ಚಿಕ್ಕಮಗಳೂರು: ರಾಜ್ಯಾದ್ಯಂತ ಮುಸ್ಲಿಮರು ಈದ್ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಈಗ ಚುನಾವಣಾ (Karnataka Elections) ಸಮಯವೂ ಆಗಿದ್ದರಿಂದ ಕೆಲವು ರಾಜಕಾರಣಿಗಳು ಮುಸ್ಲಿಮರ ಸಾಮೂಹಿಕ ಪ್ರಾರ್ಥನೆಗಳು ನಡೆಯುವ ಈದ್ಗಾ ಮೈದಾನಕ್ಕೆ ಹೋಗಿ ಮತ ಯಾಚನೆ ಮಾಡಲು ಮುಂದಾಗಿದ್ದಾರೆ. ಕೆಲವು ಕಡೆ ಮುಸ್ಲಿಮರು ಇದನ್ನು ಸಹಜವಾಗಿ ಸ್ವೀಕರಿಸಿದ್ದಾರೆ. ಆದರೆ ಚಿಕ್ಕಮಗಳೂರಿನಲ್ಲಿ ಈ ರೀತಿ ಪ್ರಚಾರಕ್ಕೆ ಮುಂದಾದ ಕಾಂಗ್ರೆಸ್ ಅಭ್ಯರ್ಥಿಯನ್ನು ಅಲ್ಲಿ ನೆರೆದ ಯುವಕರು ಹೊರಗೆ ಕಳುಹಿಸಿದ್ದಾರೆ.
ಚಿಕ್ಕಮಗಳೂರು ನಗರದ ಕೆಇಬಿ ಸರ್ಕಲ್ ನಲ್ಲಿರುವ ಈದ್ಗಾ ಮೈದಾನದಲ್ಲಿ ಶನಿವಾರ ಬೆಳಗ್ಗೆ ಈದ್ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿತ್ತು. ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಚ್.ಡಿ. ತಮ್ಮಯ್ಯ ಅವರು ತಮ್ಮ ಕೆಲವು ಆಪ್ತರೊಂದಿಗೆ ಮೈದಾನಕ್ಕೆ ಬಂದಿದ್ದರು. ಅಲ್ಲಿ ನಮಾಜ್ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರು ಮತ ಯಾಚನೆಗೆ ಆರಂಭಿಸಿದರು.
ಇದರಿಂದ ಅಲ್ಲಿದ್ದ ಕೆಲವರು ಅದನ್ನು ಆಕ್ಷೇಪಿಸಿದರು. ಇಲ್ಲಿ ಬಂದು ಪ್ರಚಾರ ಮಾಡುವಂತಿಲ್ಲ ಎಂದು ಹೇಳಿದರು. ಆಗ ಕೆಲವರು ಕಾಂಗ್ರೆಸ್ ನಾಯಕರ ಪರ ನಿಂತರು. ಇದರಿಂದ ಮುಸ್ಲಿಮರ ಎರಡು ಗುಂಪುಗಳ ನಡುವೆ ವಾಕ್ಸಮರವೇ ಶುರುವಾಯಿತು. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ. ತಮ್ಮಯ್ಯ ಅವರು ಮೂಕ ಪ್ರೇಕ್ಷಕರಾಗಿ ನಿಂತರು.
ಕಾಂಗ್ರೆಸ್ ಮುಸ್ಲಿಮರ ಮತಗಳನ್ನೇ ಬಹುವಾಗಿ ನೆಚ್ಚಿಕೊಂಡಿದೆ. ಆದರೆ, ಅವರೇ ಈ ರೀತಿ ತಿರುಗಿ ಬಿದ್ದ ಪರಿಣಾಮವಾಗಿ ಎಚ್.ಡಿ. ತಮ್ಮಯ್ಯ ಅವರು ತೀವ್ರ ಮುಜುಗರಕ್ಕೆ ಒಳಗಾದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜೇಗೌಡ ಅವರು ಮುಸ್ಲಿಂ ಯುವಕರನ್ನು ಸಮಾಧಾನ ಮಾಡಲು ಯತ್ನಿಸಿದರಾದರೂ ಅದು ಸಫಲವಾಗಲಿಲ್ಲ. ಇದರ ನಡುವೆಯೇ ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ. ತಮ್ಮಯ್ಯ ಅಲ್ಲಿಂದ ಕಾಲ್ಕಿತ್ತಿದ್ದರು.
ಚಿಕ್ಕಮಗಳೂಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಿ.ಟಿ.ರವಿ ಅವರು ಕಣದಲ್ಲಿದ್ದರೆ, ಎಚ್.ಡಿ. ತಮ್ಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿ. ತಮ್ಮಯ್ಯ ಅವರು ಈ ಹಿಂದೆ ಬಿಜೆಪಿಯಲ್ಲಿ ರವಿ ಅವರ ಜತೆಗೇ ಇದ್ದವರು. ಈ ಬಾರಿ ಕಾಂಗ್ರೆಸ್‌ಗೆ ಜಿಗಿದು ಅಭ್ಯರ್ಥಿಯಾಗಿದ್ದಾರೆ.
ಮುಸ್ಲಿಂ ಯುವಕರಿಗೆ ಕಾಂಗ್ರೆಸ್ ಅಭ್ಯರ್ಥಿ ಮತಯಾಚನೆ ಮಾಡಿದ್ದಕ್ಕಿಂತಲೂ ಹೆಚ್ಚಾಗಿ ಒಂದು ಕಾಲದಲ್ಲಿ ತಮ್ಮ ಬಗ್ಗೆ ಅಸಮಾಧಾನ ಹೊಂದಿದ್ದ, ತಮ್ಮನ್ನು ವಿರೋಧಿಸುತ್ತಿದ್ದ ತಮ್ಮಯ್ಯ ಅವರು ಈಗ ಬಂದು ತಮ್ಮಲ್ಲೇ ಮತ ಯಾಚನೆ ಮಾಡುತ್ತಿರುವುದು ಹೆಚ್ಚು ಆಕ್ರೋಶ ಮೂಡಿಸಿದೆ ಎನ್ನಲಾಗಿದೆ.
ಇದನ್ನೂ ಓದಿ : Karnataka Election 2023: ಕಾಂಗ್ರೆಸ್ ಅಭ್ಯರ್ಥಿಗಳ ಅರ್ಜಿ ತಿರಸ್ಕರಿಸಲು ಸಿಎಂ ಕಚೇರಿಯಿಂದ ಒತ್ತಡ: ಡಿಕೆಶಿ ಗಂಭೀರ ಆರೋಪ