ಸುರತ್ಕಲ್ (ಮಂಗಳೂರು): ಮಂಗಳೂರು ಉತ್ತರ (Karnataka Election 2023) ಕ್ಷೇತ್ರದ (ಹಿಂದಿನ ಸುರತ್ಕಲ್) ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಅವರು ಭಾನುವಾರ ಹಲವಾರು ಚರ್ಚ್, ಮಂದಿರಗಳು, ದೈವದ ಸನ್ನಿಧಾನಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಕ್ಷೇತ್ರದಲ್ಲಿ ಧಾರ್ಮಿಕ, ಕೋಮು ಸೌಹಾರ್ದತೆಯನ್ನು ಕಾಯ್ದುಕೊಳ್ಳುವುದೇ ತನ್ನ ಗುರಿ ಎಂದು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಇಲ್ಲಿ ಅವರ ವಿರುದ್ಧ ಬಿಜೆಪಿಯಿಂದ ಹಾಲಿ ಶಾಸಕರೂ ಆಗಿರುವ ಭರತ್ ಶೆಟ್ಟಿ ಕಣದಲ್ಲಿದ್ದಾರೆ. ಕಾಂಗ್ರೆಸ್ ಟಿಕೆಟ್ ಸಿಗದೆ ಜೆಡಿಎಸ್‌ನಿಂದ ಕಣಕ್ಕಿಳಿದಿರುವ ಮಾಜಿ ಶಾಸಕ ಮೊಯ್ದಿನ್ ಬಾವಾ ಅವರೂ ಸ್ಪರ್ಧೆ ನೀಡುತ್ತಿದ್ದಾರೆ.
“ಸಮಾಜವನ್ನು ಒಡೆದು ಆಳುವ ಶಕ್ತಿಗಳಿಗೆ ಈ ಬಾರಿಯ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಬೇಕಿದೆ. ಕೋಮು ಸಾಮರಸ್ಯ, ಮತೀಯ ಸೌಹಾರ್ದತೆಗೆ ಒತ್ತುಕೊಟ್ಟು ಸಮಾಜವನ್ನು ಒಂದುಗೂಡಿಸುವ ಮಹತ್ವದ ಜವಾಬ್ದಾರಿ ನನ್ನ ಮೇಲಿದೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತರ ಮಧ್ಯೆ ಬೇಧಭಾವ ಕಾಣದೆ ಎಲ್ಲರನ್ನೂ ಜೊತೆಗೆ ಕರೆದೊಯ್ಯಲು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕಿದೆ” ಎಂದು ಇನಾಯತ್ ಅಲಿ ಹೇಳಿದರು.
ಅವರು ಬಂದಲೆಯಲ್ಲಿರುವ ಕಾರಣಿಕ ಕ್ಷೇತ್ರ ಶ್ರೀಮಂತ ರಾಜಗುಳಿಗ ಸನ್ನಿಧಾನಕ್ಕೆ ಭೇಟಿ ಕೊಟ್ಟು ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿ ಮಾಧ್ಯಮದ ಜೊತೆ ಮಾತಾಡಿದರು.
“ಮಂಗಳೂರು ಉತ್ತರ ಕ್ಷೇತ್ರಕ್ಕೆ ಕೋಮು ಘರ್ಷಣೆ, ಗಲಭೆ, ಅಮಾಯಕರ ಹತ್ಯೆ, ಹಲ್ಲೆ ಇತ್ಯಾದಿ ಘಟನೆಗಳು ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಹಿಂದೂ ಮುಸ್ಲಿಂ ಕ್ರೈಸ್ತರ ಮಧ್ಯೆ ಭಾವನಾತ್ಮಕ ಕೊಂಡಿ ಕಳಚಿ ಬೀಳದಂತೆ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು. ಶಾಂತಿ, ಸೌಹಾರ್ದತೆಯ ಹೊಸ ನಾಡನ್ನು ಕಟ್ಟಬೇಕು” ಎಂದರು.
ಆದಿತ್ಯವಾರ ಬೆಳಗ್ಗೆ 6:30ಯಿಂದಲೇ ಕ್ಷೇತ್ರದಾದ್ಯಂತ ಸಂಚರಿಸಿದ ಇನಾಯತ್ ಅಲಿ ಅವರು ಸುರತ್ಕಲ್ ಚರ್ಚ್, ಬೋಂದೆಲ್ ಚರ್ಚ್, ಗುರುಪುರ ಚರ್ಚ್, ಕೆಲರಾಯ್ ಚರ್ಚ್, ಪಾಲ್ದನೆ ಚರ್ಚ್, ನೀರುಮಾರ್ಗದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರಕ್ಕೆ ಭೇಟಿ ಕೊಟ್ಟು ಪ್ರಾರ್ಥಿಸಿದರು. ಬಳಿಕ ಕೋಡಿಕಲ್, ಮುಲ್ಲಕಾಡು, ಕೊಂಚಾಡಿ, ಪದವು ವಾರ್ಡ್‌ನಲ್ಲಿ ಮನೆ ಮನೆಗೆ ಭೇಟಿ ಕೊಟ್ಟು ಪ್ರಚಾರ ಕಾರ್ಯದಲ್ಲಿ ಭಾಗಿಯಾದರು.
ಇದನ್ನೂ ಓದಿ : Dakshina Kannada News: ಪ್ರವೀಣ್ ನೆಟ್ಟಾರು ಮನೆಗೆ ಜೆ.ಪಿ.ನಡ್ಡಾ ಭೇಟಿ; ಕುಟುಂಬಸ್ಥರಿಗೆ ಸಾಂತ್ವನ