ್ಯಾನಂದಪುರಿ ಸ್ವಾಮೀಜಿ ಗದ್ದುಗೆ ದರ್ಶನ ಪಡೆದರು. ಬಳಿಕ ಅಲ್ಲಿಂದ ತೆರಳಿದರು. ಪ್ರಸನ್ನಾನಂದಪುರಿ ಸ್ವಾಮೀಜಿ ಮಠದಿಂದ ಹೊರ ಹೋಗಿದ್ದಕ್ಕೆ ಹಲವು ಮುಖಂಡರು ಬೇಸರ ವ್ಯಕ್ತಪಡಿಸಿದರು. ಈ ಮೂಲಕ ರಾಷ್ಟ್ರ ಮಟ್ಟದ ನಾಯಕರ ಮುಂದೆ ಶಾಸಕ, ವಾಲ್ಮೀಕಿ ನಿಗಮದ ಅಧ್ಯಕ್ಷ ಎಸ್.ವಿ. ರಾಮಚಂದ್ರಪ್ಪ ಅವರಿಗೆ ಮುಖಭಂಗವಾದಂತೆ ಆಗಿದೆ.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಹಚ್ಚೇವು ಕನ್ನಡದ ದೀಪ ಎಂಬ ಇನ್ನೊಂದು ನಾಡಗೀತೆ

ಪಂಚಮಸಾಲಿ ಪೀಠಕ್ಕೆ ಭೇಟಿ
ಹರಿಹರ ತಾಲೂಕಿನ ಹೊರವಲಯದಲ್ಲಿರುವ ಪಂಚಮಸಾಲಿ ಪೀಠಕ್ಕೆ ಜೆ.ಪಿ.ನಡ್ಡಾ ಭೇಟಿ ನೀಡಿ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದುಕೊಂಡರು.

ಸಿರಿಗೆರೆ ತರಳಬಾಳು ಮಠಕ್ಕೆ ಭೇಟಿ
ಗುರುವಾರ ರಾತ್ರಿ ಸಿರಿಗೆರೆಯ ತರಳಬಾಳು ಮಠಕ್ಕೆ ನಡ್ಡಾ ಭೇಟಿ ನೀಡಿ ಡಾ‌.ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಆಶೀರ್ವಾದ ಪಡೆದರು. ಈ ವೇಳೆ ದಾವಣಗೆರೆ ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ್ ಜತೆಗಿದ್ದರು. ಅಲ್ಲಿಂದ ರಾತ್ರಿಯೇ ದಾವಣಗೆರೆಗೆ ಪ್ರಯಾಣ ಬೆಳೆಸಿದರು.

ಇದನ್ನೂ ಓದಿ | Actor Yash | ಜಗದಗಲದ ನಿರೀಕ್ಷೆಯಲ್ಲಿರುವ ನಿಮ್ಮ ಮುಂದೆ ನಿಲ್ಲಲು ಸ್ವಲ್ಪ ಸಮಯ ಕೊಡಿ: ಅಭಿಮಾನಿಗಳಿಗೆ ಯಶ್‌ ಪತ್ರ!

Exit mobile version