Site icon Vistara News

Karnataka Election : ಎ.ಟಿ. ರಾಮಸ್ವಾಮಿ ಬಿಜೆಪಿ ಸೇರ್ಪಡೆ ವಿಚಾರ ವರಿಷ್ಠರ ಮಟ್ಟದಲ್ಲಿ ಚರ್ಚೆ ಎಂದ ಗೋಪಾಲಯ್ಯ

Gopalaiah AT Ramaswamy

#image_title

ಹಾಸನ: ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಅವರು ಜೆಡಿಎಸ್‌ ಪಕ್ಷದಿಂದ ಎರಡೂ ಕಾಲು ಹೊರಗಿಟ್ಟಿದ್ದು, ಅವರು ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅವರು ಹೇಳಿಕೆ ನೀಡಿದ್ದು, ಅವರ ಸೇರ್ಪಡೆ ವಿಚಾರ ವರಿಷ್ಠರ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದರು.

ಅರಕಲಕೂಡಿನಲ್ಲಿ ಕಳೆದ ಬಾರಿ ಎ.ಟಿ. ರಾಮಸ್ವಾಮಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದ ಎ. ಮಂಜು ಅವರು ಈಗಾಗಲೇ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ. ಅವರು ಇಲ್ಲಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಈ ನಡುವೆ, ಎ.ಟಿ. ರಾಮಸ್ವಾಮಿ ಅವರು ಬಿಜೆಪಿಗೆ ಹೋಗುತ್ತಾರೋ, ಕಾಂಗ್ರೆಸ್‌ಗೆ ಹೋಗುತ್ತಾರೋ ಎನ್ನುವ ಚರ್ಚೆ ಇತ್ತು. ಎ.ಟಿ. ರಾಮಸ್ವಾಮಿ ಅವರು ಈ ಹಿಂದೆ ಕಾಂಗ್ರೆಸ್‌ನಲ್ಲೇ ಇದ್ದವರು. ಬಳಿಕ ಜೆಡಿಎಸ್‌ ಸೇರಿದ್ದರು. ಈಗ ಮರಳಿ ಕಾಂಗ್ರೆಸ್‌ ಸೇರುವ ಸಾಧ್ಯತೆ ಕಡಿಮೆ ಇದ್ದು, ಬಿಜೆಪಿಯೇ ಪಕ್ಕಾ ಎನ್ನುವಂತಾಗಿದೆ.

ಇದನ್ನು ಸಚಿವ ಕೆ. ಗೋಪಾಲಯ್ಯ ಅವರು ದೃಢೀಕರಿಸಿದ್ದು, ಸೂಕ್ತ ಸಂದರ್ಭದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವ ಕಾರ್ಯಕ್ರಮ ಇರುತ್ತದೆ ಎಂದರು. ʻʻಯಾರಾದರೂ ಬಿಜೆಪಿ ಸೇರ್ಪಡೆ ಆಗುವವರಿದ್ದರೆ ನಾನು ವರಿಷ್ಠ ಗಮನಕ್ಕೆ ತರುತ್ತೇನೆ. ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳುವ ಸಂದರ್ಭದಲ್ಲಿ ಗೌರವವಾಗಿ ಅವರನ್ನು ಕರೆದುಕೊಳ್ಳುವ ಕೆಲಸವನ್ನು ವರಿಷ್ಠರು ಮಾಡ್ತಾರೆ.ʼʼ ಎಂದರು.

1999ರ ಫಲಿತಾಂಶ ರಿಪೀಟ್‌ ಆಗಲಿದೆ

ʻʻ1999ರಲ್ಲಿ ಹಾಸನ ಜಿಲ್ಲೆಯ ಪುಣ್ಯಾತ್ಮರು ಬಿಜೆಪಿಯನ್ನು ನಾಲ್ಕು ಸ್ಥಾನಗಳಲ್ಲಿ ಗೆಲ್ಲಿಸಿಕೊಟ್ಟಿದ್ದರು. ಈ ಬಾರಿ ಇದೇ ಫಲಿತಾಂಶ ಪುನರಾವರ್ತನೆ ಆಗುವ ವಿಶ್ವಾಸವಿದೆʼʼ ಎಂದು ಗೋಪಾಲಯ್ಯ ಹೇಳಿದರು.

ʻʻಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಆಡಳಿತ ಬಂದ ಮೇಲೆ ಭಾರತಕ್ಕೆ ವಿಶ್ವದಲ್ಲೇ ಒಂದು ವಿಶಿಷ್ಟವಾದ ಸ್ಥಾನಮಾನ ಸಿಕ್ಕಿದೆ, ಎಲ್ಲರಿಗೂ ಗೌರವ ಸಿಕ್ಕಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ನಾಯಕತ್ವದಲ್ಲಿ, ಬಸವರಾಜ ಬೊಮ್ಮಾಯಿ ನಾಯಕತ್ವದಲ್ಲಿ ಈ ಚುನಾವಣೆಯನ್ನು ಎದುರಿಸುತ್ತೇವೆʼʼ ಎಂದರು.

ʻʻಬಿಜೆಪಿಯ ಒಂಭತ್ತು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆʼʼ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ಬಗ್ಗೆ ಕೇಳಿದಾಗ, ʻʻಪದೇಪದೆ ದಯಮಾಡಿ ಕೇಳಬೇಡಿ. ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ವಿಶ್ವದಲ್ಲೇ ಅತಿದೊಡ್ಡ ಪಕ್ಷ. ನಮಗೆಲ್ಲಾ ಒಂದು ಸ್ಥಾನಮಾನವನ್ನು ಕೊಟ್ಟಿದೆ. ಮತ್ತೆ ಬಿಜೆಪಿ ಪಕ್ಷವೇ ಈ ರಾಜ್ಯದಲ್ಲಿ ಸರ್ಕಾರ ನಡೆಸುವುದು ನೂರಕ್ಕೆ ನೂರು ಸತ್ಯ. ಸ್ವಂತ ಬಲದ ಮೇಲೆ 140ಕ್ಕಿಂತ ಹೆಚ್ಚು ಸ್ಥಾನಗಳನ್ನು ಈ ಮುಂದಿನ ಚುನಾವಣೆಯಲ್ಲಿ ನಾವೇ ಗೆಲ್ತೇವೆʼʼ ಎಂದರು.

ಇದನ್ನೂ ಓದಿ: Hasana Politics : ರೇವಣ್ಣರನ್ನು ರಾವಣನಿಗೆ ಹೋಲಿಸಿದ ಬಂಡಾಯ ನಾಯಕ ಎ.ಟಿ.ರಾಮಸ್ವಾಮಿ, ಇನ್ನೂ ಏನೇನೋ ಹೇಳಿದ್ದಾರೆ!

Exit mobile version