Site icon Vistara News

Karnataka Election: ಫೆ.20ರಂದು ಮಂಡ್ಯದಲ್ಲಿ ಯುವ ಮೋರ್ಚಾದ ಮೊದಲ ಸಮಾವೇಶ: ಬಿ.ವೈ. ವಿಜಯೇಂದ್ರ

karnataka-election-Morcha conventions to start from mandya says BY Vijayendra

#image_title

ಬೆಂಗಳೂರು: ಬಿಜೆಪಿ ಹಳೆ ಮೈಸೂರು ಭಾಗಕ್ಕೆ ಒತ್ತು ಕೊಡುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ(Karnataka Election) 150 ಶಾಸಕ ಸ್ಥಾನಗಳನ್ನು ಗೆಲ್ಲಲು ಕಾರ್ಯತಂತ್ರ ರೂಪಿಸುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಬಿಜೆಪಿ ವಿವಿಧ ಮೋರ್ಚಾಗಳ ಸಮಾವೇಶಗಳ ಸಂಚಾಲಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 224 ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಮೋರ್ಚಾಗಳ ಸಮಾವೇಶ ನಡೆಸಲಾಗುತ್ತಿದೆ. ತುಮಕೂರು ಮಹಾನಗರದಲ್ಲಿ ಯುವ ಸಮಾವೇಶ ನಡೆಸಿದರೆ, ಗುಬ್ಬಿಯಲ್ಲಿ ಮಹಿಳಾ ಸಮಾವೇಶ ನಡೆಸುತ್ತೇವೆ. ತುರುವೇಕೆರೆಯಲ್ಲಿ ರೈತ ಸಮಾವೇಶ ಆದರೆ ಅಲ್ಲಿಗೆ ಜಿಲ್ಲೆಯ ಎಲ್ಲ ಕಾರ್ಯಕರ್ತರು ಬರಲಿದ್ದಾರೆ. ಮೋರ್ಚಾಗಳು ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಕೇಂದ್ರ- ರಾಜ್ಯಗಳ ಸಾಧನೆಯನ್ನು ಮನೆಮನೆಗೆ ತಲುಪಿಸಬೇಕು ಎಂದು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದ ಪ್ರತಿಯೊಂದು ಜಿಲ್ಲೆಗೆ ಸಂಚಾಲಕ, ಸಹ ಸಂಚಾಲಕರ ನೇಮಕ ಆಗಿದ್ದು, ಇವತ್ತು ಸಭೆ ನಡೆಯುತ್ತಿದೆ. ಇದೇ 16ರಂದು ಎಲ್ಲ ಮೋರ್ಚಾಗಳ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ರಾಜ್ಯದ ಚುನಾವಣೆ ಪ್ರಕ್ರಿಯೆ ಬಳಿಕ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಐತಿಹಾಸಿಕ ಗೆಲುವು ಬಿಜೆಪಿಯದ್ದಾಗಲು ನಮ್ಮೆಲ್ಲ ಮೋರ್ಚಾಗಳು ಸಕ್ರಿಯವಾಗಿ ಕೆಲಸ ಮಾಡಬೇಕು. ಮೋರ್ಚಾ ಸಮಾವೇಶಗಳು ಬಿಜೆಪಿ ಗೆಲುವಿಗೆ ಪೂರಕ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಸಭೆ ಉಪ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ಪಕ್ಷಕ್ಕೆ ಐತಿಹಾಸಿಕ ಗೆಲುವು ಲಭಿಸಿತ್ತು. ಹಳೆ ಮೈಸೂರು ಭಾಗಕ್ಕೆ ಪಕ್ಷ ಒತ್ತು ಕೊಡುತ್ತಿದೆ. ಫೆ. 20ರಂದು ಯುವ ಮೋರ್ಚಾದ ಮೊದಲ ಸಮಾವೇಶವು ಮಂಡ್ಯ ನಗರದಲ್ಲಿ ನಡೆಯಲಿದೆ. ಕೇಂದ್ರದ ನಾಯಕರು ಬರುವ ನಿರೀಕ್ಷೆ ಇದೆ. ಕೇಂದ್ರ ನಾಯಕ ಅಮಿತ್ ಶಾ ಅವರು ಈಗಾಗಲೇ ಮಂಡ್ಯ ಭಾಗಕ್ಕೆ ಬಂದು ಹೋಗಿದ್ದಾರೆ. ಇದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದೆ ಎಂದು ವಿವರಿಸಿದರು.

ಇದನ್ನೂ ಓದಿ: B.Y. Vijayendra: ಕಾಂಗ್ರೆಸ್‌ ನಾಯಕರಿಗೆ ಅಡ್ರೆಸ್‌ ಇಲ್ಲ; ನಮ್ಮವರು ವಿಶ್ವ ನಾಯಕರು: ಟೀಕೆಗೆ ಬಿ.ವೈ. ವಿಜಯೇಂದ್ರ ಪ್ರತ್ಯುತ್ತರ

50 ಲಕ್ಷ ಮತದಾರರ ಸದಸ್ಯತ್ವ ನೋಂದಣಿ
ಸಮಾವೇಶಗಳ ಮೂಲಕ 2 ಕೋಟಿ ಮತದಾರರನ್ನು ತಲುಪುವುದು, 50 ಲಕ್ಷ ಹೊಸ ಮತದಾರರನ್ನು ಸದಸ್ಯರನ್ನಾಗಿ ನೋಂದಣಿ ಮಾಡುವ ಗುರಿ ಇದೆ ಎಂದು ತಿಳಿಸಿದರು. ಪಕ್ಷದಲ್ಲಿರುವ 7 ಮೋರ್ಚಾಗಳಾದ ಯುವ ಮೋರ್ಚಾ, ಎಸ್ಸಿ ಮೋರ್ಚಾ, ಎಸ್ಟಿ ಮೋರ್ಚಾ, ಒಬಿಸಿ ಮೋರ್ಚಾ, ಮಹಿಳಾ ಮೋರ್ಚಾ, ರೈತ ಮೋರ್ಚಾ ಮತ್ತು ಅಲ್ಪಸಂಖ್ಯಾತ ಮೋರ್ಚಾಗಳನ್ನು ಸಕ್ರಿಯಗೊಳಿಸುವ ಗುರಿಯನ್ನು ಸಮಾವೇಶಗಳು ಹೊಂದಿವೆ. ಈ ಸಂದರ್ಭದಲ್ಲಿ ಪ್ರಧಾನಿಯವರ ಅಮೃತ್ ಕಾಲ್ ಯೋಜನೆಯನ್ನು ಸಾಕಾರಗೊಳಿಸಲು ಹಾಗೂ ದೇಶ ಕಾರ್ಯಕ್ಕೆ ತಮ್ಮನ್ನು ತೊಡಗಿಸಿಕೊಳ್ಳಲು ಬಯಸುವ ಯುವಜನತೆಯನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲು ತೀರ್ಮಾನಿಸಿದ್ದೇವೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು.

ಕೇಂದ್ರ ಹಾಗೂ ರಾಜ್ಯದ ಸರ್ಕಾರಗಳ ಸಾಧನೆಗಳನ್ನು ಜನತೆಯ ಮುಂದಿಡುವ ಮೂಲಕ ಅವರಿಗೆ ಅಭಿವೃದ್ಧಿಯ ವಿಚಾರವಾಗಿ ಪಕ್ಷ ಹೊಂದಿರುವ ದೂರದೃಷ್ಟಿತ್ವವನ್ನು ಮನದಟ್ಟು ಮಾಡುವುದು ನಮ್ಮ ಉದ್ದೇಶ ಎಂದರು. ಸಮಾವೇಶಗಳ ರಾಜ್ಯ ಸಹ ಸಂಚಾಲಕರಾದ ಬಿಜೆಪಿ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ ಹಾಗೂ ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

Exit mobile version